ADVERTISEMENT

ಮಾತೆಯರಲ್ಲಿ ಪುಳಕ–ಚಿಣ್ಣರಿಗೆ ತುತ್ತಿನ ತವಕ..!

ಅವ್ವನ ಕೈ ತುತ್ತು ಸವಿದರು..; ಪಾದ ತೊಳೆದು ಪೂಜಿಸಿದರು...

ಡಿ.ಬಿ, ನಾಗರಾಜ
Published 25 ಡಿಸೆಂಬರ್ 2018, 19:56 IST
Last Updated 25 ಡಿಸೆಂಬರ್ 2018, 19:56 IST
ಕಂದನಿಗೆ ಕೈ ತುತ್ತು ತಿನ್ನಿಸುವ ಸಂದರ್ಭ ತಾಯಿಯ ಸೆಲ್ಫಿ ಕ್ರೇಜ್‌
ಕಂದನಿಗೆ ಕೈ ತುತ್ತು ತಿನ್ನಿಸುವ ಸಂದರ್ಭ ತಾಯಿಯ ಸೆಲ್ಫಿ ಕ್ರೇಜ್‌   

ಕಗ್ಗೋಡ:108 ದೇವತೆಯರು ಆಸೀನರಾಗಿದ್ದರು. ಇವರಿಂದ ಕೈ ತುತ್ತು ತಿನ್ನಿಸಿಕೊಳ್ಳಲು ದೇವ ಕಂದರೂ ಕಾತರದಿಂದ ಕಾದಿದ್ದರು. ಅಷ್ಟ ಲಕ್ಷ್ಮೀಯರು ಇಲ್ಲಿದ್ದರು. ಬಾಲ ವಿವೇಕಾನಂದ, ಕೃಷ್ಣ, ಸಾಧು–ಸಂತರು, ಬಾಲ ಶರಣರ ಪಡೆಯೇ ನೆರೆದಿತ್ತು. ಇದಕ್ಕೆ ಪೂರಕವಾಗಿ ಮಾತೆಯರು ದೇವತೆಯರ ವೇಷಧಾರಿಗಳಾಗಿ ಕಂಗೊಳಿಸಿದರು. ಶಿವಾಜಿ–ಜೀಜಾ ಮಾತೆ ವೇಷಧಾರಿಗಳು ಇದ್ದರು.

ಮಾತೃ ಸಂಗಮದ ಅಂಗವಾಗಿ ಭಾರತ ವಿಕಾಸ ಸಂಗಮ ಆಯೋಜಿಸಿದ್ದ ‘ಮಾತೆಯರಿಂದ ಬಾಲ ಭೋಜನ’ ಕಾರ್ಯಕ್ರಮದಲ್ಲಿ ಗೋಚರಿಸಿದ ಚಿತ್ರಣವಿದು.

ಮಾತೆಯರು ತಮ್ಮ ಮನೆಗಳಿಂದಲೇ ಚಿತ್ರಾನ್ನ–ಮೊಸರನ್ನದ ಬುತ್ತಿ ಹೊತ್ತು ತಂದಿದ್ದರು. ಇದರ ಜತೆಗೆ ವಿಜಯಪುರದ ಜ್ಞಾನಯೋಗಾಶ್ರಮದ ಅಕ್ಕನ ಬಳಗ, ಓಂ ಶಾಂತಿ, ಬುರಣಾಪುರದ ಯೋಗೇಶ್ವರಿ ಮಾತಾಜಿ ಬಳಗ, ರಾಮಕೃಷ್ಣಾಶ್ರಮ ಸೇರಿದಂತೆ ವಿವಿಧ ಸಂಘಟಕರು ಸಹ ಬಾಲ ಭೋಜನಕ್ಕೆ ಚಿತ್ರಾನ್ನ–ಮೊಸರನ್ನ ಪೂರೈಸಿದ್ದರು.

ADVERTISEMENT

ಇಲ್ಲಿ ಜಾತಿ, ಮತ, ಧರ್ಮ, ಪಂಥದ ಭೇದವಿರಲಿಲ್ಲ. ಎಲ್ಲ ಸಮಾಜದ ಜನರು, ಜಾತಿ–ವರ್ಗದ ಜನರು ಭಾಗಿಯಾಗಿದ್ದರು. ತಮ್ಮ ತಮ್ಮ ವೇಷಭೂಷಣಗಳಿಂದ ಚಿಣ್ಣರ ಸಮೂಹ ಕಂಗೊಳಿಸುತ್ತಿತ್ತು. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ನೆರೆದಿತ್ತು. ವಿಜಯಪುರ, ಬಾಗಲಕೋಟೆ, ಹೈದರಾಬಾದ್‌ ಕರ್ನಾಟಕದ ಬೀದರ್‌, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ ಜಿಲ್ಲೆಗಳ ತಾಯಂದಿರು–ಚಿಣ್ಣರು ಬಾಲ ಭೋಜನದಲ್ಲಿ ಭಾಗಿಯಾಗಿದ್ದರು.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಮಾರಂಭಕ್ಕೆ ಚಾಲನೆ ನೀಡಿ ತೆರಳಿದ ಬಳಿಕ, ವಿವಿಧ ಶ್ರೀಗಳು ತಾಯಿಯ ಮಹತ್ವದ ಕುರಿತು ಆಶೀರ್ವಚನ ನೀಡುವ ಹೊತ್ತಲ್ಲೇ; ಹಸಿವಿನಿಂದ ಅಮ್ಮ, ಅಮ್ಮ ಎಂದು ಕೂಗಿದ ಕಂದನ ಹಸಿವನ್ನು ಬಾಲ ಭೋಜನಕ್ಕೂ ಮುನ್ನವೇ ಬಹುತೇಕ ತಾಯಂದಿರು ನೀಗಿಸಿದ್ದು ವಿಶೇಷವಾಗಿ ಗೋಚರಿಸಿತು. ಇದೇ ಸಂದರ್ಭ ಕರ್ತವ್ಯದ ಕರೆ ನಿಭಾಯಿಸಲು ಬಂದಿದ್ದ ಮಹಿಳಾ ಪೊಲೀಸರು ತಮ್ಮ ಕಂದಮ್ಮಗಳಿಗೆ ಬಾಲ ಭೋಜನ ಮಾಡಿಸಿದ್ದು ಗಮನ ಸೆಳೆಯಿತು.

ಅನಾಥ ಮಕ್ಕಳಿಗೂ ‘ಮಾತೆಯರು ಬಾಲ ಭೋಜನದ ಕೈ ತುತ್ತು ನೀಡಿದರು. ವಿಜಯಪುರ, ಬಾಗಲಕೋಟೆ ಜಿಲ್ಲೆಯ ವಿವಿಧ ಅನಾಥಾಶ್ರಮಗಳ ಮಕ್ಕಳು ಸಮಾರಂಭದಲ್ಲಿ ನೆರೆದು, ತಾಯಿ ನೀಡುವ ತುತ್ತಿನ ಸವಿ ಅನುಭವಿಸಿದರು. ಪೋಷಕರನ್ನು ಬಿಟ್ಟು, ಅಂಧರ ವಸತಿ ಶಾಲೆಗಳಲ್ಲಿ ನೆಲೆಸಿರುವ ಅಂಧರು ಸಹ ತಾಯಿ ತುತ್ತಿನ ಸವಿ ಸವಿದರು. ಈ ದೃಶ್ಯ ಮನ ಕಲುಕಿತು.

ವಿಜಯಪುರ, ಬಾಗಲಕೋಟೆ ಜಿಲ್ಲೆಯ ನಗರ, ಪಟ್ಟಣ, ಗ್ರಾಮೀಣ ಪ್ರದೇಶದ 150ಕ್ಕೂ ಹೆಚ್ಚು ಖಾಸಗಿ, ಸರ್ಕಾರಿ ಶಾಲೆಗಳ ಶಿಕ್ಷಕ ಸಮೂಹ ಸಹ ಮಾತೆಯರಿಂದ ಬಾಲ ಭೋಜನ ಕಾರ್ಯಕ್ರಮಕ್ಕಾಗಿ ಮಕ್ಕಳು, ಮಾತೆಯರನ್ನು ದೂರದ ಊರುಗಳಿಂದ ತಮ್ಮ ತಮ್ಮ ಸಂಸ್ಥೆಯ ವಾಹನಗಳಿಂದ ಕರೆ ತಂದಿದ್ದು ಗೋಚರಿಸಿತು.

**

ಈಚೆಗಿನ ದಿನಗಳಲ್ಲಿ ವಿದೇಶಿ ಸಂಸ್ಕೃತಿಗೆ ಮೊರೆ ಹೊಕ್ಕು, ಭಾರತೀಯತೆ ಮರೆಯುವುದು ಹೆಚ್ಚಿದೆ. ತಾಯಿ–ಮಗುವಿನ ಬಾಂಧವ್ಯ ಗಟ್ಟಿಗೊಳಿಸಲು ಮಾತೃ ಸಂಗಮ ಸಹಕಾರಿಯಾಗಿದೆ.
–ಪಲ್ಲವಿ ಪಾಟೀಲ ಸೇಡಂ, ಸಂಘಟಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.