ADVERTISEMENT

ಕಂದಗಲ್ ರಂಗಮಂದಿರ ಕಲಾವಿದರ ಆಸ್ತಿ: ಬಸವರಾಜ ಹೂಗಾರ

ಬೆಳಗಾವಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 13:39 IST
Last Updated 16 ಅಕ್ಟೋಬರ್ 2021, 13:39 IST
ವಿಜಯಪುರ ನಗರದ ಕಂದಗಲ್‌ ಹನುಮಂತರಾಯ ರಂಗಮಂದಿರ ನವೀಕರಣ ಕಾರ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ ಹೂಗಾರ ವೀಕ್ಷಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈರಪ್ಪ ಆಶಾಪೂರ, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಎಲ್.ಬಿ.ಶೇಖ ಮಾಸ್ತರ್ ಇದ್ದಾರೆ
ವಿಜಯಪುರ ನಗರದ ಕಂದಗಲ್‌ ಹನುಮಂತರಾಯ ರಂಗಮಂದಿರ ನವೀಕರಣ ಕಾರ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ ಹೂಗಾರ ವೀಕ್ಷಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈರಪ್ಪ ಆಶಾಪೂರ, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಎಲ್.ಬಿ.ಶೇಖ ಮಾಸ್ತರ್ ಇದ್ದಾರೆ   

ವಿಜಯಪುರ: ಕಂದಗಲ್‌ ಹನುಮಂತರಾಯ ರಂಗಮಂದಿರ ಕಲಾವಿದರ ಆಸ್ತಿಯಾಗಿದ್ದು, ಜಿಲ್ಲೆಯ ಕಲಾವಿದರಿಗೆ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗಲು ಅನುಕೂಲವಾಗುವಂತ ಈ ರಂಗಮಂದಿರ ನವೀಕರಣಕ್ಕಾಗಿ ಸರ್ಕಾರದಿಂದ ರೂ.75 ಲಕ್ಷ ಬಿಡುಗಡೆಯಾಗಿದೆ ಎಂದು ಬೆಳಗಾವಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ ಹೂಗಾರ ತಿಳಿಸಿದರು.

ಕಂದಗಲ್‌ ಹನುಮಂತರಾಯ ರಂಗಮಂದಿರ ನವೀಕರಣ ಭಾಗಶ: ಮುಗಿದಿದ್ದು, ಕೆಲವು ಸಣ್ಣಪುಟ್ಟ ತೊಂದರೆಗಳು ಆಗದಂತ ಸರಿಪಡಿಸಬೇಕಾಗಿದೆ. ಫ್ಯಾನ್ ವ್ಯವಸ್ಥೆಯಿಂದ ಶಬ್ದ ಬರುತ್ತಿದ್ದು, ಶಬ್ದರಹಿತವಾದ ಫ್ಯಾನ್‌ಗಳನ್ನು ಅಳವಡಿಸಬೇಕಾಗಿದೆ. ಗ್ರೀನ್ ರೂಂ ಕಲಾವಿದರಿಗೆ ಅನುಕೂಲವಾಗುವಂತೆ ಮಾರ್ಪಡಿಸಬೇಕಾಗಿದೆ. ಇನ್ನುಳಿದಂತ ಆಸನ ವ್ಯವಸ್ಥೆಯನ್ನು ಸರಿಪಡಿಸಬೇಕಾಗಿದೆ. ಕೂಡಲೆ 15 ದಿನಗಳಲ್ಲಿ ಈ ಕಾಮಗಾರಿಗಳನ್ನು ಪೂರ್ಣಗೊಳಿಸುವಂತ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಕಂದಗಲ್‌ ಹನುಮಂತರಾಯ ರಂಗಮಂದಿರದ ಹಿಂದೆ ಹಂದಿಗನೂರ ಸಿದ್ರಾಮಪ್ಪ ಬಯಲು ರಂಗಮಂದಿರ ನಿರ್ಮಾಣವಾಗಿದ್ದು ತಾಂತ್ರಿಕ ದೋಷದಿಂದ ಕಲಾವಿದರಿಗೆ ಕಾರ್ಯಕ್ರಮ ನಡೆಸಲು ತೊಂದರೆಯಾಗುತ್ತದೆ. ಬಯಲು ರಂಗಮಂದಿರ ಮುಂಭಾಗದ ಆಸನ ವ್ಯವಸ್ಥೆಯನ್ನು ಸರಿಪಡಿಸುವುದು ಹಾಗೂ ರಂಗಮಂದಿರದ ಹಿಂಭಾಗದ ಗೋಡೆ ಅರ್ಧಕ್ಕೆ ನಿರ್ಮಾಣವಾಗಿದ್ದು ಮಳೆ ಗಾಳಿಗೆ ದಕ್ಕೆಯಾಗದಂತ ಸುರಕ್ಷತೆಯ ದೃಷ್ಟಿಯಿಂದ ಅದನ್ನು ಪೂರ್ಣಗೊಳಿಸಬೇಕಾಗಿದೆ ಎಂದರು.

ADVERTISEMENT

ಬಯಲು ರಂಗಮಂದಿರ ಲೋಕೋಪಯೋಗಿ ಇಲಾಖೆಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹಸ್ತಾಂತರವಾಗಿರುವುದಿಲ್ಲ, ಕೂಡಲೇ ಅದನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೀಡಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.

ರಂಗಮಂದಿರದಲ್ಲಿ ಮೇಕಪ್ ಹೊರಡಿ ಹಾಗೂ ಅದಕ್ಕೆ ಮೂಲ ಸೌಲಭ್ಯಗಳು ಇರುವದಿಲ್ಲ, ರಂಗಮಂದಿರದಲ್ಲಿ ಕೂಡಲೇ ಈ ಸೌಲಭ್ಯ ಒದಗಿಸಿ ಕೊಡುವ ಅಗತ್ಯವಿದೆ ಎಂದು ತಿಳಿಸಿದರು.

ಕಂದಗಲ್‌ ಹನುಮಂತರಾಯರು ರಂಗಭೂಮಿಯ ಅಸ್ತಿ ಇದ್ದಂತೆ, ಅವರ ಹೆಸರಿನಲ್ಲಿ ನಿರ್ಮಾಣವಾದ ಈ ಭವನಗಳನ್ನು ಸುಸಜ್ಜಿತವಾಗಿ ಸಾರ್ವಜನಿಕರಿಗೆ ಒದಗಿಸಿ ಕೊಡವುದು ಕಂದಗಲ್‌ ಹನುಮಂತರಾಯರಿಗೆ ಸಲ್ಲಿಸುವ ಗೌರವವಾಗಿದೆ ಎಂದರು.

ವಿಜಯಪುರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈರಪ್ಪ ಆಶಾಪೂರ, ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಎಲ್.ಬಿ.ಶೇಖ ಮಾಸ್ತರ್, ಕಲಾವಿದರಾದ ಎಚ್.ಎನ್. ಶಬಣ್ಣವರ, ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಸದಸ್ಯರಾದ ರಮೇಶ ಚವ್ಹಾಣ, ಕಲಾವಿದರಾದ ಡಿ.ಎಚ್. ಕೋಲಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.