ವಿನಯಕುಮಾರ ಸೊರಕೆ
ವಿಜಯಪುರ: ‘ಧರ್ಮಸ್ಥಳದ ವಿರುದ್ಧ ಧ್ವನಿ ಎತ್ತಿರುವ ಮಹೇಶ ಶೆಟ್ಟಿ ತಿಮ್ಮರೋಡಿ ಯಾವ ಮೂಲದವರು? ತಿಮ್ಮರೋಡಿಗೆ ಪ್ರಚೋದನೆ ಕೊಡುತ್ತಿರುವವರು ಯಾರು? ಧರ್ಮಸ್ಥಳ ಪ್ರಕರಣದಲ್ಲಿ ಒಂದು ಕಡೆ ಚಿವುಟುವುದು, ಇನ್ನೊಂದು ಕಡೆ ತೂಗುವ ಕೆಲಸವನ್ನು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಮಾಡುತ್ತಿದ್ದಾರೆ’ ಎಂದು ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಆರೋಪಿಸಿದರು.
‘ಕರಾವಳಿಯಲ್ಲಿ ಯಾವುದೇ ಧಾರ್ಮಿಕ ಉದ್ರೇಕಕಾರಿ ಕಾರ್ಯಕ್ರಮಗಳು ನಡೆದರೂ ಅದರ ಹಿಂದೆ ಸಂಘ ಪರಿವಾರದ ಕಲ್ಲಡ್ಕ ಪ್ರಭಾಕರ ಭಟ್ ಇರುತ್ತಾರೆ. ಆದರೆ, ಬಿಜೆಪಿ ಶಾಸಕರು ಮೊನ್ನೆ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಯಾತ್ರೆ ಬಂದಾಗ ಕಲ್ಲಡ್ಕ ಪ್ರಭಾಕರ ಭಟ್ರು ಏಕೆ ಇರಲಿಲ್ಲ’ ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.
‘ಧರ್ಮಸ್ಥಳ ವಿಷಯದಲ್ಲಿ ಕಾಂಗ್ರೆಸ್, ರಾಜ್ಯ ಸರ್ಕಾರ ಅಥವಾ ಮುಖ್ಯಮಂತ್ರಿಯವರ ಯಾವುದೇ ಹಿತಾಸಕ್ತಿ ಇಲ್ಲ. ಕೋರ್ಟ್ ಆದೇಶದ ಮೇರೆಗೆ ಎಸ್‌ಐಟಿ ರಚನೆಯಾಗಿ, ತನಿಖೆಯಾಗುತ್ತಿದೆ. ವೀರೇಂದ್ರ ಹೆಗ್ಗಡೆ ಅವರೂ ಎಸ್‌ಐಟಿ ರಚನೆಯನ್ನು ಸ್ವಾಗತಿಸಿದ್ದಾರೆ. ಶೀಘ್ರ ವಾಸ್ತವಾಂಶ ಹೊರಬರಲಿದೆ’ ಎಂದು ಹೇಳಿದರು.
ಯತ್ನಾಳ ಇನ್ನೊಬ್ಬ ಮುತಾಲಿಕ್: ‘ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ನಾಡಿನ ಸೌಹಾರ್ದ ಕೆಡಿಸುವ, ಕೋಮು ಪ್ರಚೋಧನೆ ಮಾಡುವ ವಿಷಯದಲ್ಲಿ ಇನ್ನೊಬ್ಬ ಮುತಾಲಿಕ್ ಆಗಲು ಹೊರಟಿದ್ದಾರೆ. ಅವರ ಯಾವುದೇ ಪ್ರಯೋಗಗಳು ರಾಜ್ಯದಲ್ಲಿ ಯಶಸ್ವಿಯಾಗುವುದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.