ADVERTISEMENT

ಡಿ.6ರಿಂದ ರೇವಣಸಿದ್ಧೇಶ್ವರ ಜಾತ್ರೆ

108 ಅಡಿ ಎತ್ತರದ ಶಿವಲಿಂಗ ನಿರ್ಮಾಣ ಕಾರ್ಯಾರಂಭ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2019, 19:45 IST
Last Updated 4 ಡಿಸೆಂಬರ್ 2019, 19:45 IST
ರೇವಣಸಿದ್ಧೇಶ್ವರರು
ರೇವಣಸಿದ್ಧೇಶ್ವರರು   

ಹೊರ್ತಿ (ವಿಜಯಪುರ ಜಿಲ್ಲೆ): ಗ್ರಾಮದ ಆರಾಧ್ಯದೈವ ರೇವಣಸಿದ್ಧೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಬೃಹತ್ ಜಾನುವಾರುಗಳ ಪ್ರದರ್ಶನ, ಮಾರಾಟ ಜಾತ್ರೆಯು ಡಿ.6 ರಿಂದ 12ರ ವರೆಗೆ ನಡೆಯಲಿದೆ.

ಡಿ.6ರಂದು ಎಲ್ಲ ಶಿವಲಿಂಗಗಳಿಗೆ ಎಣ್ಣೆ ಮಜ್ಜನ ಮತ್ತು ಅಭಿಷೇಕ, ಅಂದು ರಾತ್ರಿ 8 ಗಂಟೆಗೆ ಮಸಳಿ, ನಾಗಣಸೂರ ಮತ್ತು ಕೊಳೂರಗಿ ಗ್ರಾಮಗಳ ಪಲ್ಲಕ್ಕಿ, ನಂದಿಕೋಲಗಳ ಸಮೇತ ರೇವಣಸಿದ್ಧೇಶ್ವರ ದೇಗುಲಕ್ಕೆ ದೇವರ ಭೇಟಿ ಕಾರ್ಯಕ್ರಮ ನಡೆಯಲಿದೆ.

ಗುಡ್ಡ ಏರುವ ಕಾರ್ಯಕ್ರಮ: ಡಿ.7ರ ರೇವತಿ ನಕ್ಷತ್ರದಂದು ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆವರೆಗೆ ಅಭಿಷೇಕ ಹಾಗೂ ಭಕ್ತ ಜನರ ಜವಳ ತೆಗೆಯುವ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 3 ರಿಂದ 6 ಗಂಟೆವರೆಗೆ ವಿವಿಧ ಕಲಾ ತಂಡಗಳು, ನಂದಿಕೋಲ ಹಾಗೂ ಪಲ್ಲಕ್ಕಿಗಳೊಂದಿಗೆ ದೇವರು ಗುಡ್ಡ ಏರಿ ಗುಡ್ಡದ ಮಾಳಮ್ಮ ದೇವಿಗೆ ದರ್ಶನ ನೀಡಿ, ಮರಳಿ ರೇವಣಸಿದ್ಧೇಶ್ವರ ಹಳೆ ಗುಡಿಗೆ ಬರಲಿದ್ದು, ನಂತರ ಊರಲ್ಲಿನ ಹೊಸ ಗುಡಿಗೆ ಬರಲಿವೆ. ರಾತ್ರಿ 10 ಗಂಟೆಗೆ ಗೀಗೀ ಪದಗಳು ಜರುಗಲಿವೆ.

ADVERTISEMENT

ಡಿ.8 ರಂದು ಮಧ್ಯಾಹ್ನ 3 ಗಂಟೆಗೆ ಜಂಗಿ ನಿಕಾಲಿ ಕುಸ್ತಿಗಳು ಜರುಗಲಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ನಂತರ ರೇವಣಸಿದ್ಧೇಶ್ವರ ಪಲ್ಲಕ್ಕಿ, ನಂದಿಕೋಲ ಉತ್ಸವ ಸಮೇತ ಗಣಪತಿ ದೇವಸ್ಥಾನಕ್ಕೆ ತೆರಳಿ, ಅಲ್ಲಿ ಮದ್ದು ಸುಡುವರು. ರಾತ್ರಿ 10 ಗಂಟೆಗೆ ಡೊಳ್ಳಿನ ಪದಗಳು ಜರುಗಲಿವೆ.

ಡಿ.9ರಂದು ಬೆಳಿಗ್ಗೆ 10 ಗಂಟೆಗೆ ‘ಉತ್ತಮ ದನ ಹಾಗೂ ರಾಸುಗಳ’ ಆಯ್ಕೆ ನಡೆಯಲಿದೆ.ರಾತ್ರಿ 10 ಗಂಟೆಗೆ ಡೊಳ್ಳಿನ ಪದಗಳು ನಡೆಯಲಿವೆ.

ಡಿ.10ರ ಸಂಜೆ 4 ಗಂಟೆಗೆ ‘ಉತ್ತಮ ದನ’ಗಳಿಗೆ ಬಹುಮಾನ ವಿತರಿಸಲಾಗುವುದು.ರಾತ್ರಿ 10 ಗಂಟೆಗೆ ಬಯಲಾಟ ನಡೆಯಲಿದೆ. ಡಿ.11ರಂದು ಜಾತ್ರೆ ಮುಂದುವರಿಯಲಿದ್ದು, ಡಿ.12ರಂದು ಹೊಸ್ತಿಲ ಹುಣ್ಣಿಮೆ ದಿನ ದೇವರ ಉತ್ಸವವು ಹನುಮಾನ ದೇವಸ್ಥಾನದ ವರೆಗೆ ಸಾಗಿ, ಜಾತ್ರೆ ಮುಕ್ತಾಯಗೊಳ್ಳಲಿದೆ. ಪ್ರತಿದಿನ ಅನ್ನಪ್ರಸಾದ ವ್ಯವಸ್ಥೆ ಇರುತ್ತದೆ ಎಂದು ದೇವಸ್ಥಾನದ ಅಧ್ಯಕ್ಷ ಅಣ್ಣಪ್ಪ ಎಸ್.ಖೈನೂರ ತಿಳಿಸಿದ್ದಾರೆ.

ಮಾಹಿತಿಗೆ 94821 05701, 99869 57918 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.