ವಿಜಯಪುರ: ‘ರಾಜ್ಯದಲ್ಲಿ 1999ರಲ್ಲಿ ವಿರೋಧ ಪಕ್ಷದ ನಾಯಕನಾಗಿ ಹೋರಾಟ ಮಾಡಿದೆ, ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದೆ. ಆದರೆ, ನಾಲ್ಕು ತಿಂಗಳಲ್ಲಿ ಪಕ್ಷ ಸೇರಿದ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾದರು. ರಾಜಕೀಯವಾಗಿ ಅವಕಾಶ ತಪ್ಪಿರುವ ಬಗ್ಗೆ ಬೇಸರವಿಲ್ಲ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ನಗರದ ಬಿಎಲ್‌ಡಿಇ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಫ.ಗು.ಹಳಕಟ್ಟಿ, ಬಂಥನಾಳ ಸಂಗನಬಸವ ಶಿವಯೋಗಿಗಳು, ಬಿ.ಎಂ.ಪಾಟೀಲ ಮತ್ತು ಬಂಗಾರಮ್ಮ ಸಜ್ಜನ ಸ್ಮರಣೆ ಕಾರ್ಯಕ್ರಮದಲ್ಲಿ ಭಾನುವಾರ ಅವರು ಮಾತನಾಡಿದರು.
‘ನಾನು ಎಂದೂ ಅಧಿಕಾರದ ಹಿಂದೆ ಹೋಗಿಲ್ಲ, ನನ್ನ ಪ್ರಯತ್ನಗಳ ಫಲವಾಗಿ ಅಧಿಕಾರ ಪಡೆದುಕೊಂಡಿದ್ದೇನೆ. ಕಾಂಗ್ರೆಸ್ ಅಧ್ಯಕ್ಷ ಹುದ್ದೆಯಿಂದ ಎಐಸಿಸಿ ಹುದ್ದೆವರೆಗೂ ಬಂದಿರುವೆ, ಮನಸ್ಸಿನಲ್ಲಿ ದುರಾಸೆ ಇಟ್ಟುಕೊಂಡು ಮಾಡುವ ಕೆಲಸಗಳಿಂದ ಏನೂ ಮಾಡಲು ಸಾಧ್ಯವಿಲ್ಲ’ ಎಂದರು.
‘ಆರು ವರ್ಷದ ಬಾಲಕನಾಗಿದ್ದಾಗ ರಜಾಕರ ಹಾವಳಿಯಲ್ಲಿ ನನ್ನ ತಾಯಿ, ಸಹೋದರಿಯನ್ನು ಕಳೆದುಕೊಂಡೆ, ತಂದೆಯ ಆಸರೆಯಲ್ಲಿ ಬೆಳೆದೆ’ ಎಂದು ಖರ್ಗೆ ಅವರು ತಮ್ಮ ಜೀವನದ ಅನೇಕ ಘಟನೆಗಳನ್ನು ನೆನಪಿಸಿಕೊಂಡು ಕ್ಷಣಹೊತ್ತು ಭಾವುಕರಾದರು.
ರಾಜೀನಾಮೆಗೆ ಕಾರಣ ಧನಕರ್ ಹೇಳಬೇಕು: ‘ಉಪ ರಾಷ್ಟ್ರಪತಿ ಹುದ್ದೆಗೆ ದಿಢೀರನೆ ರಾಜೀನಾಮೆ ನೀಡಲು ಕಾರಣವೇನು ಎಂಬುದನ್ನು ಧನಕರ್ ಅವರೇ ಹೇಳಬೇಕು’ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
‘ಉಪರಾಷ್ಟ್ರಪತಿ ಹುದ್ದೆಗೆ ಏಕೆ ರಾಜೀನಾಮೆ ನೀಡಿದ್ದಾರೆ ಎಂಬುದು ಮೋದಿ ಮತ್ತು ಧನಕರ್ ಅವರಿಗೇ ಗೊತ್ತು. ಅವರ ನಡುವೆ ಏನಾಗಿದೆ ಎಂಬುದು ಗೊತ್ತಿಲ್ಲ’ ಎಂದರು.
‘ಧನಕರ್ ಅವರು ಯಾವಾಗಲೂ ಕೇಂದ್ರ ಸರ್ಕಾರದ ಪರವಾಗಿಯೇ ಇದ್ದರು. ನಮಗೆ ರೈತರ ಸಮಸ್ಯೆಗಳ ಬಗ್ಗೆ, ಬಡವರ ಸಂಕಷ್ಟಗಳ ಬಗ್ಗೆ, ಅಂತರರಾಷ್ಟ್ರೀಯ ವಿಷಯಗಳ ಬಗ್ಗೆ ಮಾತನಾಡಲು ಅವಕಾಶವನ್ನೇ ನೀಡುತ್ತಿರಲಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.