ADVERTISEMENT

ಆಲಮಟ್ಟಿ: 20 ದಿನ ಕಾಲುವೆಗೆ ಹರಿಯಲಿದೆ ಕೃಷ್ಣೆ

ಬೇಸಿಗೆಯಲ್ಲಿ 2 ಹಂತದಲ್ಲಿ ಕೆರೆಗಳ ಭರ್ತಿ ಪ್ರಕ್ರಿಯೆ ಆರಂಭ

ಚಂದ್ರಶೇಖರ ಕೊಳೇಕರ
Published 21 ಏಪ್ರಿಲ್ 2021, 19:30 IST
Last Updated 21 ಏಪ್ರಿಲ್ 2021, 19:30 IST
ಚಿಮ್ಮಲಗಿ ಏತ ನೀರಾವರಿ ಯೋಜನೆಯ ಕೆರೆಗಳ ಭರ್ತಿಗೆ ನೀರು ಹರಿಸುವ ಉದ್ದೇಶದಿಂದ ಆಲಮಟ್ಟಿ ಎಡದಂಡೆ ಮುಖ್ಯ ಸ್ಥಾವರದಿಂದ ಚಿಮ್ಮಲಗಿ ಯೋಜನೆಗೆ ನೀರು ಹರಿಸುವ ಪ್ರಕ್ರಿಯೆ ಆರಂಭಗೊಂಡಿತು
ಚಿಮ್ಮಲಗಿ ಏತ ನೀರಾವರಿ ಯೋಜನೆಯ ಕೆರೆಗಳ ಭರ್ತಿಗೆ ನೀರು ಹರಿಸುವ ಉದ್ದೇಶದಿಂದ ಆಲಮಟ್ಟಿ ಎಡದಂಡೆ ಮುಖ್ಯ ಸ್ಥಾವರದಿಂದ ಚಿಮ್ಮಲಗಿ ಯೋಜನೆಗೆ ನೀರು ಹರಿಸುವ ಪ್ರಕ್ರಿಯೆ ಆರಂಭಗೊಂಡಿತು   

ಆಲಮಟ್ಟಿ: ಆಲಮಟ್ಟಿ ಜಲಾಶಯ ವ್ಯಾಪ್ತಿಯ ಚಿಮ್ಮಲಗಿ ಪೂರ್ವ ಮತ್ತು ಪಶ್ಚಿಮ ಕಾಲುವೆಯ 31 ಮತ್ತು ಮುಳವಾಡ ಹಂತ-3 ರ (ಎಂಎಲ್ ಐ) ವ್ಯಾಪ್ತಿಯ ವಿವಿಧ ಕಾಲುವೆಗಳ 67 ಕೆರೆಗಳು ಸೇರಿ ಒಟ್ಟಾರೇ 98 ಕೆರೆಗಳನ್ನು ಎರಡು ಹಂತದಲ್ಲಿ ಭರ್ತಿ ಮಾಡುವ ಪ್ರಕ್ರಿಯೆ ಬುಧವಾರದಿಂದ ಆರಂಭಗೊಂಡಿದ್ದು, ಜಲಾಶಯದಿಂದ 1.52 ಟಿಎಂಸಿ ಅಡಿ ನೀರು ಹರಿಯಲಿದೆ.

ಮೊದಲ ಹಂತದಲ್ಲಿ ಭರ್ತಿಯಾಗುವ ಕೆರೆಗಳು:ಮುಳವಾಡ ಹಂತ-3 ರ ವಿಜಯಪುರ ಮುಖ್ಯ ಕಾಲುವೆಯ ಹೂವಿನಹಿಪ್ಪರಗಿ ಶಾಖಾ ಕಾಲುವೆ, ಬಸವನಬಾಗೇವಾಡಿ ಶಾಖಾ ಕಾಲುವೆ, 4 ಬಿ ಮುಖ್ಯ ಸ್ಥಾವರದಡಿಯ ಶಾಖಾ ಕಾಲುವೆಗಳ ವ್ಯಾಪ್ತಿಯ 30 ಕೆರೆಗಳು ಹಾಗೂ ಚಿಮ್ಮಲಗಿ ಏತ ನೀರಾವರಿಯ ಪಶ್ಚಿಮ ಮತ್ತು ನಾಗಠಾಣ ಹಾಗೂ ಕೋರವಾರ ಶಾಖಾ ಕಾಲುವೆಯ 10 ಕೆರೆಗಳು ಸೇರಿ 40 ಕೆರೆಗಳು ಏ.21 ರಿಂದ ಏ.30 ರ ಒಳಗೆ ಭರ್ತಿಯಾಗಲಿದೆ.

ಎರಡನೇ ಹಂತದಲ್ಲಿ ಭರ್ತಿಯಾಗುವ ಕೆರೆಗಳು:ಎಂಎಲ್‌ಐ ಹಂತ-3 ರ ಮಲಘಾಣ ಪಶ್ಚಿಮ ಕಾಲುವೆ, 4 ಎ ಮುಖ್ಯ ಸ್ಥಾವರದಡಿಯ ಬಬಲೇಶ್ವರ ಹಾಗೂ ಮನಗೂಳಿ ಶಾಖಾ ಕಾಲುವೆ, ವಿಜಯಪುರ ಮುಖ್ಯ ಕಾಲುವೆ, ತಿಡಗುಂದಿ ಶಾಖಾ ಕಾಲುವೆಯ 37 ಕೆರೆಗಳು ಹಾಗೂ ಚಿಮ್ಮಲಗಿ ಏತ ನೀರಾವರಿಯ ಪಶ್ಚಿಮ ಕಾಲುವೆ ಅಡಿಯ ಆರೇಶಂಕರ, ಬಸರಕೋಡ ಹಾಗೂ ಕಿರಿಶ್ಯಾಳ ಕುಡಿಯುವ ನೀರಿನ ಸರಬರಾಜು ಮಾಡುವ ಕೆರೆಗಳು ಹಾಗೂ ಪೂರ್ವ ಕಾಲುವೆಯ ಕಿ.ಮೀ 137 ರೊಳಗಿನ ಒಟ್ಟು 21 ಕೆರೆಗಳು ಸೇರಿ 58 ಕೆರೆಗಳು ಮೇ 1 ರಿಂದ ಮೇ 10 ರವರೆಗೆ ಭರ್ತಿಯಾಗಲಿವೆ.

ADVERTISEMENT

ಜಲಾಶಯದಲ್ಲಿ ನೀರಿನ ಸಂಗ್ರಹಣೆ:ಆಲಮಟ್ಟಿ ಮತ್ತು ನಾರಾಯಣಪುರ ಎರಡು ಜಲಾಶಯ ಸೇರಿ ಡೆಡ್ ಸ್ಟೋರೇಜ್ ಮಟ್ಟಕ್ಕಿಂತ 17.618 ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಿದೆ.

ನಾರಾಯಣಪುರಕ್ಕೆ 4 ಟಿಎಂಸಿ ಅಡಿ ನೀರು:ನಾರಾಯಣಪುರ ಜಲಾಶಯದ ಹಿನ್ನೀರು ಹಾಗೂ ಕಾಲುವೆಗಳ ಮೂಲಕ ಕುಡಿಯುವ ನೀರಿನ ಜಾಕ್‌ವೆಲ್‌ಗಳಿಗೆ ನೀರು ಹಾಗೂ ಇಂಡಿ ಶಾಖಾ ಕಾಲುವೆಯ ಮೂಲಕ ಕೆರೆಗಳ ಭರ್ತಿಗಾಗಿ ನಾರಾಯಣಪುರ ಜಲಾಶಯಕ್ಕೆ ಆಲಮಟ್ಟಿ ಜಲಾಶಯದಿಂದ 4 ಟಿಎಂಸಿ ಅಡಿ ನೀರು ಹರಿಸುವ ಪ್ರಕ್ರಿಯೆ ಬುಧವಾರದಿಂದ ಆರಂಭಗೊಂಡಿದೆ. ನಿತ್ಯವೂ 23,149 ಕ್ಯುಸೆಕ್ ನದಿ ತಳಪಾತ್ರಕ್ಕೆ ಹರಿಯಲಿದೆ.

ಮಲಪ್ರಭಾ ನದಿಗೆ ಹರಿಯಲಿದೆ ಕೃಷ್ಣೆ!

ಬಾಗಲಕೋಟೆ ಜಿಲ್ಲೆಯ ಬಾಂದಾರಗಳ ಭರ್ತಿಗಾಗಿ ಕೃಷ್ಣಾ ನದಿ ನೀರನ್ನು ಮಲಪ್ರಭಾ ನದಿಗೆ ಹರಿಸುವ ಪ್ರಕ್ರಿಯೆ ಆರಂಭಗೊಂಡಿದೆ.

ನಾರಾಯಣಪುರ ಜಲಾಶಯದ ಹಿನ್ನೀರಿನ ಕೃಷ್ಣಾ ನದಿಯ ನೀರನ್ನು ಮರೋಳ ಏತ ನೀರಾವರಿ ಪಶ್ಚಿಮ ಕಾಲುವೆಯ 35 ಕಿ.ಮೀ ಕ್ಕೆ ಸಮೀಪದ ಹಳ್ಳದ ಮೂಲಕ ಹಡಗಲಿ ಬ್ಯಾರೇಜ್ ನ ಹಿಂಭಾಗ ಮಲಪ್ರಭಾ ನದಿಗೆ ಹೋಗಿ ಸೇರಿಸಲಾಗುತ್ತದೆ. ಇದರಿಂದ ಮಲಪ್ರಭಾ ನದಿ ವ್ಯಾಪ್ತಿಯ ಹಡಗಲಿ ಬ್ಯಾರೇಜ್ ಭರ್ತಿಯಾಗಲಿದೆ.

ಮುಂದೆ ಸುರಳಿಕಲ್ಲ ಬ್ಯಾರೇಜ್, ಹಿರೇಮಾಗಿ, ಚಿಕ್ಕಮಾಗಿ ಬ್ಯಾರೇಜ್ ಗೂ ಕೃಷ್ಣೆ ಹರಿಯಲಿದೆ.

ಆಲಮಟ್ಟಿ ಬಲದಂಡೆ ಕಾಲುವೆಯ ಮೂಲಕ ತಿಮ್ಮಾಪೂರ ಏತ ನೀರಾವರಿ ಯೋಜನೆಯ ಡಿಸಿ-1ರ 21ನೇ ಕಿ.ಮೀ ಬಳಿ ಕಾಲುವೆಯ ಕೊನೆ ಹಂತದ ಮೂಲಕ ಹಳ್ಳಕ್ಕೆ ಕೃಷ್ಣಾ ನದಿ ನೀರು ಹರಿಸಿ ಅಲ್ಲಿಂದ ಮಲಪ್ರಭಾ ನದಿ ವ್ಯಾಪ್ತಿಯ ಖೈರವಾಡಗಿ ಬ್ಯಾರೇಜ್‌ ಅನ್ನು ಭರ್ತಿ ಮಾಡಲಾಗುತ್ತದೆ. ಇದರಿಂದ ಕೃಷ್ಣಾ ನದಿ ಮಲಪ್ರಭಾ ನದಿಗೆ ಸೇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.