ವಿಜಯಪುರದಲ್ಲಿ ಸೋಮವಾರ ದಲಿತ ಮುಖಂಡ ಮಾವಳ್ಳಿ ಶಂಕರ್ ಅವರಿಗೆ ಸಾಹಿತಿ ಅನಿಲ್ ಹೊಸಮನಿ ಅವರು ಅಂಬೇಡ್ಕರ್ ಅವರ ಭಾಷಣ ಆಧಾರಿತ ‘ಶಿಕ್ಷಣ, ವಿದ್ಯಾರ್ಥಿ, ಯುವಜನ’ ಪುಸ್ತಕ ನೀಡಿ ಗೌರವಿಸಿದರು. ಚನ್ನು ಕಟ್ಟಿಮನಿ, ರಮೇಶ ಕೌಲಗಿ, ಸೋಮು ರಣದಿವೆ, ಮಲ್ಲು ಜಾಲಗೇರಿ, ಸೋಮನಾಥ ಕಳ್ಳಿಮನಿ, ಎಸ್.ಎಂ.ಪಾಟೀಲ ಗಣಿಹಾರ ಇದ್ದಾರೆ
–ಪ್ರಜಾವಾಣಿ ಚಿತ್ರ
ವಿಜಯಪುರ: ಹಿಂದುಗಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಕಾಂತರಾಜು ಅವರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷಾ ವರದಿಗೆ ಪ್ರಬಲ ಜಾತಿಗಳಿಂದ ಎಷ್ಟೇ ವಿರೋಧ, ಆಕ್ಷೇಪ ಇದ್ದರೂ ಅದರಲ್ಲಿರುವ ಪ್ರಮುಖ ಶಿಫಾರಸುಗಳ ಅನುಷ್ಠಾನಕ್ಕೆ ಸಾಮಾಜಿಕ ನ್ಯಾಯದ ರುವಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದ್ಯತೆ ನೀಡಬೇಕು ಎಂದು ಕರ್ನಾಟಕ ಶೋಷಿತ ಸಮುದಾಯಗಳ ಒಕ್ಕೂಟದ ಸಂಚಾಲಕ ಮಾವಳ್ಳಿ ಶಂಕರ್ ಒತ್ತಾಯಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಕಾಂತರಾಜು ವರದಿ ಜಾರಿ ಮಾಡುವುದಾಗಿ ಹೇಳಿಕೊಂಡಿತ್ತು. ಇದೇ ಆಧಾರದ ಮೇಲೆ ಚುನಾವಣೆ ಎದುರಿಸಿ, ಗೆಲವು ಸಾಧಿಸಿ ಶಾಸಕ, ಸಚಿವರಾದವರು ಇದೀಗ ವಿರೋಧ ವ್ಯಕ್ತಪಡಿಸುತ್ತಿರುವುದು ಖಂಡನೀಯ ಎಂದರು.
ಕಾಂತರಾಜು ವರದಿಯಲ್ಲಿ ಲೋಪಗಳಿದ್ದರೇ ಚರ್ಚಿಸಿ, ಸರಿಪಡಿಸಿಕೊಳ್ಳಬೇಕು. ಆದರೆ, ರಾಜ್ಯದಲ್ಲಿ ಬಲಿಷ್ಠ ಕೋಮುಗಳು ಅಪಸ್ವರ, ಆಕ್ಷೇಪ ಎತ್ತುತ್ತಿರುವುದು ಆರೋಗ್ಯಕರ ವಿಷಯವಲ್ಲ ಎಂದರು.
ಶಾಮನೂರು ಶಿವಶಂಕರಪ್ಪ ಅವರಂತ ಹಿರಿಯರು ಕಾಂತರಾಜು ವರದಿ ಅವೈಜ್ಞಾನಿಕವಾಗಿದೆ. ನಮ್ಮ ಸಮಾಜದ ಜನ ಸಂಖ್ಯೆ ಕಡಿಮೆ ಇದೆ ಎಂದು ಆಕ್ಷೇಪ ವ್ಯಕ್ತಪಡಿಸುತ್ತಿರುವುದು, ಬಾಲಿಷವಾದ ಮಾತುಗಳನ್ನು ಆಡುವುದು ಖಂಡನೀಯ ಎಂದರು.
ಯಾವುದೇ ವರದಿಯಾದರೂ ನೂರಕ್ಕೆ ನೂರು ಪರಿಪೂರ್ಣವಾಗಿರುವುದಿಲ್ಲ, ಶೇ 5–6 ಪ್ರಮಾಣದಷ್ಟು ಆಚೀಚೆ ಇರುತ್ತದೆ. ಆದರೆ, ಅದನ್ನು ನೆಪ ಮಾಡಿಕೊಂಡು ಅನುಷ್ಠಾನಕ್ಕೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದರು.
ಅಹಿಂದ ಮುಖಂಡ ಎಸ್.ಎಂ.ಪಾಟೀಲ ಗಣಿಹಾರ ಮಾತನಾಡಿ, ಸಿದ್ದರಾಮಯ್ಯ ಅವರು ಜಾತಿ ವರದಿ ಅನುಷ್ಠಾನಕ್ಕೆ ಮುಂದಾದರೆ ಜಾತಿ ಒಡೆಯುತ್ತಿದ್ದಾರೆ ಎಂದು ಬಿಜೆಪಿ, ಸಂಘಪರಿಹಾರದವರು ಆರೋಪಿಸುತ್ತಿದ್ದಾರೆ. ಆದರೆ, ಇದೇ ಜಾತಿ ಗಣತಿಯನ್ನು ಪ್ರಧಾನಿ ಮೋದಿ ಅವರು ಮಾಡಲು ಮುಂದಾಗಿರುವುದನ್ನು ಸ್ವಾಗತಿಸುವ ಮೂಲಕ ದ್ವಂದ್ವ ನಿಲುವು ತಾಳಿರುವುದು ಖಂಡನೀಯ ಎಂದರು.
ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ, ಪ್ರಭುಗೌಡ ಪಾಟೀಲ ಇದ್ದರು.
ಸಮ ಸಮಾಜದ ರೂವಾರಿ ಬಸವಣ್ಣ ಸ್ಥಾಪಿತ ಲಿಂಗಾಯತ ಸಮಾಜಕ್ಕೆ ಸೇರಿದ ಕೆಲ ಸಚಿವರು ಶಾಸಕರು ಕಾಂತರಾಜು ವರದಿ ವಿರೋಧಿಸುತ್ತಿರುವುದು ಬಸವಾದಿ ಶರಣರ ಆಶಯಕ್ಕೆ ಅವಮಾನ– ಮಾವಳ್ಳಿ ಶಂಕರ್ ಸಂಚಾಲಕ ಕರ್ನಾಟಕ ಶೋಷಿತ ಸಮುದಾಯಗಳ ಒಕ್ಕೂಟ
ವಿಜಯಪುರ:ಕೇಂದ್ರ ಸರ್ಕಾರದ ನಡೆಸಲು ಉದ್ದೇಶಿಸಿರುವ ಜಾತಿ ಗಣತಿ ಕೇವಲ ತಲೆ ಎಣಿಕೆಗೆ ಸೀಮಿತವಾಗದೇ ಆಯಾ ಜಾತಿ ಜನರ ಶೈಕ್ಷಣಿಕ ಆರ್ಥಿಕ ಸಾಮಾಜಿಕ ಔದ್ಯೋಗಿಕ ಸ್ಥಿತಿಗತಿ ಕುರಿತು ನಿಖರವಾದ ಸಮೀಕ್ಷೆ ಆಗಬೇಕು. ಯಾವುದೇ ಲೋಪಕ್ಕೆ ಅವಕಾಶ ನೀಡಬಾರದು ಎಂದು ಮಾವಳ್ಳಿ ಶಂಕರ್ ಆಗ್ರಹಿಸಿದರು. ಜಾತಿ ಗಣತಿಯನ್ನು ಕೇವಲ ಕಣ್ಣೋರೆಸುವ ತಂತ್ರ ಬಿಹಾರ ಚುನಾವಣಾ ಗಿಮಿಕ್‌ಗಾಗಿ ಘೋಷಣೆ ಮಾಡಿದ್ದರೆ ಅದಕ್ಕೆ ಅರ್ಥವಿಲ್ಲ. ಗಂಭೀರವಾಗಿ ತೆಗೆದುಕೊಳ್ಳಬೇಕು. ಅದರಲ್ಲಿ ಏನೆಲ್ಲ ಸಮೀಕ್ಷೆ ಮಾಡುತ್ತದೆ ಎಂಬುದು ಜನರ ಮುಂದಿಡಬೇಕು ಎಂದರು. ಜಾತಿ ಗಣತಿಗೆ ಕೇಂದ್ರ ಸರ್ಕಾರ ಕೇವಲ ₹500 ಕೋಟಿ ಮೀಸಲಿಟ್ಟಿರುವುದು ಸಾಕಷ್ಟು ಊಹಾಪೂಹಕ್ಕೆ ಕಾರಣವಾಗಿದೆ. ಜಾತಿ ಗಣತಿ ಆಗಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ದೇಶದಾದ್ಯಂತ ಧ್ವನಿ ಎತ್ತಿದ್ದರು. ಸರ್ಕಾರ ಅವರ ಆಗ್ರಹಕ್ಕೆ ಮಣಿದು ಜಾತಿ ಗಣತಿಗೆ ಮುಂದಾಗಿರುವುದು ಸ್ವಾಗತಾರ್ಹ ಎಂದರು. ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಮಾತನಾಡಿ ಕೇಂದ್ರ ಸರ್ಕಾರ ಜಾತಿ ಗಣತಿಗೆ ಕಾಲಮಿತಿ ನಿಗದಿ ಮಾಡಬೇಕು. ಈ ಹಿಂದೆ ಮಹಿಳಾ ಮೀಸಲಾತಿ ನೀಡುವುದಾಗಿ ಬಿಜೆಪಿ ಸರ್ಕಾರ ಘೋಷಿಸಿದೆ. ಆದರೆ ಅದು ಜಾರಿಗೆ ಬರುವುದು ಇನ್ನೂ 10 ವರ್ಷ ಆದರೂ ಜಾರಿಗೆ ಬರುವ ಸಾಧ್ಯತೆ ಇಲ್ಲ. ತಳ್ಳಿಕೊಂಡು ಹೋಗುವ ಸಾಧ್ಯತೆ ಇದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.