ADVERTISEMENT

ವಿಜಯಪುರ: ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕಸರತ್ತು, ಗೌಪ್ಯ ಮತದಾನ

ಏಪ್ರಿಲ್‌ 7 ಅಥವಾ 8ಕ್ಕೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2023, 14:12 IST
Last Updated 31 ಮಾರ್ಚ್ 2023, 14:12 IST
ಈರಣ್ಣ ಕಡಾಡಿ
ಈರಣ್ಣ ಕಡಾಡಿ   

ವಿಜಯಪುರ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಶುಕ್ರವಾರ ನಗರದ ಬಿಜೆಪಿ ಕಚೇರಿಯಲ್ಲಿ ಗೌಪ್ಯ ಮತದಾನ ‍ಪ್ರಕ್ರಿಯೆ ನಡೆಯಿತು.

ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ನೇತೃತ್ವದಲ್ಲಿ ನಡೆದ ಗೌಪ್ಯ ಮತದಾನ ಪ್ರಕ್ರಿಯೆಯಲ್ಲಿ ಬಿಜೆಪಿ ಶಕ್ತಿ ಕೇಂದ್ರದ ಮೇಲ್ಪಟ್ಟ ಎರಡು ಸಾವಿರ ಪದಾಧಿಕಾರಿಗಳ ಪೈಕಿ 1600 ಜನ ಪದಾಧಿಕಾರಿಗಳು ಭಾಗವಹಿಸಿ, ಮತ ಚಲಾಯಿಸಿದರು.

ಆಯಾ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳು ತಮ್ಮ ಕ್ಷೇತ್ರಕ್ಕೆ ಮೂರ ಜನ ಅಭ್ಯರ್ಥಿಗಳ ಹೆಸರನ್ನು ನಮೂದಿಸಿ, ಸಹಿ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಮತ ಪತ್ರಗಳನ್ನು ಸಂಗ್ರಹಿಸಿಕೊಂಡಿರುವ ಈರಣ್ಣ ಕಡಾಡಿ ನೇತೃತ್ವದ ತಂಡ ಬೆಂಗಳೂರಿನಲ್ಲಿ ಏಪ್ರಿಲ್‌ 1 ಮತ್ತು 2 ರಂದು ನಡೆಯುವ ರಾಜ್ಯದ ಮಟ್ಟದ ಪ್ರಮುಖರ ಸಭೆಯ ಗಮನಕ್ಕೆ ತರಲಿದೆ.

ADVERTISEMENT

ಗೌಪ್ಯ ಮತದಾನದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಈರಣ್ಣ ಕಡಾಡಿ, ವಿಜಯಪುರ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಕುರಿತು ಮಾಹಿತಿ ಸಂಗ್ರಹ ಮಾಡಿಲಾಗಿದ್ದು, ಇದೊಂದು ವಿನೂತನ ಪ್ರಯೋಗವಾಗಿದೆ. ಕಾರ್ಯಕರ್ತರನ್ನು ಒಂದೆಡೆ ಸೇರಿಸಿ ಅಭಿಪ್ರಾಯ ಸಂಗ್ರಹಿಸುವ ಕಾರ್ಯ ರಾಜ್ಯದ 224 ಕ್ಷೇತ್ರಗಳಲ್ಲಿ ಶುಕ್ರವಾರ ಬಹಳ ಸುಶ್ರುತವಾಗಿ, ಶಿಸ್ತು ಬದ್ದವಾಗಿ, ಗೊಂದಲ ಇಲ್ಲದೆ ನಡೆದಿದೆ ಎಂದು ಹೇಳಿದರು.

ಈಗಾಗಲೇ ಬಿಜೆಪಿ ಹೈಕಮಾಂಡ್‌ನಿಂದ ಎರಡು ಸರ್ವೇ ನಡೆದಿದೆ. ಈ ಎಲ್ಲ ಅಭಿಪ್ರಾಯದ ಜೊತೆಗೆ ನಮ್ಮ ವಿರೋಧಿ ಪಕ್ಷಗಳ ಅಭ್ಯರ್ಥಿಗಳನ್ನು ಪರಿಗಣಿಸಿ ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕಳಿಸಲಾಗುವುದು. ಏಪ್ರಿಲ್‌ 7 ಅಥವಾ 8ಕ್ಕೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಎಂದು ಅವರು ತಿಳಿಸಿದರು.

ಶುಕ್ರವಾರ ನಡೆದ ಗೌಪ್ಯ ಮತದಾನ ಮತ್ತು ಸಭೆಯಲ್ಲಿ ಆರೋಗ್ಯಕರ ಚರ್ಚೆ ನಡೆದಿದೆ. ಹಾಲಿ ಶಾಸಕರಿಗೆ ಟಿಕೆಟ್ ನೀಡಬಾರದು ಎಂಬ ಅಭಿಪ್ರಾಯ ಕೇಳಿಬಂದಿಲ್ಲ ಎಂದರು.

ವಿಧಾನಸಭಾ ಚುನಾವಣೆ ಸಂಬಂಧ ಈಗಾಗಲೇ ರಾಜ್ಯದಾದ್ಯಂತ ಬೂತ್ ವಿಜಯ ಸಂಕಲ್ಪ ಅಭಿಯಾನ, ವಿಜಯ ಸಂಕಲ್ಪ ಅಭಿಯಾನ, ಮೋರ್ಚಾ ಸಮಾವೇಶ, ಮನೆ ಮನೆಗೆ ಸ್ಟಿಕ್ಕರ್ ಅಂಟಿಸುವ ಅಭಿಯಾನ, ಗೋಡೆ ಬರಹ ಅಭಿಯಾನ, ಕೇಂದ್ರ, ರಾಜ್ಯ ಸರ್ಕಾರದ ಸಾಧನೆಗಳ ಕರಪತ್ರ ಹಂಚಿಕೆ, ದಾವಣಗೆರೆಯಲ್ಲಿ ಮಹಾ ಸಂಕಲ್ಪ ಅಭಿಯಾನ ಮಾಡಲಾಗಿದೆ ಎಂದರು.

ಸಮಾಜದ ಎಲ್ಲ ವರ್ಗವನ್ನು ಪ್ರತಿನಿಧಿಸುವ ಪ್ರಣಾಳಿಕೆ ತಯಾರಿಸಲು ಜನರ ಅಭಿಪ್ರಾಯ ಸಂಗ್ರಹ ನಡೆದಿದೆ ಎಂದರು.

ಲಿಂಗಾಯತ, ಒಕ್ಕಲಿಗರಿಗೆ ಮೀಸಲಾತಿ ಹಾಗೂ ಪರಿಶಿಷ್ಟ ಜಾತಿ ಒಳ ಮೀಸಲಾತಿ ವಿಷಯದಲ್ಲಿ ಕಾಂಗ್ರೆಸ್ ಅನಗತ್ಯ ಗೊಂದಲ ಸೃಷ್ಟಿಸುತ್ತಿದೆ. ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮೀಸಲಾತಿ ಪುನರ್ ವಿಂಗಡಣೆಯನ್ನು ಬಿಜೆಪಿ ಮಾಡಿದೆ ಎಂದು ಹೇಳಿದರು.

ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಶಿವರುದ್ರ ಬಾಗಲಕೋಟೆ, ಸಂಜಯ್‌ ಪಾಟೀಲ ಕನಮಡಿ, ಬಸವರಾಜ ಬಿರಾದಾರ, ಕಾಸುಗೌಡ ಬಿರಾದಾರ, ವಿಜಯ ಜೋಶಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.