ADVERTISEMENT

ಜಿಗಜಿಣಗಿ–ಯತ್ನಾಳ ವಿರುದ್ಧ ಗಣಿಹಾರ ವಾಗ್ದಾಳಿ

’ಅವಿವೇಕಿಗಳನ್ನು ಮೆಚ್ಚಿಸಲಿಕ್ಕಾಗಿ ಬಿಜೆಪಿ ಸಚಿವ–ಶಾಸಕನಿಂದ ರಾಹುಲ್‌ ಬಗ್ಗೆ ಕಟು ಟೀಕೆ‘

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 15:52 IST
Last Updated 31 ಆಗಸ್ಟ್ 2018, 15:52 IST
ಎಸ್‌.ಎಂ.ಪಾಟೀಲ ಗಣಿಹಾರ
ಎಸ್‌.ಎಂ.ಪಾಟೀಲ ಗಣಿಹಾರ   

ವಿಜಯಪುರ:‘ಅವಿವೇಕಿ ಪ್ರಧಾನಿ ನರೇಂದ್ರ ಮೋದಿ, ಸರ್ವಾಧಿಕಾರಿ ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಮೆಚ್ಚುಗೆ ಪಡೆಯಲಿಕ್ಕಾಗಿ ಕೇಂದ್ರ ಸಚಿವ ರಮೇಶ ಜಿಗಜಿಣಗಿ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಬಗ್ಗೆ ಟೀಕೆ ಮಾಡುತ್ತಿದ್ದಾರೆ’ ಎಂದು ಕೆಪಿಸಿಸಿ ವಕ್ತಾರ ಎಸ್‌.ಎಂ.ಪಾಟೀಲ ಗಣಿಹಾರ ದೂರಿದರು.

‘ಮೋದಿಯ ಅವಿವೇಕತನ ನೋಟ್‌ ಬ್ಯಾನ್‌ ನಿರ್ಧಾರದಲ್ಲೇ ಜಗಜ್ಜಾಹೀರುಗೊಂಡಿದೆ. ಮೋದಿ–ಷಾ ಜೋಡಿಯಿಂದ ದೇಶ ಇದೀಗ ಅಘೋಷಿತ ತುರ್ತು ಪರಿಸ್ಥಿತಿ ಎದುರಿಸುತ್ತಿದೆ’ ಎಂದು ಶುಕ್ರವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಬಹಿರಂಗ ವೇದಿಕೆ ನಿರ್ಮಿಸಲಿದ್ದೇವೆ. ಜಿಗಜಿಣಗಿ ಇಲ್ಲಿಗೆ ಬಂದು ತಮ್ಮ ಸಾಧನೆ ಏನು ಎಂಬುದನ್ನು ಜಗಜ್ಜಾಹೀರುಗೊಳಿಸಲಿ. ಮೋದಿ, ಷಾ, ಆರ್‌ಎಸ್‌ಎಸ್‌ ಮೆಚ್ಚಿಸಲಿಕ್ಕಾಗಿ ಮಿತಭಾಷಿಯಾಗಿದ್ದ ಕೇಂದ್ರ ಸಚಿವರು ಇದೀಗ ಸುಳ್ಳು ಹೇಳಲಾರಂಭಿಸಿದ್ದಾರೆ. ಕೀಳು ಭಾಷೆ ಬಳಸುತ್ತಿದ್ದಾರೆ’ ಎಂದು ಗಣಿಹಾರ ಹರಿಹಾಯ್ದರು.

ADVERTISEMENT

ಯತ್ನಾಳ ಜೈಲಲ್ಲಿರಬೇಕು:‘ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಶಾಸಕ ಸ್ಥಾನಮಾನದ ಗೌರವ ಕಳೆಯುತ್ತಿದ್ದಾರೆ. ಪೂರ್ತಿ ಹುಚ್ಚರಾಗಿದ್ದಾರೆ. ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರು ಜೈಲಲ್ಲಿರಬೇಕು’ ಎಂದು ಗಣಿಹಾರ ಗುಡುಗಿದರು.

‘ಈ ಹಿಂದಿನ ಅವಧಿಗಿಂತ ಈ ಬಾರಿಯ ಬಕ್ರೀದ್‌ನಲ್ಲೇ ಹೆಚ್ಚು ಗೋಹತ್ಯೆ ನಡೆದಿವೆ. ಮುಸ್ಲಿಮರು ಇಂಥ ನೂರಾರು ಯತ್ನಾಳರನ್ನು ಕಂಡಿದ್ದಾರೆ. ಯಾರಿಗೂ ಅಂಜಿ ಬದುಕುತ್ತಿಲ್ಲ. ಬದುಕುವುದು ಇಲ್ಲ. ತಮ್ಮ ಧರ್ಮ ಪಾಲನೆಯನ್ನು ನಡೆಸಿದ್ದಾರೆ’ ಎಂದು ಹೇಳಿದರು.

‘ಯತ್ನಾಳ 15 ವರ್ಷದಿಂದ ಗೋಶಾಲೆ ನಡೆಸುತ್ತಿದ್ದಾರೆ. ಇಲ್ಲಿ ಸತ್ತ ಗೋವುಗಳನ್ನು ಏನು ಮಾಡಿದರು. ಎಲ್ಲೆಲ್ಲಿಯ ಗೋವು ತಂದು ಸಾಕಿದ್ದಾರೆ. ಅನುದಾನ ಬಂದ ವಿವರವನ್ನು ಬಹಿರಂಗವಾಗಿ ಲೆಕ್ಕ ನೀಡಲು ಮುಂದಾಗಲಿ’ ಎಂದು ಎಸ್‌.ಎಂ.ಪಾಟೀಲ ಇದೇ ಸಂದರ್ಭ ಆಗ್ರಹಿಸಿದರು.

‘ಕೇರಳದಲ್ಲಿ ಆಕಳ ಕಡಿದಿದ್ದಕ್ಕೆ ಪ್ರವಾಹ ಬಂತಾ ? ನೀವು ಹೀಗೆ ಹೇಳಿದರೇ ನಾವು ಗುಜರಾತ್‌ನಲ್ಲಿ ಮೋದಿ ಈ ಹಿಂದೆ ಮುಖ್ಯಮಂತ್ರಿಯಾಗಿದ್ದಕ್ಕೆ ಭೂಕಂಪನವಾಗಿ ಸಹಸ್ರ, ಸಹಸ್ರ ಮಂದಿ ಸತ್ತರು ಎನ್ನುತ್ತೇವೆ. ಇಂತಹ ಅಸಂಬದ್ಧ, ಅವಿವೇಕಿತನದ ಹೇಳಿಕೆ ನೀಡುವುದನ್ನು ಇನ್ನಾದರೂ ನಿಲ್ಲಿಸಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.