ಚುನಾವಣೆ
(ಸಾಂದರ್ಭಿಕ ಚಿತ್ರ)
ಸಿಂದಗಿ: ಪಟ್ಟಣದ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೇ 28 ರಂದು ಮಧ್ಯಾಹ್ನ 1 ಗಂಟೆಗೆ ಚುನಾವಣೆ ನಡೆಯಲಿದೆ. ಅಧ್ಯಕ್ಷ ಸ್ಥಾನ ಮತ್ತು ಉಪಾಧ್ಯಕ್ಷ ಸ್ಥಾನಗಳೆರಡೂ ಸಾಮಾನ್ಯ ವರ್ಗ ಮೀಸಲಿದೆ.
ಅಧ್ಯಕ್ಷ ಸ್ಥಾನಕ್ಕೆ 13ನೇ ವಾರ್ಡ್ ಸದಸ್ಯ ಡಾ.ಶಾಂತವೀರ ಮನಗೂಳಿ, 6ನೇ ವಾರ್ಡ್ ಸದಸ್ಯ ಹಣಮಂತ ಸುಣಗಾರ ಹಾಗೂ 9ನೇ ವಾರ್ಡ್ ಸದಸ್ಯ ಹಾಸೀಂಪೀರ ಆಳಂದ ಸ್ಪರ್ಧಿಸಲು ಅಣಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಏಪ್ರಿಲ್ 16 ರಂದು ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಮತ್ತು ಉಪಾಧ್ಯಕ್ಷ ರಾಜಣ್ಣ ನಾರಾಯಣಕರ ವಿರುದ್ದ ಅವಿಶ್ವಾಸ ಗೊತ್ತುವಳಿ ಮಂಡನೆ ಸಭೆ ಜರುಗಿತ್ತು. ಈ ಕುರಿತು ಹೈಕೋರ್ಟ್, ಸುಪ್ರಿಂ ಕೋರ್ಟ್ ಕಟೆಕಟೆ ಏರಲಾಗಿತ್ತು. ಕೊನೆಗೆ ಅವಿಶ್ವಾಸ ಗೊತ್ತುವಳಿ ಅಂಗೀಕಾರವನ್ನು ಎತ್ತಿ ಹಿಡಿದ ಆದೇಶ ಹೊರ ಬಂದಿದ್ದರಿಂದ ಈಗ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗಾಗಿ ಚುನಾವಣೆ ನಡೆಯಲಿದೆ.
ಡಾ.ಶಾಂತವೀರ ಮನಗೂಳಿ 2020 ನವೆಂಬರ್ 3 ರಿಂದ 2023 ಫೆಬ್ರುವರಿ 23 ರವರೆಗೆ ಪುರಸಭೆ ಅಧ್ಯಕ್ಷರಾಗಿ ಅಧಿಕಾರ ನಡೆಸಿದ್ದಾರೆ. ಹೀಗಾಗಿ ಅವರಿಗೆ ಅಧ್ಯಕ್ಷ ಸ್ಥಾನದ ಬಗ್ಗೆ ಅಷ್ಟಾಗಿ ಒಲವು ಇಲ್ಲದಿರುವುದು ಬಹುತೇಕ ಸದಸ್ಯರಿಗೆ ಗೊತ್ತಿದೆ. ಆದಾಗ್ಯೂ ಅವರೇ ಅಧ್ಯಕ್ಷರಾಗಬೇಕೆಂಬ ಸದಸ್ಯರ ಹಾಗೂ ರಾಜಕೀಯ ಒತ್ತಡ ಹೆಚ್ಚಿದ್ದರಿಂದ ಅವರು ಅಧ್ಯಕ್ಷರಾಗಲು ಒಪ್ಪಬಹುದು. ಆದರೆ, ಅವರು ಹಿಂದೆ ಸರಿದರೆ ಮಾತ್ರ 2023 ಮಾರ್ಚ್ 6 ರಿಂದ 2023 ಮೇ 8 ರವರೆಗೆ ಮೂರು ತಿಂಗಳು ಅಧ್ಯಕ್ಷರಾಗಿದ್ದ ಹಣಮಂತ ಸುಣಗಾರರಿಗೆ ಅವಕಾಶ ಸಿಗಬಹುದಾಗಿದೆ.
ಒಂದು ತಿಂಗಳು (2023 ಫೆಬ್ರುವರಿ23 ರಿಂದ ಮಾರ್ಚ್ 5 ರವರೆಗೆ) ಮಾತ್ರ ಹಂಗಾಮಿ ಅಧ್ಯಕ್ಷರಾಗಿದ್ದ ಹಾಸೀಂಪೀರ ಆಳಂದ ಕೂಡ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವುದಾಗಿ ಪ್ರತಿಕ್ರಿಯಿಸಿದ್ದಾರೆ.
17ನೇ ವಾರ್ಡ್ ಸದಸ್ಯ ಸಂದೀಪ ಚೌರ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ನವೆಂಬರ್‌ನಲ್ಲಿ ಪುರಸಭೆ ಅವಧಿ ಪೂರ್ಣಗೊಳ್ಳಲಿದ್ದು, ಎಲ್ಲ 23 ವಾರ್ಡುಗಳಿಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ.
23 ಸದಸ್ಯರು, ಮತಕ್ಷೇತ್ರದ ಶಾಸಕರು ಹಾಗೂ ವಿಜಯಪುರ ಸಂಸದರು ಚುನಾವಣೆಗೆ ಮತ ಚಲಾಯಿಸಬಹುದಾಗಿದೆ. ಆದರೆ ಶಾಸಕರು, ಸಂಸದರು ಚುನಾವಣೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ತುಂಬಾ ಕಡಿಮೆ ಎನ್ನಲಾಗಿದೆ.
ಏಪ್ರಿಲ್ 16 ರಂದು ನಡೆದ ಅವಿಶ್ವಾಸ ಗೊತ್ತುವಳಿ ಮಂಡನೆ ಸಭೆಗೆ ನನ್ನನ್ನು ಉದ್ದೇಶಪೂರ್ವಕವಾಗಿ ಗೈರು ಉಳಿಸಿ ನನ್ನ ಮತದಾನದ ಹಕ್ಕುಚ್ಯುತಿಗೊಳಿಸಿದವರ ಪರ ಮತದಾನ ಮಾಡುವದಿಲ್ಲ ಎಂದು 22ನೇ ವಾರ್ಡ್ ಸದಸ್ಯ ಶರಣಗೌಡ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.