
ವಿಜಯಪುರ: ಆದಿಲ್ ಶಾಹಿ ಅರಸರ ಕಾಲಘಟ್ಟದಲ್ಲಿ ಇಡೀ ನಗರಕ್ಕೆ ಗುರುತ್ವಾಕರ್ಷಣೆ ಮೂಲಕ ನೀರು ಪೂರೈಕೆ ಮಾಡುವ ‘ಕರೇಜ್’ ವ್ಯವಸ್ಥೆ ಪುನರುಜ್ಜೀವನ ಮಾಡುವುದಾಗಿ 2024ರ ಬಜೆಟ್‌ನಲ್ಲಿ ಮಾಡಿರುವ ಘೋಷಣೆ ಇನ್ನೂ ಗಗನಕುಸುಮವಾಗಿದೆ.
‘ಕರೇಜ್’ ವ್ಯವಸ್ಥೆ ಪುನರುಜ್ಜೀವನಗೊಳಿಸುವ ಸಂಬಂಧ ಸಮಗ್ರ ಯೋಜನಾ ವರದಿಯನ್ನೇ ಜಿಲ್ಲಾಡಳಿತ ಇನ್ನೂ ಸಿದ್ಧಪಡಿಸಿಲ್ಲ. ಕರೇಜ್‌ಗೆ ಸಂಬಂಧಿಸಿ ಕೆಲವು ‘ವೆಂಟ್’ಗಳಲ್ಲಿ ಚರಂಡಿ ನೀರು ಯಥೇಚ್ಛವಾಗಿ ಹರಿಯುತ್ತಿರುವುದು ಕಂಡುಬಂದಿದೆ. ಆದರೆ, ಬೀದರ್‌ನಲ್ಲಿ ಈ ಯೋಜನೆ ಕಾರ್ಯಗತದಲ್ಲಿದೆ.
ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಇರುವ ‘ವೆಂಟ್’ ಸುತ್ತಲೂ ತಂತಿ ಬೇಲಿ ಹಾಕಿ ಸಂರಕ್ಷಿಸಲಾಗಿದೆ. ಸಮೀಪದ ಪ್ರವಾಸಿ ಮಂದಿರದಲ್ಲಿಯೂ 60 ಅಡಿ ಆಳದ ವೆಂಟ್ ಸುಸಜ್ಜಿತವಾಗಿದೆ. ಆದರೆ, ಇಟಗಿ ಪೆಟ್ರೋಲ್ ಪಂಪ್ ಬಳಿ ಇರುವ ವೆಂಟ್ ದಯನೀಯ ಸ್ಥಿತಿಯಲ್ಲಿದೆ. ಅಲ್ಲಿ ಅಳವಡಿಸಲಾದ ಪುರಾತತ್ವ ಇಲಾಖೆಯ ಫಲಕವೂ ನೆಲಕ್ಕುರುಳಿದೆ.
ನಗರದ ಅಥಣಿ ರಸ್ತೆಯ ಅನತಿ ದೂರದಲ್ಲಿ ವೆಂಟ್ ದುಸ್ಥಿತಿಯಂತೂ ಹೇಳತೀರದು. ಅಲ್ಲಿ ದೊಡ್ಡ ಪ್ರಮಾಣದಲ್ಲಿ ಚರಂಡಿ ನೀರು ಧುಮ್ಮಿಕ್ಕುತ್ತಿದೆ. ದುರ್ವಾಸನೆ ಇಡೀ ಬಡಾವಣೆ ಆವರಿಸುತ್ತಿದೆ. ಅಪರೂಪದ ಜಲ ವೈಭವ ಸಾರುವ ಈ ವೆಂಟ್ ತ್ಯಾಜ್ಯ ಹರಿಯುವ ತೊಟ್ಟಿಯಾಗಿ ಮಾರ್ಪಾಡಾಗಿದೆ.
ಸಾಠ್ ಖಬರ್ ಸಮೀಪ ವೆಂಟ್ ಪುನರುಜ್ಜೀವನ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರು ಚಾಲನೆ ನೀಡಿದ್ದರು. ಈಗ ಅಲ್ಲಿ ಚರಂಡಿ ನೀರು ಆವರಿಸಿದೆ.
ಕರೇಜ್ ಕಹಾನಿ: ವಿಜಯಪುರದಲ್ಲಿ 16ನೇ ಶತಮಾನದಲ್ಲಿ ಅಭಿವೃದ್ಧಿ ಪಡಿಸಿದ ಅಂತರ್ಜಲ ವ್ಯವಸ್ಥೆಗಳಲ್ಲಿ ಒಂದಾದ ಕರೇಜ್‌ನ ಪುನಶ್ಚೇತನ ಕಾರ್ಯವನ್ನು ಸರ್ಕಾರ ಕೈಗೆತ್ತಿಕೊಳ್ಳುವಂತೆ ಹೋರಾಟಗಾರರು ಮತ್ತು ಜಲಸಂರಕ್ಷಣಕಾರರು ಹಲವು ವರ್ಷಗಳಿಂದ ಒತ್ತಾಯಿಸುತ್ತಲೇ ಇದ್ದಾರೆ.
ರಾಮಲಿಂಗ ಕೆರೆ ಪುನರುಜ್ಜೀವನ, ಐತಿಹಾಸಿಕ ಕರೇಜ್ ಪುನರುಜ್ಜೀವನಕ್ಕಾಗಿ ಜಲ ಬಿರಾದಾರಿ ಸಾರಥ್ಯ ವಹಿಸಿದ್ದ ಪೀಟರ್ ಅಲೆಕ್ಸಾಂಡರ್, ಅಮೀನುದ್ದೀನ್ ಹುಲ್ಲೂರ ಸೇರಿದಂತೆ ಅನೇಕರು ದೊಡ್ಡ ಮಟ್ಟದ ಹೋರಾಟ ನಡೆಸುತ್ತಲೇ ಇದ್ದಾರೆ.
ಈ ಹಿಂದೆ ಕರೇಜ್‌ನ್ನು ಪುನರುಜ್ಜೀವನಗೊಳಿಸಲು ಹಿಂದಿನ ಜಿಲ್ಲಾಧಿಕಾರಿಗಳಾದ ಡಿ.ರಂದೀಪ್ ಮತ್ತು ಪಿ.ಸುನೀಲ ಕುಮಾರ್ ಅವರು ತೀವ್ರ ಆಸಕ್ತಿ ವಹಿಸಿದ್ದರು ಹಾಗೂ ಕರೇಜ್ ಪುರುಜ್ಜೀವನಕ್ಕೆ ಹಲವಾರು ಪ್ರಯತ್ನಗಳನ್ನು ಮಾಡಿದ್ದರು.
ಪಿ.ಸುನೀಲ ಕುಮಾರ್ ಅವರು, ಮೊದಲ ಹಂತದಲ್ಲಿ ಸುಮಾರು 4 ಕಿ.ಮೀ. ಇರುವ ಕರೇಜ್‌ನಲ್ಲಿ 400 ಮೀಟರ್ ವರೆಗೆ ಪುನರುಜ್ಜೀವನಗೊಳಿಸಲು ನಿರ್ಧರಿಸಿದ್ದರು. ಅನುದಾನದ ಕೊರತೆಯಿಂದ ಅದು ಸಾಕಾರಗೊಳ್ಳಲಿಲ್ಲ.
ಬೀದರ್ ಹಾಗೂ ವಿಜಯಪುರ ಕರೇಜ್ ಪುನರುಜ್ಜೀವನದ ಡಿಪಿಆರ್ ತಯಾರಿಸಲು ಒಂದೇ ಸಂಸ್ಥೆಗೆ ನೀಡಿದ್ದರಿಂದ ವಿಳಂಬವಾಗಿದೆ. ಆದಷ್ಟು ಬೇಗ ಯೋಜನೆ ಕೈಗೆತ್ತಿಕೊಳ್ಳಲಾಗುವುದುಅರವಿಂದ ಹೂಗಾರ ಉಪನಿರ್ದೇಶಕ ಪ್ರವಾಸೋದ್ಯಮ ಇಲಾಖೆ
ಐತಿಹಾಸಿಕ ಕರೇಜ್ ಪುನರುಜ್ಜೀವನ ಯೋಜನೆ ಪೂರ್ಣಗೊಳ್ಳುವ ಲಕ್ಷಣ ಗೋಚರಿಸುತ್ತಿಲ್ಲ. ಕರೇಜ್ ಜಲ ವೈಭವ ಸಾಕ್ಷೀಕರಿಸುವ ಈ ಯೋಜನೆ ಮರೀಚಿಕೆಯಾಗಿಯೇ ಉಳಿದಿದೆಅಮೀನುದ್ದೀನ್ ಹುಲ್ಲೂರ ವಾಸ್ತುಶಿಲ್ಪ ತಜ್ಞ
ವೆಂಟ್‌ನಲ್ಲಿ ಹರಿಯುತ್ತಿರುವ ಚರಂಡಿನೀರನ್ನು ತಡೆದು ಬೇರೆಡೆಗೆ ಹರಿಯುವಂತೆ ಮಾಡಲು ಈಗಾಗಲೇ 3–4 ಬಾರಿ ಪಾಲಿಕೆಗೆ ಪತ್ರ ಬರೆಯಲಾಗಿದೆ. ಇದುವರೆಗೂ ಕಾರ್ಯಗತವಾಗಿಲ್ಲವಿಜಯಕುಮಾರ ಎಎಸ್ಐ ಹಿರಿಯ ಸಂರಕ್ಷಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.