ADVERTISEMENT

ವಿಜಯಪುರ| ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಬಸವಣ್ಣೆಪ್ಪಗೆ 8ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 11:29 IST
Last Updated 24 ಡಿಸೆಂಬರ್ 2019, 11:29 IST
ಬಸವಣ್ಣೆಪ್ಪ ಕಲಶೆಟ್ಟಿ
ಬಸವಣ್ಣೆಪ್ಪ ಕಲಶೆಟ್ಟಿ   

ಸಿಂದಗಿ (ವಿಜಯಪುರ): ತಾಲ್ಲೂಕಿನ ಬಗಲೂರ ಗ್ರಾಮದ ಬಸವಣ್ಣೆಪ್ಪ ಭೀಮರಾಯ ಕಲಶೆಟ್ಟಿ ಅವರು ಕೆಪಿಎಸ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 8ನೇ ಸ್ಥಾನ ಪಡೆದಿದ್ದು, ಉಪ ವಿಭಾಗಾಧಿಕಾರಿ (ಎಸಿ) ಹುದ್ದೆಗೆ ಆಯ್ಕೆಯಾಗಿದ್ದಾರೆ.

ಇವರು 2011ರ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಆಯ್ಕೆಯಾಗಿ, ತಹಶೀಲ್ದಾರ್‌ ಹುದ್ದೆಗೆ ಅರ್ಹತೆ ಪಡೆದುಕೊಂಡಿದ್ದರು. ಆದರೆ, ನ್ಯಾಯಾಲಯದಿಂದ ತಡೆಯಾಜ್ಞೆ ಬಂದಿತ್ತು. 2014ರಲ್ಲಿ ಮತ್ತೆ ಪ್ರಯತ್ನ ಮಾಡಿದರಾದರೂ ಸಫಲರಾಗಿರಲಿಲ್ಲ. 2017ರಲ್ಲಿ ಮತ್ತೆ ಪರೀಕ್ಷೆ ಬರೆದು ಯಶಸ್ಸುಗಳಿಸಿದ್ದಾರೆ.

ಬೀದರ್ ಜಿಲ್ಲೆ ಹುಮನಾಬಾದ್‌ ಪಟ್ಟಣದ ಮಾಣಿಕಪ್ರಭು ಪಬ್ಲಿಕ್ ವಸತಿ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣ ಮುಗಿಸಿ, ಧಾರವಾಡದ ಕಿಟೆಲ್ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪಿಯು ಶಿಕ್ಷಣ ಪಡೆದಿದ್ದರು. ನಂತರ ಬೆಂಗಳೂರಿನ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಿಂದ ಬಿ.ಇ ಪದವಿ ಪಡೆದು, ಟಾಟಾ ಕಂಪನಿಯಲ್ಲಿ ನೌಕರಿ ಮಾಡುತ್ತಲೇ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದರು. ಇವರ ತಂದೆ ಭೀಮರಾಯ ಕಲಶೆಟ್ಟಿ ಬಗಲೂರ ಖಾಸಗಿ ಪ್ರೌಢಶಾಲೆಯಲ್ಲಿ ದ್ವಿತೀಯ ದರ್ಜೆ ಸಹಾ
ಯಕ (ಎಸ್‌ಡಿಎ)ರಾಗಿ ನಿವೃತ್ತರಾಗಿದ್ದಾರೆ. ತಾಯಿ ಗುನ್ನಮ್ಮ ಗೃಹಿಣಿ. ‘ಪರಿಶ್ರಮಕ್ಕೆ ತಕ್ಕ ಫಲ ದೊರಕಿದೆ. ನನ್ನನ್ನು ಉನ್ನತ ಹುದ್ದೆಯಲ್ಲಿ ನೋಡಬೇಕು ಎಂಬುದು ನನ್ನ ತಂದೆಯ ಕನಸಾಗಿತ್ತು. ಅದು ಈಗ ಈಡೇರಿದೆ’ ಎಂದು ಬಸವಣ್ಣೆಪ್ಪ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.