ಇಂಡಿ: ಜಾನುವಾರುಗಳ ಸಾಕಾಣಿಕೆಗೆ ಅನುಕೂಲವಾಗಲೆಂದು ಸರ್ಕಾರ ಜಾರಿಗೆ ತಂದಿರುವ ‘ಅನುಗ್ರಹ ಯೋಜನೆ’ ತಾಲ್ಲೂಕಿನ ರೈತರಿಗೆ ಮಾತ್ರ ಆಸರೆ ಆಗಿಲ್ಲ.
ಈ ಯೋಜನೆಯ ಅಡಿಯಲ್ಲಿ ನೈಸರ್ಗಿಕ ವಿಕೋಪಗಳಿಂದ, ಮಾರಕ ರೋಗಗಳಿಂದ, ಹಾವು ಕಡಿತದಿಂದ ಇಲ್ಲವೇ ಇನ್ನಿತರ ಆಕಸ್ಮಿಕ ಘಟನೆಗಳಿಂದ ಮೃತಪಟ್ಟ ಜಾನುವಾರುಗಳಿಗೆ ರಾಜ್ಯ ಸರ್ಕಾರ ₹10 ಸಾವಿರ ಪರಿಹಾರ ನೀಡುತ್ತಿದೆ. ಈ ಪರಿಹಾರದ ಹಣವನ್ನು ಕಳೆದ ಏಪ್ರಿಲ್ ತಿಂಗಳಿಂದ ₹15 ಸಾವಿರಕ್ಕೆ ಹೆಚ್ಚಳ ಮಾಡಿರುವುದು ರೈತರಲ್ಲಿ ಸಂತಸ ಮಾಡಿಸಿದೆ. ವಾಸ್ತವವಾಗಿ ಸರ್ಕಾರವು ಸಕಾಲದಲ್ಲಿ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡುತ್ತಿಲ್ಲ ಎನ್ನುವುದು ರೈತರ ಅಳಲು.
‘ತಾಲ್ಲೂಕಿನಲ್ಲಿ 2024-2025ನೇ ಸಾಲಿನಲ್ಲಿ ಒಟ್ಟು 210 ಜಾನುವಾರುಗಳು ಮೃತ್ಪಟ್ಟಿದ್ದು, ಅವುಗಳ ಪೈಕಿ 78 ಜಾನುವಾರುಗಳಿಗೆ ಅನುಗ್ರಹ ಯೋಜನೆಯಲ್ಲಿ ₹7.80 ಲಕ್ಷ ಪರಿಹಾರದ ಹಣ ಸಂದಾಯವಾಗಿದೆ. ಇನ್ನೂ 132 ಜಾನುವಾರಗಳ ಮಾಲೀಕರಿಗೆ ಪರಿಹಾರ ಹಣ ಬರಬೇಕಿದೆ’ ಎಂದು ಪಶು ಸಂಗೋಪನೆ ಇಲಾಖೆಯ ವೈಧ್ಯಾಧಿಕಾರಿ ಡಾ. ರಾಜಕುಮಾರ ಅಡಕಿ ತಿಳಿಸಿದರು.
ತಾಲ್ಲೂಕಿನಲ್ಲಿ ಕೆಲವು ರೈತರು ಸಹಕಾರಿ ಬ್ಯಾಂಕು, ರಾಷ್ಟ್ರೀಕೃತ ಬ್ಯಾಂಕು ಮತ್ತು ಇನ್ನಿತರ ಸಂಘ ಸಂಸ್ಥೆಗಳಲ್ಲಿ ಸಾಲ ಮಾಡಿಕೊಂಡು ಒಂದೆರಡು ಹಸುಗಳನ್ನು ಸಾಕಿಕೊಂಡು ಹೈನುಗಾರಿಕೆಯಿಂದ ಜೀವನ ಕಟ್ಟಿಕೊಂಡಿದ್ದಾರೆ. ಅಂಥವರ ಜಾನುವಾರುಗಳು ಕಳೆದ ವರ್ಷದಲ್ಲಿ ಆಕಸ್ಮಿಕವಾಗಿ ಮರಣ ಹೊಂದಿವೆ. ಅವರಿಗೆ ಇದುವರೆಗೆ ಸರ್ಕಾರದ ಅನುಗ್ರಹ ಯೋಜನೆಯ ಅಡಿಯಲ್ಲಿ ಪರಿಹಾರ ಬಂದಿಲ್ಲ. ಇದರಿಂದ ಅವರಿಗೆ ದಿಕ್ಕು ತೋಚದಂತಾಗಿದೆ.
ಪಶು ಸಂಗೋಪನಾ ಇಲಾಖೆಯ ಮಾಹಿತಿಯಂತೆ ಆಕಸ್ಮಿಕವಾಗಿ ಮೃತಪಟ್ಟ ಜಾನುವಾರುಗಳಿಗೆ ₹10 ಸಾವಿರ ನೀಡಲಾಗುತ್ತದೆ. ಆದರೆ 2024-25 ನೇ ಸಾಲಿನಲ್ಲಿ ಆಕಸ್ಮಿಕವಾಗಿ ಮರಣ ಹೊಂದಿದ ಜಾನುವಾರುಗಳಿಗೆ ಬರುವ ಪರಿಹಾರ ಧನವು ಸರ್ಕಾರದ ಮಟ್ಟದಲ್ಲಿ ಸಂಪೂರ್ಣವಾಗಿ ಬಿಡುಗಡೆಯಾಗದ ಕಾರಣ ಕೆಲವು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಈ ಅನುಗ್ರಹ ಯೋಜನೆಯ ಕೊಡುಗೆ ಕೇವಲ ಹಸು, ಎತ್ತು, ಎಮ್ಮೆಗಳಿಗೆ ಮಾತ್ರವಲ್ಲ ಆಕಸ್ಮಿಕವಾಗಿ ಮೃತಪಟ್ಟ ಕುರಿ ಹಾಗೂ ಮೇಕೆಗಳಿಗೂ ವಿತರಿಸಲಾಗುತ್ತಿದೆ. ಈ ಯೋಜನೆಯಡಿ ತಾಲ್ಲೂಕಿನಲ್ಲಿ 2024-2025 ರಲ್ಲಿ ಮೃತಪಟ್ಟಿರುವ 91 ಕುರಿಗಳಿಗೆ ಪರಿಹಾರ ಬಂದಿದೆ. 2025–2026ನೇ ಸಾಲಿನಲ್ಲಿ ಈಗಾಗಲೇ 50 ಜಾನುವಾರು ಮತ್ತು 48 ಕುರಿ ಮೇಕೆಗಳು ಮೃತಪಟ್ಟಿದ್ದು, ಹರಿಹಾರದ ಹಣ ಬರಬೇಕಿದೆ.
ಕುರಿ ಅಥವಾ ಮೇಕೆ ಎರಡು ವರ್ಷ ಕ್ಕಿಂತ ಚಿಕ್ಕದಿದ್ದರೆ ₹2,500 ಮತ್ತು ಎರಡು ವರ್ಷಕ್ಕಿಂತ ದೊಡ್ಡದಿದ್ದರೆ ₹5 ಸಾವಿರ ಪರಿಹಾರದ ಹಣ ನೀಡಲಾಗುವುದು.
ಅನುಗ್ರಹ ಯೋಜನೆಯಡಿ ಕೆಲವು ರೈತರಿಗೆ ಇನ್ನೂ ಪರಿಹಾರ ಮೊತ್ತ ತಲುಪಿಲ್ಲ. ಕೆಲವು ತಾಂತ್ರಿಕ ದೋಷಗಳಿಂದ ಪರಿಹಾರ ಸ್ಥಗಿತಗೊಂಡಿದೆಡಾ. ರಾಜಕುಮಾರ ಅಡಕಿ, ಪಶು ಇಲಾಖೆಯ ಹಿರಿಯ ವೈದ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.