ADVERTISEMENT

ಕೃಷಿಗಾಗಿ ನೌಕರಿ ತೊರೆದ ರಿಜ್ವಾನ್

ಬಬಲೇಶ್ವರ ತಾಲ್ಲೂಕು ಹೊನಗನಹಳ್ಳಿಯ ರೈತ ಜಾಗೀರದಾರ

ಬಾಬುಗೌಡ ರೋಡಗಿ
Published 11 ನವೆಂಬರ್ 2019, 19:41 IST
Last Updated 11 ನವೆಂಬರ್ 2019, 19:41 IST
ಬಬಲೇಶ್ವರ ತಾಲ್ಲೂಕು ಹೊನಗನಹಳ್ಳಿಯ ರೈತ ರಿಜ್ವಾನ್ ಜಾಗೀರದಾರ ತಮ್ಮ ದ್ರಾಕ್ಷಿ ಬೆಳೆ ವೀಕ್ಷಿಸುತ್ತಿರುವುದು
ಬಬಲೇಶ್ವರ ತಾಲ್ಲೂಕು ಹೊನಗನಹಳ್ಳಿಯ ರೈತ ರಿಜ್ವಾನ್ ಜಾಗೀರದಾರ ತಮ್ಮ ದ್ರಾಕ್ಷಿ ಬೆಳೆ ವೀಕ್ಷಿಸುತ್ತಿರುವುದು   

ವಿಜಯಪುರ: ಇವರು ಬಿಟೆಕ್‌ ಪದವೀಧರ. ಕೈತುಂಬಾ ಸಂಬಳ ಬರುತ್ತಿದ್ದರೂ, ಕೃಷಿ ಮೇಲಿನ ಪ್ರೀತಿಯಿಂದ ನೌಕರಿ ತೊರೆದು, ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ, ಉತ್ತಮ ಆದಾಯ ಪಡೆಯುವ ಮೂಲಕ ಯುವಕರಿಗೆ ಮಾದರಿ ಆಗಿದ್ದಾರೆ.

ಬಬಲೇಶ್ವರ ತಾಲ್ಲೂಕು ಹೊನಗನಹಳ್ಳಿ ಗ್ರಾಮದ ರೈತ ರಿಜ್ವಾನ್ ಜಾಗೀರದಾರ ಬಿ.ಟೆಕ್‌ ಪದವಿ ಮುಗಿಸಿ, ನಾಲ್ಕು ವರ್ಷ ಚೆನ್ನೈ ಹಾಗೂ ನವದೆಹಲಿಯಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದ್ದಾರೆ. ಪ್ರತಿ ತಿಂಗಳು ₹30 ಸಾವಿರ ವೇತನ ಪಡೆಯುತ್ತಿದ್ದರು. ಆದಾಗ್ಯೂ, ನೌಕರಿ ತೊರೆದು ತಮ್ಮ ಐದು ಎಕರೆ ತೋಟದ ಪೈಕಿ ಎರಡು ಎಕರೆಯಲ್ಲಿ ದ್ರಾಕ್ಷಿ, ಮೂರು ಎಕರೆಯಲ್ಲಿ ತರಕಾರಿ, ಸೊಪ್ಪು, ಕಲ್ಲಂಗಡಿ ಮತ್ತಿತರ ಬೆಳೆಗಳನ್ನು ಬೆಳೆದಿದ್ದಾರೆ. ಪ್ರತಿ ವರ್ಷ ₹8 ರಿಂದ ₹9 ಲಕ್ಷ ಆದಾಯ ಪಡೆಯುತ್ತಿದ್ದಾರೆ.

ಹೆಚ್ಚಿನ ರೈತರು ವಾಣಿಜ್ಯ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಿಕೊಳ್ಳುತ್ತಾರೆ. ಆದರೆ, ರಿಜ್ವಾನ್ ದ್ರಾಕ್ಷಿ ಜತೆಗೆ ಉಳಿದ ಎರಡು ಎಕರೆಯಲ್ಲಿಯೂ ಹನಿ ನೀರಾವರಿ ವ್ಯವಸ್ಥೆ ಅಳವಡಿಸಿಕೊಂಡಿದ್ದು, ಒಂದು ಎಕರೆಯಲ್ಲಿ ತೊಗರಿ ಬೆಳೆದು ₹1.50 ಲಕ್ಷ ಆದಾಯ ಪಡೆದುಕೊಂಡಿದ್ದಾರೆ. ಒಂದು ಎಕರೆಯಲ್ಲಿ 9 ಚೀಲ ಗೋಧಿ ಬೆಳೆದಿದ್ದಾರೆ. ಅದರಲ್ಲಿಯೇ ತರಕಾರಿ, ಕಲ್ಲಂಗಡಿ ಸಹ ಬೆಳೆಯುವುದು. ಸದ್ಯ ಹೆಚ್ಚಿನ ಪ್ರಮಾಣದಲ್ಲಿ ಸಾವಯವ ಬಳಸಿ, ಅಲ್ಪಸ್ವಲ್ಪ ರಾಸಾಯನಿಕ ಗೊಬ್ಬರ ಬಳಸುತ್ತಿರುವ ಇವರು, ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಸಾವಯವ ಕೃಷಿ ಮಾಡುವ ಯೋಚನೆಯಲ್ಲಿದ್ದಾರೆ.

ADVERTISEMENT

‘ಮೊದಲಿನಿಂದಲೂ ಕೃಷಿ ಮೇಲೆ ಆಸಕ್ತಿ ಇತ್ತು. ಆದರೆ, ಬಿ.ಟೆಕ್ ಓದಿದ್ದರಿಂದ ಚೆನ್ನೈ, ನವದೆಹಲಿಯಲ್ಲಿ ನಾಲ್ಕು ವರ್ಷ ಕೆಲಸ ಮಾಡಿದೆ. ಸಂಬಳ ಚೆನ್ನಾಗಿದ್ದರೂ, ಖರ್ಚು ಹೆಚ್ಚಾಗಿತ್ತು. ಜೊತೆಗೆ ಪ್ರತಿನಿತ್ಯ ಒತ್ತಡದಲ್ಲಿಯೇ ಕೆಲಸ ಮಾಡಬೇಕಿತ್ತು. ಹೀಗಾಗಿ ಕೃಷಿಯಲ್ಲಿಯೇ ಏನಾದರೂ ಸಾಧನೆ ಮಾಡಬೇಕು ಎಂದು ನಿರ್ಧರಿಸಿದೆ. ಸರ್ಕಾರದ ಸಹಾಧನದಡಿ ಎರಡು ಎಕರೆ ದ್ರಾಕ್ಷಿ ಬೆಳೆಸಿದ್ದೇನೆ’ ರಿಜ್ವಾನ್ ಜಾಗೀರದಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೊದಲ ವರ್ಷ ಗಿಡಗಳು ಚಿಕ್ಕದಾಗಿರುವುದರಿಂದ ಲಾಭ ಬರಲಿಲ್ಲ. ಎರಡನೇ ವರ್ಷ ಹಸಿ ದ್ರಾಕ್ಷಿ ಮಾರಾಟ ಮಾಡಿ ಕಡಿಮೆ ಲಾಭ ಪಡೆದೆ. ಮೂರನೇ ವರ್ಷ ಐದು ಟನ್ ದ್ರಾಕ್ಷಿ ಬೆಳೆದು ₹5 ಲಕ್ಷ ಹಾಗೂ ಹಿಂದಿನ ವರ್ಷ ಆರು ಟನ್ ಒಣ ದ್ರಾಕ್ಷಿ ಬೆಳೆದು ಕೆ.ಜಿಗೆ ₹130 ರಿಂದ ₹140 ವರೆಗೆ ಮಾರಾಟ ಮಾಡಿ ₹7 ಲಕ್ಷ ವರೆಗೆ ಆದಾಯ ಹೆಚ್ಚಿಸಿಕೊಂಡಿದ್ದೇನೆ. ಉಳಿದ ಎರಡು ಎಕರೆಯಲ್ಲಿ ತರಕಾರಿ ಬೆಳೆಯುತ್ತಿದ್ದು ಅದರಿಂದಲೂ ನಿರಂತರವಾಗಿ ಆದಾಯ ಬರುತ್ತಿದೆ. ಕೆಲವೊಮ್ಮೆ ಕಲ್ಲಂಗಡಿ ಬೆಳೆದಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.