ADVERTISEMENT

ಆಹಾರ, ಮೇವಿಗೆ ಕೊರತೆ ಆಗದಿರಲಿ

ಸೋಲಾಪುರಜಿಲ್ಲಾ ಉಸ್ತುವಾರಿ ಸಚಿವ ಜಯಕುಮಾರ ಗೋರೆ ಸೂಚನೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 4:45 IST
Last Updated 30 ಸೆಪ್ಟೆಂಬರ್ 2025, 4:45 IST
ಸೋಲಾಪುರದಲ್ಲಿ ನಡೆದ ವಿವಿಧ ಇಲಾಖೆಗಳ ಮುಖ್ಯಸ್ಥರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಯಕುಮಾರ ಗೋರೆ ಮಾತನಾಡಿದರು
ಸೋಲಾಪುರದಲ್ಲಿ ನಡೆದ ವಿವಿಧ ಇಲಾಖೆಗಳ ಮುಖ್ಯಸ್ಥರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಯಕುಮಾರ ಗೋರೆ ಮಾತನಾಡಿದರು   

ಸೋಲಾಪುರ: ‘ಸಂತ್ರಸ್ತರಲ್ಲಿ ಯಾರೂ ಸರ್ಕಾರದ ನೆರವಿನಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಆಶ್ರಯ ಕೇಂದ್ರಗಳಲ್ಲಿರುವವರಿಗೆ ಅಗತ್ಯಕ್ಕೆ ತಕ್ಕಷ್ಟು ಊಟ ಹಾಗೂ ಜಾನುವಾರುಗಳಿಗೆ ಮೇವು ಒದಗಿಸುವುದು ಜಿಲ್ಲಾಡಳಿತದ ಜವಾಬ್ದಾರಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಯಕುಮಾರ ಗೋರೆ ಹೇಳಿದರು.

ನಗರದ ಸರ್ಕಾರಿ ವಿಶ್ರಾಂತಿ ಗೃಹದ ಸಭಾಂಗಣದಲ್ಲಿ ಆಯೋಜಿಸಿದ್ದ ಎಲ್ಲಾ ಇಲಾಖೆಗಳ ಮುಖ್ಯಸ್ಥರ ಸಭೆಯಲ್ಲಿ ಮಾತನಾಡಿದರು.

‘ಮನೆ ಹಾನಿಯಾದಲ್ಲಿ ₹10,000 ನೆರವು ನೀಡಿ. ಗ್ರಾಮಗಳ ಸ್ವಚ್ಛತೆಗೆ ಏಜೆನ್ಸಿ ನೇಮಿಸಿಕೊಳ್ಳಿ. ಹದಗೆಟ್ಟ ರಸ್ತೆಗಳನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸಿ.ಪ್ರವಾಹ ಪೀಡಿತ ಗ್ರಾಮಗಳಿಗೆ ನೀರು ಮತ್ತು ವಿದ್ಯುತ್ ಪೂರೈಕೆ ಸುಗಮಗೊಳಿಸಿ. ನಾಗರಿಕರು, ವಿವಿಧ ಸಂಸ್ಥೆಗಳಿಂದ ಬರುವ ನೆರವನ್ನು ಎಲ್ಲ ಸಂತ್ರಸ್ತರಿಗೆ ತಲುಪಲು ಯೋಜನೆ ರೂಪಿಸಿ’ ಎಂದರು. 

ADVERTISEMENT

‘ಜಿಲ್ಲೆಯ 110 ಕಂದಾಯ ವೃತ್ತಗಳ ಪೈಕಿ 76 ವೃತ್ತಗಳಲ್ಲಿ ಅತಿವೃಷ್ಟಿ ಉಂಟಾಗಿದೆ. 92 ಗ್ರಾಮಗಳಲ್ಲಿ ಪ್ರವಾಹ ಉಂಟಾಗಿದೆ. 27 ಗ್ರಾಮಗಳಲ್ಲಿ ನೀರು ಆವರಿಸಿದೆ. 120 ಆಶ್ರಯ ಕೇಂದ್ರಗಳಲ್ಲಿ ಸುಮಾರು 13,000 ಸಂತ್ರಸ್ತರಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಪ್ರವಾಹಪೀಡಿತ ಗ್ರಾಮಗಳಲ್ಲಿ ಸ್ವಚ್ಛತೆ ಜೊತೆಗೆ ಸಂತ್ರಸ್ತರ ಆರೋಗ್ಯ ತಪಾಸಣೆ, ಪ್ರತಿ ಆಶ್ರಯ ಕೇಂದ್ರಗಳಲ್ಲಿ ನೀರಿನ ವ್ಯವಸ್ಥೆಗೆ ಒಂದು ಟ್ಯಾಂಕರ್ ವ್ಯವಸ್ಥೆ ಕಲ್ಪಿಸಲಾಗಿದೆ. ಜಿಲ್ಲಾ ಪಂಚಾಯಿತಿ ಮೂಲಕ ರಸ್ತೆಗಳನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಲು ಸುಮಾರು ₹4 ಕೋಟಿ ಅವಶ್ಯಕತೆ ಇದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕುಲದೀಪ ಜಂಗಮ ಹೇಳಿದರು.

ವಿದ್ಯುತ್ ಸರಬರಾಜು ಕಂಪನಿಯ ಅಧಿಕಾರಿ ಸುನಿಲ ಮಾನೆ ಮಾತನಾಡಿ, ‘ವಿದ್ಯುತ್ ವಿತರಣಾ ಕಂಪನಿಗೆ ಸುಮಾರು ₹24 ಕೋಟಿ ನಷ್ಟ ಉಂಟಾಗಿದೆ. ಕರಮಳಾ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ವಿದ್ಯುತ್ ಪುನರ್‌ಸ್ಥಾಪಿಸಲಾಗಿದೆ. ಉಳಿದ ಗ್ರಾಮಗಳಲ್ಲಿ ನೀರು ಕಡಿಮೆಯಾದಂತೆ ವಿದ್ಯುತ್ ಸುಗಮಗೊಳಿಸಲಾಗುವುದು’ ಎಂದರು.

29SLP02

‘300 ಟನ್ ಮೇವು ಸಂಗ್ರಹ’

‘ಜಿಲ್ಲೆಯಲ್ಲಿ ಸುಮಾರು 25000 ಜಾನುವಾರುಗಳಿದ್ದು ಹೆಚ್ಚುವರಿಯಾಗಿ 300 ಟನ್ ಮೇವು ಸಂಗ್ರಹಿಸಲಾಗಿದೆ. ಕರಮಳಾ ಮಾಢಾ ದಕ್ಷಿಣ ಹಾಗೂ ಉತ್ತರ ಸೋಲಾಪುರ ಅಕ್ಕಲಕೋಟ ಮೊಹೋಳ ತಾಲ್ಲೂಕುಗಳ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಜಿಲ್ಲಾ ಸರಬರಾಜು ಸಮಿತಿ ವತಿಯಿಂದ ಮೇವು ಪೂರೈಸಲಾಗುವುದು. ನಿತ್ಯ 120 ಟನ್ ಮೇವಿನ ಅವಶ್ಯಕತೆ ಇದ್ದು ಮುಂದಿನ ಎಂಟು ದಿನಗಳವರೆಗೆ ಸಾಕಾಗುವಷ್ಟು ಮೇವಿದೆ’ ಎಂದು ಜಿಲ್ಲಾಧಿಕಾರಿ ಕುಮಾರ ಆಶೀರ್ವಾದ ಮಾಹಿತಿ ನೀಡಿದರು.

10 ಕೆ.ಜಿ. ಗೋಧಿ ಜೋಳ ಹಂಚಿಕೆ’

‘ಸರ್ಕಾರ ವಿವಿಧ ಸಂಘ–ಸಂಸ್ಥೆಗಳು ಪ್ರವಾಹ ಪೀಡಿತರಿಗಾಗಿ ನೀಡಿದ ಜೀವನೋಪಯೋಗಿ ವಸ್ತುಗಳು ಆಹಾರ ಧಾನ್ಯಗಳು ಸಂತ್ರಸ್ತರ ತಲುಪುವಂತೆ ಸಂಬಂಧಪಟ್ಟ ತಹಶೀಲ್ದಾರ್ ಹಾಗೂ ಅಧಿಕಾರಿಗಳಿಗೆ ನಿಯೋಜಿಸಲಾಗಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಮೋನಿಕಾ ಸಿಂಗ್ ಠಾಕೂರ್ ತಿಳಿಸಿದರು. ‘ಸರ್ಕಾರದ ನಿರ್ದೇಶನ ಅನುಸಾರ ಪ್ರತಿ ಸಂತ್ರಸ್ತ ಕುಟುಂಬಕ್ಕೆ 10 ಕೆ.ಜಿ. ಗೋಧಿ ಹಾಗೂ 10 ಕೆ.ಜಿ. ಜೋಳ ನೀಡಲಾಗಿದೆ. ಮೂರು ಕೆ.ಜಿ. ತೊಗರಿಬೇಳೆ ನೀಡುವ ಯೋಜನೆ ಇದೆ’ ಎಂದು ಜಿಲ್ಲಾ ಆಹಾರ ಸರಬರಾಜು ಅಧಿಕಾರಿ ಸಂತೋಷ ಸರಡೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.