ADVERTISEMENT

ವಿಜಯಪುರ: ​​​​​​​ಗೋಳಗುಮ್ಮಟದಲ್ಲಿ ಪ್ರತಿಧ್ವನಿಸಿದ ‘ನನ್ನ ನಾಡು-ನನ್ನ ಹಾಡು’

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2022, 10:54 IST
Last Updated 28 ಅಕ್ಟೋಬರ್ 2022, 10:54 IST
   

ವಿಜಯಪುರ: ವಿಶ್ವವಿಖ್ಯಾತ ಗೋಳಗುಮ್ಮಟದ ಆವರಣದಲ್ಲಿ ಶುಕ್ರವಾರ ಕನ್ನಡ ನಾಡು, ನುಡಿ ಶ್ರೀಮಂತಿಕೆ ಸಾರುವ ‘ನನ್ನ ನಾಡು-ನನ್ನ ಹಾಡು’ ಕೋಟಿ ಕಂಠ ಗಾಯನ ಪ್ರತಿಧ್ವನಿಸಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಕೋಟಿ ಕಂಠ ಗಾಯನದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಯ ಪದಾಧಿಕಾರಿಗಳು, ಕನ್ನಡಾಭಿಮಾನಿಗಳು, ಸಾರ್ವಜನಿಕರು ಕರುನಾಡಿನ ಶ್ರೀಮಂತಿಕೆ ಸಾರುವ ಗೀತೆಗಳನ್ನು ಹಾಡುವ ಮೂಲಕ ಅಭಿಮಾನ ಮೆರೆದರು.

ಕುವೆಂಪು ವಿರಚಿತ ನಾಡಗೀತೆ ಜಯಭಾರತ ಜನನೀಯ ತನುಜಾತೆ, ಡಿ.ಎಸ್. ಕರ್ಕಿ ವಿರಚಿತ ಹಚ್ಚೇವು ಕನ್ನಡದ ದೀಪ, ಹುಯಿಲಗೋಳ ನಾರಾಯಣರಾವ್ ವಿರಚಿತ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಕುವೆಂಪು ವಿರಚಿತ ಬಾರಿಸು ಕನ್ನಡ ಡಿಂಡಿಮವ...., ಚೆನ್ನವೀರ ಕಣವಿ ವಿರಚಿತ ವಿಶ್ವ ವಿನೂತನ ವಿದ್ಯಾ ಚೇತನ, ಹಂಸಲೇಖ ವಿರಚಿತ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಗೀತೆಗಳು ಗೋಳಗುಮ್ಮಟದ ಆವರಣದಲ್ಲಿ ಮೊಳಗಿದವು.

ADVERTISEMENT

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ವಿಜಯಮಹಾಂತೇಶ, ಕರ್ನಾಟಕದ ಏಕೀಕರಣ ಚಳವಳಿ ಸಂದರ್ಭದಲ್ಲಿ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂಬ ಗೀತೆಯನ್ನು ಹುಯಿಲಗೋಳ ನಾರಾಯಣರಾವ್ ಅವರು ಬರೆದ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂಬ ಗೀತೆ ಕನ್ನಡ,ನಾಡು-ನುಡಿ ಸಂಸ್ಕೃತಿ, ಭಾಷೆಯ ಐಕ್ಯದ ಆಶಯಕ್ಕೆ ಹೊಸ ಹುಮ್ಮಸ್ಸು ಮೂಡಿಸಿತ್ತು ಎಂದರು.

ನವಂಬರ್‌ನಲ್ಲಿ ಎಲ್ಲರ ಮನೆ- ಮನಗಳಲ್ಲಿ ಕನ್ನಡಾಂಬೆಯ ಹಬ್ಬದ ವಾತಾವರಣದ ಕಳೆಗಟ್ಟಬೇಕು ಎಂದು ಹೇಳಿದರು.

ಕನ್ನಡವು ಸಂಪದ್ಭರಿತ ಭಾಷೆಯಾಗಿದೆ. ಅಂತೆಯೇ, ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಸಂದಿವೆ. ಅಷ್ಟೆ ಅಲ್ಲದೆ, ಈ ಸಮೃದ್ಧ ಹಾಗೂ ಪುರಾತನ ಭಾಷೆಯಾದ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನವೂ ಸಂದಿದೆ ಎಂದರು.

ಸಾಹಿತ್ಯ ಸಮೃದ್ಧಿಯ ಚೆಲುವ ಕನ್ನಡ ಭಾಷೆಗೆ ಸಾವಿರಾರು ವರುಷಗಳ ಇತಿಹಾಸವಿದೆ. ಇದರ ಪ್ರಾಚೀನತೆಯನ್ನು ರಾಮಾಯಣ ಮತ್ತು ಮಹಾಭಾರತದಲ್ಲಿ ಗುರುತಿಸಬಹುದಾಗಿದೆ ಎಂದು ಹೇಳಿದರು.

ದಾಸ ಪರಂಪರೆ, ಭಕ್ತಿ ಪರಂಪರೆ ಮತ್ತು ವಚನ ಸಾಹಿತ್ಯವು ಕನ್ನಡವನ್ನು ಶ್ರೀಮಂತಗೊಳಿಸಿದೆ. ದಾಸವರೇಣ್ಯರು, 12ನೇ ಶತಮಾನದ ಶರಣರು ಸಾಹಿತ್ಯ ಕ್ರಾಂತಿಯನ್ನು ಮಾಡುವ ಮೂಲಕ ನಾಡು ನುಡಿಯನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಹೇಳಿದರು.

ಇಂತಹ ಶ್ರೀಮಂತ ಸಂಸ್ಕೃತಿಯುಳ್ಳ ಭಾಷೆಯನ್ನು ನಾವೆಲ್ಲರೂ ಉಳಿಸಿ ಬೆಳೆಸಬೇಕು. ನಾಡಿನ ಸಾಹಿತಿಗಳು, ಕವಿಗಳು ತಮ್ಮ ಬರಹ, ಸಾಹಿತ್ಯದ ಮೂಲಕ ಕವನಗಳ ಮೂಲಕ ನಾಡಿನ ವರ್ಣನೆಯನ್ನ ಬಹು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಸಂಸ್ಕೃತಿ ಪರಂಪರೆಯು ಸಾಹಿತ್ಯದ ಮೂಲಕ ಹೆಚ್ಚಳವಾಗಿದೆ ಎಂದರು.

ಕನ್ನಡ ನಾಡು ಪವಿತ್ರ ಭಾವವಿದ್ದಂತೆ, ಇಂದಿನ ಜಾಗತೀಕರಣ ವ್ಯವಸ್ಥೆಯಲ್ಲಿ ಇಂಗ್ಲಿಷ್ ಅನಿವಾರ್ಯವಾದರೂ ನಮ್ಮ ಮೊದಲಾದ್ಯತೆ ಕನ್ನಡವೇ ಆಗಿದೆ. ವಿಶೇಷವಾಗಿ ಶಿಕ್ಷಣ ನೀತಿಯು ಮಾತೃಭಾಷೆಗೆ ಒತ್ತು ಕೊಡುತ್ತಿದೆ. ಕನ್ನಡ ಭಾಷೆ ಉಳಿಸುವ ಜವಾಬ್ದಾರಿ ನಮ್ಮ, ನಿಮ್ಮೆಲ್ಲರ ಮೇಲಿದೆ. ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡಕ್ಕಾಗಿ ನಾವು ಎಂಬ ಅಭಿಯಾನದ ಮೂಲಕ ಕನ್ನಡ ನಾಡಿನ ಸಂಸ್ಕೃತಿ, ಭಾಷೆ ಸಿರಿಯನ್ನು ಹೆಚ್ಚಿಸಿ ಅದು ಪಸರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್. ಡಿ.ಆನಂದ ಕುಮಾರ್, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಸ್.ಜೆ. ಲಕ್ಕಣ್ಣವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.