ADVERTISEMENT

ಮಳೆ ಆಗುವವರೆಗೂ ಟ್ಯಾಂಕರ್ ನೀರು

ಜಿಲ್ಲಾ ಮಟ್ಟದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಸಭೆಯಲ್ಲಿ ನಿರ್ಣಯ

​ಪ್ರಜಾವಾಣಿ ವಾರ್ತೆ
Published 29 ಜೂನ್ 2019, 15:33 IST
Last Updated 29 ಜೂನ್ 2019, 15:33 IST
ವಿಜಯಪುರದಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ಜರುಗಿತು (ಎಡ ಚಿತ್ರ) ಕೆಡಿಪಿ ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ್ ಮಾತನಾಡಿದರು
ವಿಜಯಪುರದಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ಜರುಗಿತು (ಎಡ ಚಿತ್ರ) ಕೆಡಿಪಿ ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ್ ಮಾತನಾಡಿದರು   

ವಿಜಯಪುರ: ಮಳೆ ಆಗಿ, ನೀರಿನ ಮೂಲಗಳು ತುಂಬುವವರೆಗೂ ಸಮಸ್ಯಾತ್ಮಕ ಗ್ರಾಮ/ ಬಡಾವಣೆಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಶನಿವಾರ ಇಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ನಗರದ ವನಶ್ರೀ ಮಂಗಲ ಕಾರ್ಯಾಲಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಗೃಹ ಸಚಿವ ಎಂ.ಬಿ.ಪಾಟೀಲ ಅವರ ಸೂಚನೆಯಂತೆ ಈ ನಿರ್ಣಯ ಕೈಗೊಳ್ಳಲಾಯಿತು.

ಕುಡಿಯುವ ನೀರಿನ ಬಗ್ಗೆ ಸಭೆಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ‘108 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. 49 ಖಾಸಗಿ ಕೊಳವೆ ಬಾವಿಗಳಿಂದ ನೀರು ಪಡೆಯಲಾಗುತ್ತಿದೆ. ಇಂಡಿಯಲ್ಲಿ ಖಾಸಗಿ ಕೊಳವೆ ಬಾವಿಗಳು ಬತ್ತಿ ಹೋಗಿವೆ. ನೀರು ಪೂರೈಕೆ ಮಾಡಿದವರಿಗೆ 15 ದಿನಗಳಿಗೊಮ್ಮೆ ಹಣ ಪಾವತಿಸಬೇಕು. ಆದರೆ, ಸದ್ಯ ತಿಂಗಳಿಗೊಮ್ಮೆ ಪಾವತಿಸಲಾಗುತ್ತಿದೆ’ ಎಂದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಯಶವಂತರಾಯಗೌಡ ಪಾಟೀಲ, ‘ಜನರ ಬಗ್ಗೆ ಕಾಳಜಿ ವಹಿಸಲು ನಾವೆಲ್ಲರೂ ಇಲ್ಲಿ ಸೇರಿದ್ದೇವೆ. ಅಧಿಕಾರ ಶಾಶ್ವತವಲ್ಲ. ಇದ್ದಷ್ಟು ದಿನ ಕೆಲಸ ಮಾಡಬೇಕು. ಮಳೆ ಆಗದಿದ್ದರೆ ಮುಂದೇನು ಮಾಡಬೇಕು ಎಂಬುದರ ಬಗ್ಗೆ ಗಂಭೀರ ಚರ್ಚೆ ನಡೆಯಬೇಕು’ ಎಂದು ಒತ್ತಾಯಿಸಿದರು.

ಸಚಿವ ಎಂ.ಬಿ.ಪಾಟೀಲ ಮಾತನಾಡಿ, ‘ಟ್ಯಾಂಕರ್ ನೀರು ಪೂರೈಕೆ ಅವಧಿ ಜೂನ್ 30ಕ್ಕೆ ಮುಗಿಯಲಿದೆ. ಆ ಬಳಿಕ ನೀರು ಪೂರೈಕೆ ಮಾಡಿದರೆ ಹಣ ಕೊಡುವವರು ಯಾರು?, ಈ ಹಿಂದೆ ಪೂರೈಕೆ ಮಾಡಿದವರಿಗೆ ಇದುವರೆಗೂ ಹಣ ಪಾವತಿಸಿಲ್ಲ. ಆದ್ದರಿಂದ, ಕೆಡಿಪಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲು ಸಲಹೆ ನೀಡಿದ್ದೇನೆ’ ಎಂದರು.

ಪಶುಸಂಗೋಪನಾ ಇಲಾಖೆ ಅಧಿಕಾರಿ ಜಾಗೀರದಾರ ಮಾತನಾಡಿ, ‘ನೀರಾವರಿ ಸೌಲಭ್ಯವುಳ್ಳ ರೈತರಿಗೆ ಮೇವಿನ ಬೀಜಗಳನ್ನು ವಿತರಿಸಿ, ಮೇವು ಬೆಳೆಸಿ ಖರೀದಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ 25 ಸಾವಿರ ಮೆಟ್ರಿಕ್ ಟನ್ ಮೇವು ಬೀಜಗಳನ್ನು ವಿತರಿಸಲು ತೀರ್ಮಾನಿಸಲಾಗಿದೆ’ ಎಂದು ಹೇಳಿದರು.

ರೈತರಿಗೆ ‘ಹುಳಿ’ಯಾದ ನಿಂಬೆ: ‘ನಿಂಬೆ ಅಭಿವೃದ್ಧಿ ಮಂಡಳಿಯಿಂದ ನಿಂಬೆ ಗಿಡ ಒಣಗಿರುವ ರೈತರಿಗೆ ಪ್ರತಿ ಗಿಡಕ್ಕೆ ₹100 ಸಹಾಯಧನ ನೀಡಬೇಕು ಎಂದು ಆರು ತಿಂಗಳ ಹಿಂದೆಯೇ ನಿರ್ಣಯಕೈಗೊಳ್ಳಲಾಗಿತ್ತು. ಆದರೆ, ಇದುವರೆಗೆ ಏಕೆ ವಿತರಿಸಿಲ್ಲ’ ಎಂದು ಯಶವಂತರಾಯಗೌಡ ಪಾಟೀಲ ಅವರು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಸಂತೋಷ ಇನಾಮದಾರ ಅವರನ್ನು ಪ್ರಶ್ನಿಸಿದರು.

‘ನಿಂಬೆ ಅಭಿವೃದ್ಧಿ ಮಂಡಳಿ ಇನ್ನೊಂದು ಗಂಜಿ ಕೇಂದ್ರವಾಗಬಾರದು ಎಂಬುದು ನನ್ನ ಉದ್ದೇಶ. ಇದು ಮಂಡಳಿ ಆಗಿರುವುದರಿಂದ ಸರ್ಕಾರಕ್ಕೆ ಪತ್ರ ಬರೆಯುವ ಅಗತ್ಯವಿಲ್ಲ. ಮಂಡಳಿಗೆ ಸರ್ಕಾರ ಬಿಡುಗಡೆ ಮಾಡಿರುವ ₹2 ಕೋಟಿ ಅನುದಾನವನ್ನು ನಿಂಬೆ ಬೆಳೆಗಾರರಿಗೆ ನೀಡಬಹುದು. ಈ ಕೆಲಸವನ್ನು ಆದಷ್ಟು ಬೇಗ ಮಾಡಬೇಕು. ಇಲ್ಲವಾದಲ್ಲಿ ಅಧಿವೇಶನದಲ್ಲಿ ಈ ಬಗ್ಗೆ ಖಾರವಾಗಿ ಧ್ವನಿ ಎತ್ತುತ್ತೇನೆ’ ಎಂದು ಹೇಳಿದರು.

ಶಾಸಕರಾದ ದೇವಾನಂದ ಚವ್ಹಾಣ್, ಸೋಮನಗೌಡ ಸಾಸನೂರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ, ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹಮ್ಮದ್ ಮೊಹಸೀನ್, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.