ADVERTISEMENT

ನಾಗಠಾಣ ಜೆಡಿಎಸ್‌ ಅಭ್ಯರ್ಥಿ ಚವ್ಹಾಣ ಬಲ ಪ್ರದರ್ಶನ

ಬೆಂಬಲಿಗರೊಂದಿಗೆ ರೋಡ್‌ ಶೋ ನಡೆಸಿ ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2023, 12:05 IST
Last Updated 18 ಏಪ್ರಿಲ್ 2023, 12:05 IST
ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾ ದಳದ ಅಭ್ಯರ್ಥಿ, ಹಾಲಿ ಶಾಸಕ ಡಾ.ದೇವಾನಂದ ಚವ್ಹಾಣ ಮಂಗಳವಾರ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನಾ ನಗರದಲ್ಲಿ ಸಹಸ್ರಾರು ಬೆಂಬಲಿಗರೊಂದಿಗೆ ಪಾದಯಾತ್ರೆ ನಡೆಸಿದರು–ಪ್ರಜಾವಾಣಿ ಚಿತ್ರ
ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾ ದಳದ ಅಭ್ಯರ್ಥಿ, ಹಾಲಿ ಶಾಸಕ ಡಾ.ದೇವಾನಂದ ಚವ್ಹಾಣ ಮಂಗಳವಾರ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನಾ ನಗರದಲ್ಲಿ ಸಹಸ್ರಾರು ಬೆಂಬಲಿಗರೊಂದಿಗೆ ಪಾದಯಾತ್ರೆ ನಡೆಸಿದರು–ಪ್ರಜಾವಾಣಿ ಚಿತ್ರ   

ವಿಜಯಪುರ: ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾ ದಳದ ಅಭ್ಯರ್ಥಿ, ಹಾಲಿ ಶಾಸಕ ಡಾ.ದೇವಾನಂದ ಚವ್ಹಾಣ ಮಂಗಳವಾರ ನಗರದಲ್ಲಿ ಸಹಸ್ರಾರು ಬೆಂಬಲಿಗರನ್ನು ಸೇರಿಸಿ ಬಲ ಪ್ರದರ್ಶನ ಮಾಡುವ ಮೂಲಕ ನಾಮಪತ್ರ ಸಲ್ಲಿಸಿದರು.

ನಗರದ ಶ್ರೀ ಸಿದ್ದೇಶ್ವರ ಗುಡಿಯಿಂದ ಆರಂಭವಾದ ಪಾದಯಾತ್ರೆಯು ಗಾಂಧಿ ಚೌಕಿ ಮೂಲಕ ಸಾಗಿ ಡಾ. ಬಿ.ಆರ್‌. ಅಂಬೇಡ್ಕರ್‌ ವೃತ್ತ ತಲುಪಿತು. ರಸ್ತೆಯ ಇಕ್ಕೆಲಗಳಲ್ಲಿ ಸಾಲುಗಟ್ಟಿ ನಿಂತಿದ್ದ ಪಕ್ಷ ಕಾರ್ಯಕರ್ತರು, ಬೆಂಬಲಿಗರು, ಮುಖಂಡರು, ಅಭಿಮಾನಿಗಳಿಗೆ ವಂದಿಸಿದರು. ಡೊಳ್ಳಿನ ವಾದ್ಯದೊಂದಿಗೆ ಸಾಂಪ್ರಾದಾಯಿಕ ಲಂಬಾಣಿ ನೃತ್ಯ, ಜೆಡಿಎಸ್‌ನ ತೆನೆ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಗಮನ ಸೆಳೆದರು.

ಅಂಬೇಡ್ಕರ್‌ ಸರ್ಕಲ್‌ನಿಂದ ನೂರಾರು ವಾಹನಗಳೊಂದಿಗೆ ರೋಡ್‌ ಶೋ ಮೂಲಕ ಜಿಲ್ಲಾ ಪಂಚಾಯ್ತಿ ಮೈದಾನದಲ್ಲಿರುವ ಚುನಾವಣಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ADVERTISEMENT

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಐದು ವರ್ಷಗಳಲ್ಲಿ ಜನರ ನಡುವೆ ಬೆರೆತು ನಾಗಠಾಣ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ನನ್ನ ಕೆಲಸಕ್ಕೆ ಸೂಕ್ತ ಕೂಲಿ ಕೊಡಿ ಎಂದು ಈಗ ಮತದಾರರನ್ನು ಕೇಳುತ್ತಿದ್ದೇನೆ. ಕ್ಷೇತ್ರದ ಜನ ಈಗಾಗಲೇ ತೀರ್ಮಾನಿಸಿದ್ದಾರೆ. ನಾಗಠಾಣದಲ್ಲಿ ಜೆಡಿಎಸ್‌ ಗೆಲುವು ನಿಶ್ಚಿತ. ಅಂತೆಯೇ ರಾಜ್ಯದಲ್ಲಿ ಕುಮಾರಣ್ಣ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ನೇತೃತ್ವದ ಡಬಲ್‌ ಎಂಜಿನ್ ಸರ್ಕಾರ ಕ್ಷೇತ್ರದ ಅಭಿವೃದ್ಧಿಗೆ ತಡೆವೊಡ್ಡಿತ್ತು. ಆದರೂ ಅಡೆತಡೆಯನ್ನು ಮೀರಿ ಜನ ಪರ ಕೆಲಸ ಮಾಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ, ಜನಪರ ಕೆಲಸ ಮಾಡಲು ಆದ್ಯತೆ ನೀಡಿದ್ದೇನೆ ಎಂದರು.

ನಾಗಠಾಣದಲ್ಲಿ ಜೆಡಿಎಸ್‌ ಪರ ಅಲೆ ಇದೆ. ಬಿಜೆಪಿ ದುರಾಡಳಿತದಿಂದ ಬೇಸತ್ತಿದ್ದಾರೆ. ಈಗಾಗಲೇ ಕಾಂಗ್ರೆಸ್‌ ಆಡಳಿತವನ್ನು ನೋಡಿದ್ದಾರೆ. ಈ ಬಾರಿ ಕುಮಾರಣ್ಣನಿಗೆ ಬಹುಮತ ನೀಡುವ ಮೂಲಕ ಜನ ಪರ, ರೈತ ಪರ ಆಡಳಿತಕ್ಕೆ ಅವಕಾಶ ಒದಗಿಸಲಿದ್ದಾರೆ ಎಂದು ಹೇಳಿದರು.

ಜೆಡಿಎಸ್‌ನ ಪಂಚರತ್ನ ಯೋಜನೆ ಸಮಾಜದ ಎಲ್ಲ ವರ್ಗದ ಜನರ ಪಾಲಿಗೆ ಹೆಚ್ಚು ಉಪಯುಕ್ತವಾಗಿದೆ. ಪಂಚರತ್ನ ಯೋಜನೆಗಳು ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ದಾರಿದೀಪವಾಗಲಿವೆ ಎಂದರು.

ಜೆಡಿಎಸ್‌ ಮುಖಂಡರಾದ ರವಿಕುಮಾರ ಚವ್ಹಾಣ, ಅಭಿನವ ಚವ್ಹಾಣ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.