ADVERTISEMENT

ವಿಜಯಪುರ | ಕೊಲ್ಹಾರ ಪ್ರಜಾಸೌಧ, ಬಸ್‌ ಡಿಪೊ: ಅಪಸ್ವರ ಬೇಡ

ಸ್ಥಳೀಯರ ಒಕ್ಕೋರಲ ಅಭಿಪ್ರಾಯದಂತೆ ನಿರ್ಧಾರ: ಸಚಿವ ಶಿವಾನಂದ ಪಾಟೀಲ

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 5:30 IST
Last Updated 16 ಜುಲೈ 2025, 5:30 IST
ಕೊಲ್ಹಾರ ಪಟ್ಟಣದಲ್ಲಿ ಪ್ರಜಾಸೌಧ ಹಾಗೂ ಬಸ್ ಡಿಪೊ ಸ್ಥಳ ಬದಲಾವಣೆ ಮಾಡುವಂತೆ ಕೋರಿ ಸ್ಥಳೀಯರು ಸಚಿವ ಶಿವಾನಂದ ಪಾಟೀಲ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು
ಕೊಲ್ಹಾರ ಪಟ್ಟಣದಲ್ಲಿ ಪ್ರಜಾಸೌಧ ಹಾಗೂ ಬಸ್ ಡಿಪೊ ಸ್ಥಳ ಬದಲಾವಣೆ ಮಾಡುವಂತೆ ಕೋರಿ ಸ್ಥಳೀಯರು ಸಚಿವ ಶಿವಾನಂದ ಪಾಟೀಲ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು   

ವಿಜಯಪುರ: ‘ಕೊಲ್ಹಾರ ಪಟ್ಟಣದಲ್ಲಿ ಪ್ರಜಾಸೌಧ ಹಾಗೂ ಬಸ್ ಡಿಪೊ ಸ್ಥಳ ಬದಲಾವಣೆ ಮಾಡುವ ವಿಷಯದಲ್ಲಿ ಸ್ಥಳೀಯರ ಒಕ್ಕೋರಲ ನಿರ್ಧಾರದಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.

ನಗರದಲ್ಲಿ ಮಂಗಳವಾರ ತಮ್ಮನ್ನು ಭೇಟಿ ಮಾಡಿ ಮನವಿ ಆಲಿಸಿದ ಕೊಲ್ಹಾರ ಪಟ್ಟಣದ ನಿಯೋಗದೊಂದಿಗೆ ಮಾತನಾಡಿದ ಸಚಿವರು, ‘ಸಂತ್ರಸ್ತರ ಪುನರ್ವಸತಿ ಕೇಂದ್ರವಾದ ಕೊಲ್ಹಾರ ಪಟ್ಟಣ ಸೇರಿದಂತೆ ಇಡೀ ತಾಲ್ಲೂಕಿನ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದೇನೆ. ಅಭಿವೃದ್ಧಿ ವಿಷಯದಲ್ಲಿ ಒಡಕಿನ, ಅಪಸ್ವರದ ಮಾತುಗಳು ಬೇಡ’ ಎಂದು ಕಿವಿಮಾತು ಹೇಳಿದರು.

ಸಚಿವರಿಗೆ ಮನವಿ ಸಲ್ಲಿಸಿ ಮಾತನಾಡಿದ ನಿಯೋಗದ ಮುಖಂಡರಾದ ಸಿ.ಎಂ. ಗಣಕುಮಾರ, ಕೊಲ್ಹಾರ ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ಈರಣ್ಣ ಕೋಮಾರ, ಕೊಲ್ಹಾರ ಪಟ್ಟಣದ ಶಾಲಾ ಆವರಣದಲ್ಲಿ ಪ್ರಜಾಸೌಧ ನಿರ್ಮಾಣ ಮತ್ತು ಬಸ್ ನಿಲ್ದಾಣ ಭಾಗ -1 ರಲ್ಲಿ ಬಸ್ ಡಿಪೊ ನಿರ್ಮಾಣಕ್ಕೆ ಸ್ಥಳ ನಿಗದಿ ಮಾಡಿರುವ ಮಾಹಿತಿ ಇದೆ. ಆದರೆ, ಪುನರ್ವಸತಿ ಕೇಂದ್ರವಾದ ಕೊಲ್ಹಾರ ಪಟ್ಟಣದಲ್ಲಿನ ಈ ಸ್ಥಳ ಬಳಕೆಯ ಬದಲಾಗಿ ಈ ಎರಡೂ ಯೋಜನೆಗಳಿಗೆ ಪರ್ಯಾಯ ಸ್ಥಳ ನಿಗದಿ ಮಾಡುವಂತೆ ಮನವಿ ಮಾಡಿದರು.

ADVERTISEMENT

ಕೊಲ್ಹಾರ ಪಟ್ಟಣದ ಹೃದಯ ಭಾಗದಲ್ಲಿರುವ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆ ಮತ್ತು ಉರ್ದು ಪ್ರಾಥಮಿಕ ಶಾಲೆಯ ಆವರಣದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಸ್ಥಳ ನಿಗದಿ ಮಾಡಲಾಗಿದೆ. ದಿಗಂಬರೇಶ್ವರ ಮಠದ ಹತ್ತಿರ ಬಸ್ ನಿಲ್ದಾಣದಲ್ಲಿ ಬಸ್ ಡಿಪೊ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ ಎಂಬ ಮಾಹಿತಿ ಇದೆ. ಈ ಎರಡೂ ಸ್ಥಳಗಳು ಪಟ್ಟಣದ ಹೃದಯ ಭಾಗದಲ್ಲಿದ್ದು, ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಲು ಪಟ್ಟಣದ ಮಧ್ಯೆ ಇರುವ ಶಾಲೆ ಹಾಗೂ ಈ ಭಾಗದ ಜನರಿಗೆ ಬಸ್ ನಿಲ್ದಾಣ ಅವಶ್ಯಕತೆ ಇದೆ. ಹೀಗಾಗಿ ಇವೆರಡೂ ಸ್ಥಳಗಳ ಬದಲಾಗಿ ಬೇರೆ ಸ್ಥಳ ಗುರುತಿಸುವಂತೆ ಕೋರಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಿ.ಎಸ್. ಗಿಡ್ಡಪ್ಪಗೋಳ, ಸದಸ್ಯರಾದ ಶ್ರೀಶೈಲ ಮುಳವಾಡ, ಡಿ.ಕೆ.ಈಟಿ, ಮಲ್ಲು ಹೆರಕಲ್, ವಿಜಯಮಹಾಂತೇಶ ಗಿಡ್ಡಪ್ಪಗೋಳ, ಲಕ್ಷ್ಮೀಬಾಯಿ ಹೆರಕಲ್, ಅಶೋಕ ಜಿಡ್ಡಿಬಾಗಿಲು, ಪ.ಪಂ. ಮಾಜಿ ಸದಸ್ಯ ಈರಪ್ಪ ಗಡ್ಡಿಪೂಜಾರಿ, ಗ್ರಾಮದ ಪ್ರಮುಖರಾದ ರಾಮಣ್ಣ ಉಪ್ಪಲದಿನ್ನಿ, ಪುಂಡಲೀಕ ಕಂಬಾರ, ಮಲ್ಲಪ್ಪ ಕೊಠಾರಿ, ರಾಚಯ್ಯ ಮಠ, ನಂದಪ್ಪ ಗಿಡ್ಡಪಗೊಳ, ಈರಣ್ಣ ಗಡ್ಡಿ, ಮಾರುತಿ ಪವಾರ, ಯಮನೋರಿ ಮಾಕಾಳಿ, ಶಿವಪುತ್ರ ಮೇಲಗಿರಿ, ರಾಜಶೇಖರಯ್ಯ ಹೀರೆಮಠ ಇದ್ದರು.

ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ 

ವಿಜಯಪುರ: ಬಸವನಬಾಗೇವಾಡಿ ವಿಧಾನಸಭೆ ವ್ಯಾಪ್ತಿಯ ಮುಳವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಸೇರಿದಂತೆ 6 ಸದಸ್ಯರು ಬಿಜೆಪಿ ತೊರೆದು ಸಚಿವ ಶಿವಾನಂದ ಪಾಟೀಲ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಸಚಿವರ ಗೃಹ ಕಚೇರಿಯಲ್ಲಿ ಮಂಗಳವಾರ ಮುಳವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಳು ಚಿನಕೇಕರ ಉಪಾಧ್ಯಕ್ಷೆ ಮಧುಮತಿ ಧನ್ಯಾಳ ಸದಸ್ಯರಾದ ಹನುಮಂತ ಕಳಸಗೊಂಡ ರಮೇಶ ಕೋಳೂರ ರಮೇಶ ಭಜಂತ್ರಿ ಕಾಂಗ್ರೆಸ್ ಸೇರ್ಪಡೆಯಾದರು.

ಬಾಳು ಚಿನಕೇಕರ ಮಾತನಾಡಿ ಸಚಿವ ಶಿವಾನಂದ ಪಾಟೀಲ ಅವರು ಕ್ಷೇತ್ರದಲ್ಲಿ ನಡೆಸಿರುವ ಅಭಿವೃದ್ಧಿ ಕಾರ್ಯಗಳು ರಾಜ್ಯಕ್ಕೆ ಮಾದರಿಯಾಗಿವೆ. ಇದನ್ನು ಮೆಚ್ಚಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಆಗುತ್ತಿರುವುದಾಗಿ ಹೇಳಿದರು. ಸಚಿವ ಶಿವಾನಂದ ಪಾಟೀಲ ಮಾತನಾಡಿ ‘ರಾಜಕೀಯಕ್ಕಿಂತ ಕ್ಷೇತ್ರದ ಅಭಿವೃದ್ಧಿಗೆ ನಾನು ಹೆಚ್ಚು ಆದ್ಯತೆ ನೀಡುತ್ತಿದ್ದೇನೆ. ಕ್ಷೇತ್ರದ ಅಭಿವೃದ್ಧಿ ಹೊರತಾಗಿ ಯಾವುದೇ ಟೀಕೆಗಳಿಗೆ ಕಿವಿಗೊಡುವುದಿಲ್ಲ’ ಎಂದರು. ಗ್ರಾಮದ ಮುಖಂಡರಾದ ಶೇಖಪ್ಪ ಬೀಳಗಿ ಶಿವಪ್ಪ ಗಾಯಕವಾಡ ಡಿ.ಸಿ. ಹಿರೇಕುರುಬರ ರವಿ ಕೆಂಗನಾಳ ಸದಾಶಿವ ಕುಬಕಡ್ಡಿ ಸಂಗನಗೌಡ ಪಾಟೀಲ ಹಮೀದ್‌ ಹವಾಲ್ದಾರ್ ಮಲ್ಲು ಅಸಂಗಿ ಶಿವಾಜಿ ಶೇಳಂಕರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.