ಕೊಲ್ಹಾರ: ತಾಲ್ಲೂಕಿನ ಚೀರಲದಿನ್ನಿ ಗ್ರಾಮದ ಯುವ ರೈತ ಹಣಮಂತ ಸಿದ್ದನಗೌಡ ಕೋನರೆಡ್ಡಿ ಸಾವಯವ ಪದ್ಧತಿಯಲ್ಲಿ ಗುಣಮಟ್ಟದ ದಾಳಿಂಬೆ ಬೆಳೆದು ಮಾದರಿಯಾಗಿದ್ದಾರೆ.
ಮೊದಲು ಈರುಳ್ಳಿ, ಮೆಕ್ಕೆಜೋಳ, ಕಬ್ಬು ಬೆಳೆದು ಕೈ ಸುಟ್ಟುಕೊಂಡಿದ್ದ ಇವರು ಎರಡು ಎಕರೆ ತೋಟದಲ್ಲಿ ಮಹಾರಾಷ್ಟ್ರದ ಹೊಸ ತಳಿ ಭಗವಾ ಕೇಸರ್ ದಾಳಿಂಬೆಯನ್ನು ಬೆಳದು ಉತ್ತಮ ಫಸಲು ಪಡೆದಿದ್ದಾರೆ.
ಐದು ಎಕರೆ ಜಮೀನಿನಲ್ಲಿ ಎರಡು ಎಕರೆಯಲ್ಲಿ ದಾಳಿಂಬೆ ಹಣ್ಣು ಬೆಳೆಯಲು ಮೊದಲು ಭೂಮಿಯನ್ನು ಟ್ರ್ಯಾಕ್ಟರ್ ಸಹಾಯದಿಂದ ಹದ ಮಾಡಿಸಿದರು. ನಾಲ್ಕು ಟ್ರ್ಯಾಕ್ಟರ್ ಕೊಟ್ಟಿಗೆ ಗೊಬ್ಬರ ಹಾಗೂ ಕೋಳಿ ಗೊಬ್ಬರವನ್ನು ಸಾಲುಗಳಲ್ಲಿ ಹಾಕಿದರು. ಸಾಲಿನಿಂದ ಸಾಲಿಗೆ 15 ಅಡಿ, ಗಿಡದಿಂದ ಗಿಡಕ್ಕೆ 8 ಅಡಿಗೆ ಒಂದರಂತೆ ದಾಳಿಂಬೆ ಸಸಿ ನೆಟ್ಟಿದ್ದಾರೆ. ಒಂದು ಎಕರೆಗೆ 300 ಸಸಿಗಳನ್ನು ಹಾಕಿ, ಹನಿ ನೀರಾವರಿ ಪದ್ಧತಿ ಅಳವಡಿಸಿದ್ದಾರೆ. ಒಂದೂವರೆ ವರ್ಷದಲ್ಲಿ ಫಸಲು ಕೈಗೆ ಬಂದಿದೆ.
ಕೃಷಿ ವಿಧಾನ: ಮಣ್ಣು ಹದ ಮಾಡಿ ಸಸಿ ನೆಟ್ಟು ಸಸಿ ಸುತ್ತ ಮಣ್ಣಿನಲ್ಲಿ ಗೊಬ್ಬರ ಮುಚ್ಚಿ ನಂತರ ನೀರನ್ನು ಹನಿ ನೀರಾವರಿಯ ಮೂಲಕ ಹಾಯಿಸಬೇಕು. ಎರಡು ತಿಂಗಳಿಗೊಮ್ಮೆ ಸಸಿಗಳ ಸುತ್ತಲೂ ಕಳೆ ತೆಗೆದು, ಸಾಲುಗಳ ಮಧ್ಯದಲ್ಲಿ ಟ್ರ್ಯಾಕ್ಟರ್ ಮೂಲಕ ಕಟರ್ ಹೊಡೆದು ಗೊಬ್ಬರ ತಿರುವಿ ಹಾಕಿದಾಗ ಬೇರಿಗೆ ಮಣ್ಣು ಸಡಿಲಾಗಿ ಪೋಶಕಾಂಶಗಳು ಸಸಿಗೆ ಸಿಗುತ್ತವೆ. ಇದರಿಂದ ಸಸಿಗಳು ವಿಸ್ತಾರವಾಗಿ ಬೆಳೆಯುತ್ತವೆ. ವಾತಾವರಣಕ್ಕೆ ತಕ್ಕಂತೆ ನೀರು ಹಾಕಬೇಕಾಗುತ್ತದೆ. ಒಂದು ತೆರೆದ ಬಾವಿಯಿಂದ ಹನಿ ನೀರಾವರಿ ಪದ್ಧತಿಯ ಮೂಲಕ ನೀರು ಹಾಯಿಸಲಾಗಿದೆ.
ದಾಳಿಂಬೆ ಗಿಡಗಳ ಜೊತೆಗೆ ಸೀತಾಫಲ 100, ಚಿಕ್ಕು, ಮಾವು, ಪೇರಲ, ತರಕಾರಿ ಬೆಳೆಗಳನ್ನು ಕೂಡ ಬೆಳೆದು, ಜವಾರಿ ಹಸುಗಳ ಸಾಕಣೆ ಮಾಡಿ ಅವುಗಳಿಂದ ಆದಾಯ ಪಡೆಯುತ್ತಿದ್ದಾರೆ.
ದಾಳಿಂಬೆ ಇಳುವರಿ ಮತ್ತು ಆದಾಯ: ‘ಒಂದು ಎಕರೆಯಲ್ಲಿ ಒಂದು ಗಿಡಕ್ಕೆ 25 ಕೆ.ಜಿಯಂತೆ 300 ಗಿಡಗಳಿಗೆ 7,500 ಕೆಜಿ, ಎಂದರೆ ಎರಡು ಎಕರೆಯಲ್ಲಿ 15,000 ಕೆ.ಜಿ ಇಳುವರಿ ಬರುತ್ತದೆ. ಎಕರೆಗೆ 7.5 ಟನ್ ಇಳುವರಿ ಪಡೆಯುತ್ತೇವೆ. ದಾಳಿಂಬೆ ಹಣ್ಣನ್ನು ಬೆಂಗಳೂರು, ಹೈದರಾಬಾದ್ ಮಾರುಕಟ್ಟೆಗೆ ಕಳುಹಿಸುತ್ತೇವೆ. ಸ್ಥಳಿಯವಾಗಿ ಮಾರಾಟ ಮಾಡಿದರೂ ಕೆ.ಜಿಗೆ ₹ 100ರಂತೆ ಮಾರಿದರೆ ಎಕರೆಗೆ 7,50,000 ದೊರೆಯುತ್ತದೆ ಎಂದು ಅವರು ತಿಳಿಸಿದರು.
ರಾತ್ರಿ ಕಾವಲು: ‘ದಾಳಿಂಬೆ ಹಣ್ಣು ಕಾಳು ಕಟ್ಟುವ ಸಮಯದಲ್ಲಿ ರಾತ್ರಿ ವೇಳೆಯಲ್ಲಿ ಮೋತಿ ಹುಳದ ಕಾಟ ಜಾಸ್ತಿ ಇರುತ್ತದೆ ರಾತ್ರಿ 12ರವರೆಗೂ ಲೈಟ್ ಲ್ಯಾಂಪ್ ಬ್ಯಾಟರಿ ಬಳಸಿ ಹುಳು ಹಿಡಿದು ರಕ್ಷಣೆ ಮಾಡುವುದು ಬಹಳ ಮುಖ್ಯ’ ಎಂದು ಅವರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.