
ಸಿಂದಗಿ: ಪ್ರಪಂಚದ ಆರು ಸಾವಿರ ಭಾಷೆಗಳಲ್ಲಿ ಅತ್ಯಂತ ಉತ್ಕೃಷ್ಟವಾದ ಸಾಹಿತ್ಯ, ಸಂಸ್ಕೃತಿ, ಕಲೆಯನ್ನೊಳಗೊಂಡ ಏಕೈಕ ಭಾಷೆ ಕನ್ನಡ. ಆದಾಗ್ಯೂ ಕನ್ನಡ ನೆಲದಲ್ಲಿಯೇ ಕನ್ನಡ ಭಾಷೆ ಸಂಕಷ್ಟದಲ್ಲಿದೆ. ಕನ್ನಡ ಭಾಷೆ ಉಳಿಸಿ ಬೆಳೆಸುವ ಸ್ವಾಭಿಮಾನ ಮೈಗೂಡಿಸಿಕೊಳ್ಳಬೇಕಾದದು ಅಗತ್ಯವಾಗಿದೆ ಎಂದು ಪ್ರಾಧ್ಯಾಪಕ ಭಾಗೇಶ ಮುರಡಿ ಸಲಹೆ ನೀಡಿದರು.
ಪಟ್ಟಣದ ಮೋರಟಗಿ ರಸ್ತೆಯ ಗುಂದಗಿ ಸಭಾಮಂಟಪದಲ್ಲಿ ಶನಿವಾರ ತಾಲ್ಲೂಕು ಆಡಳಿತ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭದ ಉಪನ್ಯಾಸಕರಾಗಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ತಹಶೀಲ್ದಾರ್ ಕರೆಪ್ಪ ಬೆಳ್ಳಿ ವಹಿಸಿಕೊಂಡಿದ್ದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ವೈ.ಸಿ. ಮಯೂರ, ಕ್ಷೇತ್ರಶಿಕ್ಷಣಾಧಿಕಾರಿ ಮಹಾಂತೇಶ ಯಡ್ರಾಮಿ, ಪ್ರೊ.ರವಿ ಗೋಲಾ ಮಾತನಾಡಿದರು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ 125 ಕ್ಕೆ 125 ರಷ್ಟು ಅಂಕಗಳನ್ನು ಪಡೆದುಕೊಂಡಿರುವ ತಾಲ್ಲೂಕಿನ ವಿವಿಧ ಪ್ರೌಢಶಾಲೆಗಳ 18 ಜನ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ರಾಜ್ಯಮಟ್ಟದ ಕಬಡ್ಡಿ ತಂಡ ಬೆಂಗಳೂರು ಬುಲ್ಸ್‌ನ ಆಟಗಾರ ಸಿಂದಗಿ ತಾಲ್ಲೂಕು ಆಸಂಗಿಹಾಳ ಗ್ರಾಮದ ಗಣೇಶ ಹಣಮಂತಗೋಳ ಹಾಗೂ ಕಲಾವಿದ ರಾಜು ತಾಳಿಕೋಟಿಯವರ ಪತ್ನಿ ಪ್ರೇಮಾ, ನಿವೃತ್ತ ಪ್ರಾಚಾರ್ಯ ಎಂ.ಎಸ್.ಹಯ್ಯಾಳಕರ ಹಾಗೂ ವ್ಯಂಗ್ಯಚಿತ್ರಕಾರ ಶರಣು ಚಟ್ಟಿ ಅವರಿಗೆ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪುರಸಭೆ ಉಪಾಧ್ಯಕ್ಷ ಸಂದೀಪ ಚೌರ, ತಾಲ್ಲೂಕು ಪಂಚಾಯಿತಿ ಇಒ ರಾಮು ಅಗ್ನಿ, ಬಿಸಿಊಟ ಯೋಜನೆ ಅಧಿಕಾರಿ ಅರವಿಂದ ಡೋಣೂರ, ತಾಲ್ಲೂಕು ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಭವಾನಿ ಪಾಟೀಲ, ಚಂದ್ರಶೇಖರ ದೇವರಡ್ಡಿ , ಅಶೋಕ ತೆಲ್ಲೂರ, ಎಸ್.ಆರ್.ಅಗಸಬಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅದ್ದೂರಿ ಮೆರವಣಿಗೆ: ಪಟ್ಟಣದ ಕನ್ನಡಾಂಬೆ ವೃತ್ತದಲ್ಲಿ ಶಾಸಕ ಅಶೋಕ ಮನಗೂಳಿ ಅವರು ಭುವನೇಶ್ವರಿ ದೇವಿ ಚಿತ್ರವುಳ್ಳ ಸಾರೋಟ ಮೆರವಣಿಗೆಗೆ ಚಾಲನೆ ನೀಡಿದರು.
ಡೊಳ್ಳು ಕುಣಿತ, ಹಲಗೆ ಮೇಳ, ಗೊಂಬೆಗಳು ಮೆರವಣಿಗೆಗೆ ಶೋಭೆ ತಂದವು. ನಾಡಿನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಚಿತ್ರಗಳು ರಾರಾಜಿಸುತ್ತಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.