
ಇಂಡಿ: ‘ತಾಲ್ಲೂಕಿನ ಎಲ್ಲ ಪಿಡಿಒಗಳು, ನೀರಾವರಿ ಅಧಿಕಾರಿಗಳು ಮತ್ತು ವಿವಿಧ ಜಿ.ಪಂ, ತಾ.ಪಂ ನೀರಾವರಿ ಸಂಬಂಧಿತ ಅಧಿಕಾರಿಗಳು ಬೇಸಿಗೆಯಲ್ಲಿ ಜನ ಮತ್ತು ಜಾನುವಾರುಗೆ ಕುಡಿಯುವ ನೀರಿನ ತೊಂದರೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಆಡಳಿತ ಅಧಿಕಾರಿಗಳು ಮತ್ತು ಪಿಡಿಒಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
‘ಲಭ್ಯವಿರುವ ನೀರಿನ ಸದ್ಬಳಕೆ ಮಾಡಿಕೊಂಡು ಮುಂದೆ ಸಮಸ್ಯೆ ಆಗದಂತೆ ನೀರನ್ನು ಕಾಯ್ದಿರಿಸಿಕೊಳ್ಳಬೇಕು’ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
‘ಕಳೆದ ವರ್ಷದಲ್ಲಿ ಅಂಜುಟಗಿ, ಕೋಳುರಗಿ, ಝಳಕಿ, ಹಡಲಸಂಗ, ಬಸನಾಳ, ಚವಡಿಹಾಳ, ಚೊರಗಿ, ನಿಂಬಾಳ ಕೆಡಿ, ಚಿಕ್ಕಬೇವನೂರ, ತಡವಲಗಾ, ಸಾಲೋಟಗಿ ಇನ್ನೂ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗಿದ್ದು, ಈ ಬಾರಿ ಯಾವುದೇ ಗ್ರಾಮಕ್ಕೆ ಸಮಸ್ಯೆ ಆಗದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು’ ಎಂದರು.
‘ಪ್ರತೀ ಗ್ರಾ.ಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಖುದ್ದಾಗಿ ಪರಿಶೀಲಿಸಬೇಕು. ಎಲ್ಲಾ ಬೋರ್‌ವೆಲ್‌ಗಳ ಮಾಹಿತಿ ಕ್ರೋಢೀಕರಿಸಬೇಕು. ಚಾಲ್ತಿಯಲ್ಲಿರುವ ಬೋರ್‌ವೆಲ್‌ಗಳನ್ನು ಪರಿಶೀಲನೆ ಮಾಡಬೇಕು. ದುರಸ್ತಿ ಅವಶ್ಯಕತೆ ಇರುವ ಬೋರ್‌ವೆಲ್‌ಗಳ ದುರಸ್ತಿ ಕ್ರಮ ವಹಿಸಬೇಕು’ ಎಂದು ಸೂಚಿಸಿದರು.
ಜಿಲ್ಲಾಧಿಕಾರಿ ಕೆ. ಆನಂದ ಮಾತನಾಡಿ, ‘ಬೇಸಿಗೆಯಲ್ಲಿ ಯಾವುದೇ ನೀರಿನ ಅಭಾವವಾಗದಂತೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಬೇಕು. ನೀರಿನ ಸಮಸ್ಯೆ ಉದ್ಬವಿಸಬಹುದಾದ ಸ್ಥಳಗಳ ಕುರಿತು ಮುಂಚಿತವಾಗಿ ತಿಳಿದುಕೊಂಡು ಮಾಹಿತಿ ಸಲ್ಲಿಸಬೇಕು. ನಗರ ನೀರು ಸರಬರಾಜಿಗೆ ಸಂಬಂಧಿತ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಬೇಕು. ಗ್ರಾ.ಪಂ ಹಂತದಲ್ಲಿಯೂ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.
ಜಿ.ಪಂ ಉಪಕಾರ್ಯದರ್ಶಿ ಪ್ರಕಾಶ ವಡ್ಡರ, ಕಂದಾಯ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ತಹಶೀಲ್ದಾರ್ ಬಿ.ಎಸ್. ಕಡಕಬಾವಿ, ಡಿವೈಎಸ್‌ಪಿ ಸದಾಶಿವ ಕಟ್ಟಿಮನಿ, ಇಒ ಭೀಮಾಶಂಕರ ಕನ್ನುರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.