ವಿಜಯಪುರ: ‘ಕೌದಿಯ ಸೌಂದರ್ಯ ಎಲ್ಲರಿಗೂ ಗೋಚರಿಸುತ್ತದೆ. ಆದರೆ, ಸೂಕ್ಷ್ಮ ಕಲಾ ಪ್ರಕಾರದ ಹಿಂದಿನ ಶ್ರಮ ಕಣ್ಣಿಗೆ ಕಾಣುವುದಿಲ್ಲ. ಒಂದು ರೀತಿ ಕೌದಿ ಭಾರತದ ಬಹುಸಂಸ್ಕೃತಿಯನ್ನು ಪ್ರತಿಬಿಂಬಿಸುವ ಬಟ್ಟೆಯಾಗಿದೆ’ ಎಂದು ರಂಗಕಲಾವಿದೆ ಬಿ. ಜಯಶ್ರೀ ಹೇಳಿದರು.
ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಗೀತಾಂಜಲಿ ಶಾಲೆಯ ಬೆಳ್ಳಿ ಮಹೋತ್ಸವ ಸಮಾರಂಭ ಹಾಗೂ ಸಬಲಾ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
‘ಕಸೂತಿ ಕಲೆ, ಲಂಬಾಣಿ ಉಡುಪುಗಳ ವಿನ್ಯಾಸ, ಕೌದಿಯಲ್ಲಿರುವ ಸೂಕ್ಷ್ಮ ಕಲಾ ಪ್ರಕಾರಗಳ ಹಿಂದೆ ಮಹಿಳೆಯ ಶ್ರಮ ಅಡಗಿದೆ. ಸೂಕ್ಷ್ಮ ಕಲಾ ವಿನ್ಯಾಸವನ್ನು ಕಣ್ಣಲ್ಲಿ ಕಣ್ಣಿಟ್ಟು ಮಾಡಬೇಕಾಗುತ್ತದೆ. ಅದರ ಹಿಂದಿನ ಶ್ರಮಕ್ಕೆ ನಾವು ಬೆಲೆ ಕಟ್ಟಲು ಸಾಧ್ಯವೇ ಇಲ್ಲ’ ಎಂದರು.
‘ಕಷ್ಟ-ಕಾರ್ಪಣ್ಯಗಳು ಬದುಕಿನಲ್ಲಿ ಎದುರಾಗುವುದು ಸಹಜ. ಆದರೆ, ಅದನ್ನು ಮೆಟ್ಟಿ ನಿಲ್ಲಬೇಕು, ಸಾಧನೆಯ ಹಿಂದೆ ನೋವಿನ ಕಥೆ ಇದ್ದೇ ಇರುತ್ತದೆ. ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಬೋಧನೆ ಮಾಡಬೇಕು, ಉತ್ತಮ ಶಿಕ್ಷಣವನ್ನು ಕೊಡಿಸಬೇಕು’ ಎಂದು ಹೇಳಿದರು.
ಸಬಲಾ ಸಂಸ್ಥೆಯ ಅಧ್ಯಕ್ಷೆ ಮಲ್ಲಮ್ಮ ಯಾಳವಾರ ಮಾತನಾಡಿ, ‘ಸಬಲಾ ಸಂಸ್ಥೆ ಮಹಿಳೆಯರ ಸಬಲೀಕರಣಕ್ಕಾಗಿ ಕಳೆದ 37 ವರ್ಷಗಳಿಂದ ಶ್ರಮಿಸುತ್ತಿದೆ. ಅದರ ಅಡಿಯಲ್ಲಿ ಆರಂಭವಾದ ಗೀತಾಂಜಲಿ ಶಾಲೆ ಕಳೆದ 25 ವರ್ಷಗಳಿಂದ ವಿದ್ಯಾರ್ಜನೆಯ ಕಾರ್ಯ ಮಾಡುತ್ತಿದೆ’ ಎಂದರು.
ಸಬಲಾ ಸಂಸ್ಥೆಯ ಸಹೋದರ ಸಂಸ್ಥೆಯಾಗಿರುವ ಚೈತನ್ಯ ಮಹಿಳಾ ಬ್ಯಾಂಕ್ 25ನೇ ವಾರ್ಷಿಕೋತ್ಸವ ಆಚರಿಸಿಕೊಂಡಿದೆ. ಸಾಧಕ ಮಹಿಳೆಯರನ್ನು ಗುರುತಿಸಿ ಪ್ರತಿ ವರ್ಷ ಸಬಲಾ ಪುರಸ್ಕಾರ ನೀಡುವ ನಿರ್ಣಯ ಕೈಗೊಳ್ಳಲಾಗಿದೆ. ಈ ಪರಂಪರೆ ಮುಂದೆಯೂ ನಡೆಯಲಿ ಎಂಬ ಅಭಿಲಾಷೆಯೊಂದಿಗೆ ಈ ಕಾರ್ಯಕ್ಕಾಗಿ ₹8 ಲಕ್ಷವನ್ನು ಠೇವಣಿ ಇರಿಸಿ ಅದರ ಲಾಭಾಂಶದಲ್ಲಿ ಪ್ರಶಸ್ತಿಯ ನಗದು ಪುರಸ್ಕಾರ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಕೌದಿ ಕಸೂತಿ ಲಂಬಾಣಿ ಉಡುಪಿಗೆ ಅಂತರರಾಷ್ಟ್ರೀಯ ಮಾರುಕಟ್ಟೆ ಒದಗಿಸಿ ಮಹಿಳೆಯರನ್ನು ‘ಸಬಲ’ರನ್ನಾಗಿಸುವ ಕಾರ್ಯದಲ್ಲಿ ತೊಡಗಿರುವ ಮಲ್ಲಮ್ಮರ ಕಾರ್ಯ ಶ್ಲಾಘನೀಯಬಿ. ಜಯಶ್ರೀರಂಗಕಲಾವಿದೆ
ಸಬಲಾ ಪುರಸ್ಕಾರ ಪ್ರದಾನ
ಕೈಗಾರಿಕೋದ್ಯಮಿಯಾಗಿ ಮುನ್ನಡೆಯುತ್ತಿರುವ ಚಿನ್ನಮ್ಮ ಮುದ್ದಿನಗುಡಿ ಹಾಗೂ ಜಾನಪದ ಕಲಾವಿದೆ ಎಸ್.ಸಿ. ಲಕ್ಷ್ಮಿ ದೇವಮ್ಮ ಅವರಿಗೆ ತಲಾ ₹25 ಸಾವಿರ ನಗದು ಸ್ಮರಣಿಕೆ ಒಳಗೊಂಡ ಸಬಲಾ ಪುರಸ್ಕಾರ ನೀಡಿ ಗೌರವಿಸಲಯಿತು. ಅಕ್ಕಮಹಾದೇವಿ ಮಹಿಳಾ ವಿವಿ ವಿಶ್ರಾಂತ ಕುಲಪತಿ ಸಬೀಹಾ ಭೂಮಿಗೌಡ ಆರ್. ಸುನಂದಮ್ಮ ವೈದ್ಯ ಡಾ.ಮಯೂರ್ ಕಾಕು ವಿಶ್ರಾಂತ ಸಿಪಿಐ ಬಾಗೇವಾಡಿ ಚೈತನ್ಯ ಬ್ಯಾಂಕ್ ಸಬಲಾ ಸಂಸ್ಥೆ ಹಾಗೂ ಗೀತಾಂಜಲಿ ಶಾಲೆಯ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.