ADVERTISEMENT

ವಿಜಯಪುರ: ಶೇಖ್‌ ಮಾಸ್ತರ, ಪೂಜಾರ, ಸೋಮಣ್ಣಗೆ ರಾಜ್ಯೋತ್ಸವ ಗರಿ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 6:55 IST
Last Updated 31 ಅಕ್ಟೋಬರ್ 2025, 6:55 IST
ಎಲ್‌.ಬಿ. ಶೇಖ್‌ ಮಾಸ್ತರ್
ಎಲ್‌.ಬಿ. ಶೇಖ್‌ ಮಾಸ್ತರ್   

ವಿಜಯಪುರ: ಜಿಲ್ಲೆಯ ಮೂವರು ಸಾಧಕರು ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ರಂಗಭೂಮಿ ಕ್ಷೇತ್ರದಲ್ಲಿ ಎಲ್‌.ಬಿ.ಶೇಖ್‌ ಮಾಸ್ತರ್‌, ಸಾಹಿತ್ಯ ಕ್ಷೇತ್ರದಲ್ಲಿ ಹ.ಮ. ಪೂಜಾರ ಹಾಗೂ ಜಾನಪದ ಕ್ಷೇತ್ರದಲ್ಲಿ ಸೋಮಣ್ಣ ದುಂಡಪ್ಪ ಧನಗೊಂಡ ಅವರು ಗೌರವಕ್ಕೆ ಆಯ್ಕೆ ಆಗಿದ್ದಾರೆ. ನ.1ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ, ಸಚಿವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ನಾಟಕಕಾರ ಎಲ್.ಬಿ. ಶೇಖ್‌ ಮಾಸ್ತರ

ADVERTISEMENT

ರಂಗಭೂಮಿಯ ಪ್ರಸಿದ್ಧ ಕಲಾವಿದ, ನಾಟಕಕಾರ, ಸಂಗೀತ ನಿರ್ದೇಶಕ, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಎಲ್.ಬಿ. ಶೇಖ್‌ ಮಾಸ್ತರ ಮುದ್ದೇಬಿಹಾಳ ತಾಲ್ಲೂಕಿನ ಲಿಂಗದಳ್ಳಿ ಗ್ರಾಮದವರು. ಮುಸ್ಲಿಮರಾದರೂ ಸರ್ವಧರ್ಮಗಳ ತತ್ವ, ಸಿದ್ಧಾಂತ ಮೈಗೂಡಿಸಿಕೊಂಡವರು.

ಬಾವಾಸಾಹೇಬ ಹಾಗೂ ಶಹಜಾಬಿ ದಂಪತಿಯ ಪುತ್ರನಾಗಿ 1955 ಸೆ.1ರಂದು ಜನಿಸಿದ ಶೇಖ್‌ ಮಾಸ್ತರ ಬಡತನದ ಕಾರಣಕ್ಕೆ ಎಸ್‌ಎಸ್‌ಎಲ್‌ಸಿ ವರೆಗೆ ಶಿಕ್ಷಣ ಪಡೆದರೂ, ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅಗಾಧ. ಪುಟ್ಟರಾಜ ಗವಾಯಿಗಳ ಶಿಷ್ಯರಾಗಿರುವ ಇವರು ಬಾಲ್ಯದಿಂದಲೇ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ.
 
ತಾಳಿಕೋಟೆಯ ಖಾಸ್ಗತೇಶ್ವರ ಮಠದಲ್ಲಿ ಹಿಂದುಸ್ತಾನಿ ಸೀನಿಯರ್ ಹಾಡುಗಾರಿಕೆ ಹಾಗೂ ಹಾರ್ಮೋನಿಯಂ ಅಭ್ಯಾಸ ಮಾಡುತ್ತಲೇ ಬೆಳೆದ ಶೇಖ್‌ ಮಾಸ್ತರ್ ವೃತ್ತಿ ರಂಗಭೂಮಿಯಲ್ಲಿ ಅನುಪಮ ಸೇವೆ ಸಲ್ಲಿಸಿದ್ದಾರೆ.

1983ರಲ್ಲಿ ಹಾನಗಲ್ಲ ಶ್ರೀ ಗುರು ಕುಮಾರೇಶ್ವರ ನಾಟ್ಯ ಸಂಘ ಸ್ಥಾಪಿಸಿ ಸುಮಾರು 50 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.

2003–06ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿ, 2014ರಿಂದ 2017ರವರೆಗೆ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಹಿರಿಯ ವೃತ್ತಿ ಕಲಾವಿದರ ಕುರಿತು ‘ರಂಗ ಸಂಪನ್ನರು’ ಮತ್ತು ‘ಜಿಲ್ಲಾ ರಂಗಭೂಮಿ ಮಾಹಿತಿ’ ಮಾಲಿಕೆಯ ಪುಸ್ತಕಗಳ ಪ್ರಕಟಣೆಯಂಥ ಮಹತ್ವದ ಕಾರ್ಯಗಳನ್ನು ಮಾಡಿದರು.  

ರಂಗ ಆರಾಧಕ, ರಂಗಕೇಸರಿ, ಕುಮಾರಶ್ರೀ, ಬಸವಶಾಂತಿ, ಜೋಳದ ರಾಶಿ ದೊಡ್ಡನಗೌಡ, ಗುಬ್ಬಿ ವೀರಣ್ಣ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿಗಳಿಗೆ ಈ ಮಾಸ್ತರ ಭಾಜನರಾಗಿದ್ದಾರೆ.

ಸೋಮಣ್ಣ ಧನಗೊಂಡ
ಹ.ಮ. ಪೂಜಾರ
ನನ್ನ ನಿಸ್ವಾರ್ಥ ಸೇವೆ ಸಮಾಜಮುಖಿ ಕಾರ್ಯವನ್ನು ಸರ್ಕಾರ ಗುರುತಿಸಿ ರಾಜ್ಯೋತ್ಸವ ಪುರಸ್ಕಾರ ನೀಡಿರುವುದು ಖುಷಿ ತಂದಿದೆ. ರಂಗಭೂಮಿ ಎಲ್ಲವನ್ನೂ ಕೊಟ್ಟಿದೆ. ಇನ್ನಷ್ಟು ಹೊಸ ಕಾರ್ಯ ಮಾಡಲು ಪ್ರೇರೇಪಿಸಿದೆ
ಎಲ್.ಬಿ. ಶೇಖ್‌ ಮಾಸ್ತರ ರಂಗಭೂಮಿ ಕಲಾವಿದ
ಯಾವುದೇ ಪ್ರಶಸ್ತಿ ಪುರಸ್ಕಾರದ ಆಸೆ ನಿರೀಕ್ಷೆ ಇರಲಿಲ್ಲ ನಿಷ್ಕಾಮಭಕ್ತಿಯಿಂದ ದುಡಿದಿದ್ದೇನೆ. ನಕಲಿ ಜಾನಪದ ಹಾಡುಗಳನ್ನು ಬಿಟ್ಟು ಮೂಲ ಸಂಸ್ಕೃತಿ ಪರಂಪರೆ ಉಳಿಸಬೇಕಿದೆ
ಸೋಮಣ್ಣ ಧನಗೊಂಡ ಜಾನಪದ ಕಲಾವಿದ
ಬದುಕಿನ ಮುಸ್ಸಂಜೆಯಲ್ಲಿ ರಾಜ್ಯೋತ್ಸವ ಪರಸ್ಕಾರಕ್ಕೆ ಸರ್ಕಾರ ಆಯ್ಕೆ ಮಾಡಿರುವುದು ಖುಷಿ ತಂದಿದೆ. ಸಂಕೀರ್ಣ ಕ್ಷೇತ್ರಕ್ಕೆ ಪ್ರಶಸ್ತಿ ದೊರಕಿದ್ದರೆ ಇನ್ನೂ ಖುಷಿಯಾಗುತ್ತಿತ್ತು
ಹ.ಮ. ಪೂಜಾರ ಮಕ್ಕಳ ಸಾಹಿತಿ

ಮಕ್ಕಳ ಸಾಹಿತಿ ಹ.ಮ. ಪೂಜಾರ

ಸಿಂದಗಿ: ಮಕ್ಕಳ ಸಾಹಿತಿ ನಿವೃತ್ತ ಶಿಕ್ಷಕ ಹ.ಮ. ಪೂಜಾರ ಅವರು 10 ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಎರಡು ಸಂಪಾದಿತ ಕೃತಿಗಳನ್ನು ಪ್ರಕಟಿಸಿದ್ದಾರೆ. ಕರ್ನಾಟಕ ಮತ್ತು ಮಹಾರಾಷ್ಟ್ರ ಪಠ್ಯಪುಸ್ತಕಗಳಲ್ಲಿ ಇವರ ಸಾಹಿತ್ಯ ಅಡಕವಾಗಿವೆ. ಮಕ್ಕಳ ವಿಕಸನಕ್ಕಾಗಿ ವಿವಿಧ ಮಕ್ಕಳ ಕಾರ್ಯಕ್ರಮಗಳ ಆಯೋಜನೆ ಮಾಡಿದ್ದಾರೆ.  ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಗೌರವ ಪ್ರಶಸ್ತಿ ಮಕ್ಕಳ ಮಿತ್ರ ಶಿಕ್ಷಣ ಸಿರಿ ಕರ್ನಾಟಕ ಶಿಕ್ಷಕ ಶ್ರೀಗುರು ಪ್ರಶಸ್ತಿ ಡೆಪ್ಯುಟಿ ಚೆನ್ನಬಸಪ್ಪ ಪ್ರಶಸ್ತಿ ಲಭಿಸಿದೆ. 2013ರಲ್ಲಿ ಸಿಂದಗಿ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು. ಶೈಕ್ಷಣಿಕ ಕ್ಷೇತ್ರ ಮಕ್ಕಳ ವಿಕಸನಕ್ಕಾಗಿ ಸಂಘಟನಾತ್ಮಕ ಶ್ರಮವಹಿಸಿದ್ದಾರೆ. ಮಕ್ಕಳ ಬಳಗ ಈಗ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಮನೆ ಅಂಗಳದಲ್ಲಿ ಚಿಲಿಪಿಲಿ ಶಾಲಾ ಆವರಣದಲ್ಲಿ ಮಕ್ಕಳ ಕಲರವ ತಾಲ್ಲೂಕು ಮಟ್ಟದ ಚಿಣ್ಣರ ನುಡಿಸಿರಿ ಮಕ್ಕಳ ಹಬ್ಬ ಆಚರಣೆ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳು ಇನ್ನೂ ಮುಂದುವರೆದಿವೆ. ವಿದ್ಯಾಚೇತನ ಪ್ರಕಾಶದಿಂದ ಹಲವಾರು ಪುಸ್ತಕಗಳು ಪ್ರಕಟಗೊಂಡಿವೆ. ಶಿಕ್ಷಕ ವೃತ್ತಿಯಲ್ಲಿಯೇ ಮಕ್ಕಳ ಏಳ್ಗೆಗಾಗಿ ಯಾವುದೇ ಫಲಾಪೇಕ್ಷೆ ಇಲ್ಲದೇ ದುಡಿದಿದ್ದಾರೆ. ತಮ್ಮ ಪಿಂಚಣಿ ಹಣದಲ್ಲಿಯೇ ಕಾರ್ಯಕ್ರಮಗಳನ್ನು ಸಂಘಟಿಸುತ್ತ ಬಂದಿದ್ದಾರೆ. ಈ ಸೇವೆ ಗುರುತಿಸಿ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿ ರಾಷ್ಟ್ರಮಟ್ಟದ ಶಿಕ್ಷಕ ಪ್ರಶಸ್ತಿಗಳು ಕೂಡ ನಿವೃತ್ತಿ ಅಂಚಿನಲ್ಲಿಯೇ ಬಂದಿವೆ.

ಜಾನಪದ ಕಲಾವಿದ ಧನಗೊಂಡ 

ತಿಕೋಟಾ ತಾಲ್ಲೂಕಿನ ಬಿಜ್ಜರಗಿಯವರಾದ ಸೋಮಣ್ಣ ಧನಗೊಂಡ ಅವರು ಡೊಳ್ಳಿನ ಹಾಡುಗಳನ್ನು ಮತ್ತು ಡೊಳ್ಳು ಕುಣಿತ ಜಾನಪದ ಕಲೆಯನ್ನು ಮೈಗೂಡಿಕೊಂಡು ಬೆಳೆದವರು. ಜಾನಪದ ಕಲಾವಿದರಾದ ಇವರು ಅನೇಕ ಕಲಾವಿದರಿಗೆ ತರಬೇತಿ ನೀಡಿ ಕಲಾವಿದರನ್ನು ಬೆಳೆಸಿದ್ದಾರೆ. ಇವರಿಗೆ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ ಜಾನಪದ ಅಕಾಡೆಮಿ ಪ್ರಶಸ್ತಿ ಕರ್ನಾಟಕ ಜಾನಪದ ಪರಿಷತ್‌ನಿಂದ ಲೋಕಸಿರಿ ಪ್ರಶಸ್ತಿ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಕಲಾ ಸೇವೆಯನ್ನು ಗುರುತಿಸಿ ಗೌರವಿಸಿವೆ. 12ನೇ ವಯಸ್ಸಿನಿಂದಲೇ ಡೊಳ್ಳಿನ ಪದ ಹಾಡಲು ಆರಂಭಿಸಿದ ಇವರು ಕಳೆದ 65 ವರ್ಷಗಳಿಂದ ನಿರಂತರವಾಗಿ ಡೊಳ್ಳಿನ ಪದಗಳನ್ನು ಹಾಡುತ್ತ ಬಂದಿದ್ದಾರೆ. 1992ರಲ್ಲಿ ‘ಅಶ್ವಿನಿ ಕ್ಯಾಸೆಟ್‌’  ಪ್ರಥಮ ಬಾರಿಗೆ ಸೋಮಣ್ಣ ಧನಗೊಂಡ ಅವರ ಡೊಳ್ಳಿನ ಧ್ವನಿ ಸುರುಳಿಯನ್ನು ಹೊರತಂದಿದೆ. ಇವರನ್ನು ‘ಡೊಳ್ಳಿನ ಹಾಡಿನ ಪಿತಾಮಹ’ ಎಂದು ಕರೆಯಲಾಗುತ್ತದೆ. ಇವರ ಹೆಸರಿನಲ್ಲಿ ಅನೇಕ ಯುಟ್ಯೂಬ್‌ ಚಾನಲ್‌ಗಳು ಪ್ರಸಿದ್ಧವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.