ADVERTISEMENT

ಮಲ್ಲಿಕಾರ್ಜುನ ಖರ್ಗೆ ನಾಮಕವಾಸ್ತೆ ಎಐಸಿಸಿ ಅಧ್ಯಕ್ಷ: ಗೋವಿಂದ ಕಾರಜೋಳ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 14:27 IST
Last Updated 24 ನವೆಂಬರ್ 2025, 14:27 IST
<div class="paragraphs"><p>ಗೋವಿಂದ ಕಾರಜೋಳ</p></div>

ಗೋವಿಂದ ಕಾರಜೋಳ

   

ವಿಜಯಪುರ: ‘ಮುಖ್ಯಮಂತ್ರಿ ಬದಲಾವಣೆ ಹೈಕಮಾಂಡ್ ನಿರ್ಣಯ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಆ ಮೂಲಕ ಅವರನ್ನು ನಾಮಕವಾಸ್ತೆ ಅಧ್ಯಕ್ಷರನ್ನಾಗಿ ಮಾಡಲಾಗಿದೆ, ದಲಿತ ಬಾಂಧವರನ್ನು ಕೇವಲ ಗುಲಾಮರನ್ನಾಗಿ ಕಾಂಗ್ರೆಸ್ ಬಳಕೆ ಮಾಡಿಕೊಳ್ಳುತ್ತಿದೆಯೇ ಹೊರತು, ಅವರನ್ನು ಎಂದೂ ಮುಖ್ಯಮಂತ್ರಿ ಮಾಡುವುದಿಲ್ಲ’ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಐಸಿಸಿ ಅಧ್ಯಕ್ಷರೇ ಕಾಂಗ್ರೆಸ್ ಹೈಕಮಾಂಡ್ ಎಂದು ನಾವು ತಿಳಿದಿದ್ದೆವು. ಆದರೆ, ಮುಖ್ಯಮಂತ್ರಿ ಬದಲಾವಣೆ ಹೈಕಮಾಂಡ್ ನಿರ್ಣಯ ಎಂದು ಖರ್ಗೆ ಅವರೇ ಹೇಳಿದ್ದಾರೆ. ಹಾಗಾದರೆ ಅವರು ನಾಮಕವಾಸ್ತೆ ಅಧ್ಯಕ್ಷರು, ಎಲ್ಲ ಅಧಿಕಾರವು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರಲ್ಲಿ ಕೇಂದ್ರಿಕೃತವಾಗಿದೆ, ದಲಿತ ನಾಯಕರಿಗೆ ಅವರು ಜವಾಬ್ದಾರಿ ನೀಡುವುದಿಲ್ಲ, ಕಾಂಗ್ರೆಸ್ ಕೇವಲ ದಲಿತರನ್ನು ವೋಟ್ ಬ್ಯಾಂಕ್ ಆಗಿ ಮಾಡಿಕೊಂಡಿದೆ, ಗುಲಾಮರನ್ನಾಗಿ ನಡೆಸಿಕೊಳ್ಳುತ್ತಿದೆ, ಅವರು ಗೌರವದಿಂದ ಬಾಳುವಂತೆ ಮಾಡಿಲ್ಲ, ಹೀಗಾಗಿ ದಲಿತ ಬಾಂಧವರು ಅವರನ್ನು ಬಿಟ್ಟು ಹೊರಬರಬೇಕು’ ಎಂದರು.

ADVERTISEMENT

‘ಕುದುರೆ ವ್ಯಾಪಾರವಂತೂ ಭರ್ಜರಿಯಾಗಿ ನಡೆಯುತ್ತಿದೆ. ₹50 ಕೋಟಿ, ₹75 ಕೋಟಿ ತಲುಪಿರುವ ಕುದುರೆ ವ್ಯಾಪಾರ ₹100 ಕೋಟಿಗಳಿಗೂ ಕೆಲವು ಶಾಸಕರಿಗೆ ಆಫರ್ ನೀಡಲಾಗುತ್ತಿದೆಯಂತೆ. ಆದರೆ, ಬಿಜೆಪಿ ಯಾವ ಕಾರಣಕ್ಕೂ ಸರ್ಕಾರ ರಚಿಸುವ ಪ್ರಯತ್ನ ಮಾಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಡಿ.ಕೆ. ಶಿವಕುಮಾರ್‌ ಅವರೊಂದಿಗೆ ಸೇರಿ ಸರ್ಕಾರ ರಚನೆ ಮಾಡುವ ಯಾವ ಪ್ರಸ್ತಾವನೆಯೂ ಬಿಜೆಪಿಯ ಮುಂದೆ ಇಲ್ಲ, ಇನ್ನೂ ಕಾಂಗ್ರೆಸ್‌ನಲ್ಲಿ ಹಲವಾರು ಬಣಗಳು ರೂಪು ತಾಳಿವೆ, ನಾನು ಸಿ.ಎಂ., ನಾನು ಸಿ.ಎಂ. ಎಂದು ಅನೇಕರು ತಮ್ಮ ಬೆನ್ನು ತಾವೇ ತಟ್ಟಿಕೊಂಡು ರೇಸ್‌ನಲ್ಲಿದ್ದೇವೆ ಎಂದು ಹೇಳಿಕೊಳ್ಳುತ್ತಾ ಹೊರಟಿದ್ದಾರೆ’ ಎಂದರು.

‘ದಲಿತ ನಾಯಕ ಡಾ.ಜಿ. ಪರಮೇಶ್ವರ್‌ ಅವರನ್ನು ಏಕೆ ಇಲ್ಲಿಯವರೆಗೆ ಮುಖ್ಯಮಂತ್ರಿಯಾಗಿ ಘೋಷಣೆ ಮಾಡಲಿಲ್ಲ?’ ಎಂದು ಪ್ರಶ್ನಿಸಿದರು.

‘ಸರ್ಕಾರವನ್ನು ಈ ಕಾಂಗ್ರೆಸ್ ಪಕ್ಷ ಒಂದು ರೀತಿ ಹರಾಜಿಗೆ ಇಟ್ಟಂತೆ ಮಾಡಿಬಿಟ್ಟಿದೆ, ಆಡಳಿತ ನಿಷ್ಕ್ರೀಯವಾಗಿದೆ, ರೈತರ ಕಂಗಾಲಾಗಿದ್ದಾರೆ, ಈಗಾಗಲೇ ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ ₹2400  ದರ ನಿಗದಿಗೊಳಿಸಿದೆ. ಆದರೆ, ಖರೀದಿ ಕೇಂದ್ರ ಪ್ರಾರಂಭಿಸುವ ಕನಿಷ್ಠ ಜವಾಬ್ದಾರಿಯನ್ನೂ ಈ ರಾಜ್ಯ ಕಾಂಗ್ರೆಸ್ ಮಾಡುತ್ತಿಲ್ಲ, ನಾಯಕರು ಕೇವಲ ಕುರ್ಚಿಗಾಗಿ ಪ್ರತಿನಿತ್ಯ ಹೋರಾಟ ಮಾಡಿ ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಎನ್‌ಡಿಆರ್‌ಎಫ್ ಮಾನದಂಡಕ್ಕಿಂತಲೂ ಹೆಚ್ಚಿಗೆ ರೈತರಿಗೆ ಪರಿಹಾರ ನೀಡಲಾಗಿತ್ತು, ಮನೆ ಕಳೆದುಕೊಂಡವರಿಗೆ ಎನ್‌ಡಿಆರ್‌ಎಫ್ ಪ್ರಕಾರ ₹95 ಸಾವಿರ ಪರಿಹಾರ ನೀಡಬೇಕಿದ್ದ ಸಮಯದಲ್ಲಿ ₹5 ಲಕ್ಷ ಪರಿಹಾರ ನೀಡಿದ್ದು, ನಮ್ಮ ಬಿಜೆಪಿ ಸರ್ಕಾರ. ಆದರೆ, ಈಗಿರುವ ಕಾಂಗ್ರೆಸ್‌ಗೆ ಇದರ ಯಾವ ಪರಿವೆಯೇ ಇಲ್ಲ, ರೈತರ ಕಾಳಜಿಂತೂ ಇಲ್ಲವೇ ಇಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.