ADVERTISEMENT

ಚಾಲಕನ ಬದುಕು ಅರಳಿಸಿದ ಹೂ

ಚಾಲಕ ವೃತ್ತಿ ತೊರೆದು ಕೃಷಿಗೆ ಜೈ ಎಂದ ಶಾಂತಪ್ಪ ವಡವಡಗಿ

ಮಹಾಬಲೇಶ್ವರ ಶಿ.ಗಡೇದ
Published 15 ಜುಲೈ 2019, 20:00 IST
Last Updated 15 ಜುಲೈ 2019, 20:00 IST
ಮುದ್ದೇಬಿಹಾಳ ತಾಲ್ಲೂಕು ಢವಳಗಿ ಗ್ರಾಮದ ಹೂವಿನ ತೋಟದಲ್ಲಿ ಶಾಂತಪ್ಪ ಢವಳಗಿ ದಂಪತಿ
ಮುದ್ದೇಬಿಹಾಳ ತಾಲ್ಲೂಕು ಢವಳಗಿ ಗ್ರಾಮದ ಹೂವಿನ ತೋಟದಲ್ಲಿ ಶಾಂತಪ್ಪ ಢವಳಗಿ ದಂಪತಿ   

ಮುದ್ದೇಬಿಹಾಳ: ಪತಿಯೊಬ್ಬರು, ಪತ್ನಿಯ ಆಸೆಯಂತೆ ಸ್ವಂತ ಗ್ರಾಮದಲ್ಲಿಯೇ ಕೃಷಿಯಲ್ಲಿ ತೊಡಗಿಕೊಂಡು, ವಿವಿಧ ಹೂಗಳನ್ನು ಬೆಳೆಯುವ ಮೂಲಕ ಒಳ್ಳೆಯ ಆದಾಯ ಪಡೆಯುತ್ತಿದ್ದಾರೆ.

ದೂರದ ಬೆಂಗಳೂರಿನಲ್ಲಿ ಕಾರು ಚಾಲಕನಾಗಿದ್ದ ತಾಲ್ಲೂಕಿನ ಢವಳಗಿ ಗ್ರಾಮದ ಶಾಂತಪ್ಪ ವಡವಡಗಿ, ಮದುವೆಯಾದ ನಂತರ ಪತ್ನಿ ಸುಮಂಗಲಾ ನಮ್ಮೂರಲ್ಲೆ ಮೂಲ ವೃತ್ತಿ (ಹೂವಿನ ವ್ಯಾಪಾರ) ಮಾಡೋಣ ಎಂದು ಹೇಳಿದ ಮಾತಿಗೆ ಒಪ್ಪಿಕೊಂಡು, ತಮ್ಮ ತೋಟದಲ್ಲಿ ಹೂ ಗಳನ್ನು ಬೆಳೆಯಲು ಆರಂಭಿಸಿ, ಕೈತುಂಬಾ ಸಂಪಾದನೆ ಮಾಡುವ ಜತೆಗೆ ತಂದೆ–ತಾಯಿ, ಬಂಧು–ಬಳಗದ ಜೊತೆಗೆ ಸಂತೃಪ್ತ ಜೀವನ ನಡೆಸುತ್ತಿದ್ದಾರೆ.

ಎಂಟು ಎಕರೆ ಸ್ವಂತ ಜಮೀನು ಹೊಂದಿರುವ ಶಾಂತಪ್ಪ ವಡವಡಗಿ ಆರಂಭದಲ್ಲಿ ತಮ್ಮ ತೋಟದಲ್ಲೇ ಒಂದು ಎಕರೆ ಹೂ ಬೆಳೆದು ಮಾರಾಟ ಮಾಡುತ್ತಿದ್ದ. ತಮ್ಮ ಕೊಳವೆ ಬಾವಿಗೆ ನೀರು ಬರುವುದು ನಿಂತಿದ್ದರಿಂದ ಸ್ವಲ್ಪವೂ ವಿಚಲಿತನಾಗದೆ, ಮತ್ತೊಬ್ಬರ ಎಂಟು ಎಕರೆ ಜಮೀನನ್ನು ಲಾವಣಿ ಹಾಕಿಕೊಂಡು ತಲಾ ಒಂದು ಎಕರೆಯಲ್ಲಿ ಚಂಡು ಹೂ ಮತ್ತು ಗಲಾಟೆ ಹೂ ಬೆಳೆಯುತ್ತಿದ್ದಾನೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಹಾಯ, ಸಲಹೆ ಪಡೆಯದ ಅವರು, ಹೂಗಳಿಗೆ ಬರುವ ರೋಗವನ್ನು ತನ್ನ ಅನುಭವದಿಂದಲೇ ಕಂಡು ಹಿಡಿಯುತ್ತಾರೆಂಬುದು ವಿಶೇಷ.

ADVERTISEMENT

‘ಪತ್ನಿಯ ಆಸೆಯಂತೆ ಚಾಲಕ ವೃತ್ತಿ ತೊರೆದು ಕಳೆದ ಎಂಟು ವರ್ಷದಿಂದ ವಿವಿಧ ಹೂಗಳನ್ನು ಬೆಳೆದು ಮಾರಾಟ ಮಾಡುತ್ತಿದ್ದೇನೆ. ಸದ್ಯ ಒಂದು ಎಕರೆಯಲ್ಲಿ ಸೊಲ್ಲಾಪುರದಿಂದ ಚಂಡು ಹೂ ಸಸಿಗಳು ಹಾಗೂ ಸಾಗ್ಲಿಯಿಂದ ಗಲಾಟೆ ಸಸಿಗಳನ್ನು ತಂದು ನಾಟಿ ಮಾಡಿದ್ದು, ಹನಿ ನೀರಾವರಿ ಮೂಲಕ ನೀರು ಉಣಿಸುತ್ತಿದ್ದೇನೆ. ವಿವಿಧ ಕೀಟನಾಶಕಗಳನ್ನು ಹನಿ ನೀರಾವರಿ ತಂತ್ರಜ್ಞಾನದಲ್ಲಿಯೇ ಸೇರಿಸಿ ಬಿಡಲಾಗುವುದು. ನಾಟಿ ಮಾಡಿದ ಮೂರು ತಿಂಗಳ ನಂತರ ನಿರಂತರ ಐದು ತಿಂಗಳವರೆಗೆ ಹೂ ಬಿಡುತ್ತ ಹೋಗುತ್ತದೆ’ ಎಂದು ರೈತ ಶಾಂತಪ್ಪ ವಡವಡಗಿ ಪ್ರಜಾವಾಣಿಗೆ ತಿಳಿಸಿದರು.

‘ಕೊಯ್ಲು ಮಾಡಿ ಪ್ರತಿನಿತ್ಯ ಮುದ್ದೇಬಿಹಾಳದ ಮೂರು ಜನ ವ್ಯಾಪಾರಿಗಳಿಗೆ ಕೆ.ಜಿಗೆ ₹ 30 ದಂತೆ 50 ಕೆ.ಜಿ ಮಾರುತ್ತೇನೆ. ಮೂಲ ವೃತ್ತಿಯೂ ಇದೆ ಆಗಿರುವುದರಿಂದ ಮನೆಯಲ್ಲಿಯೇ ಹೂವಿನ ಹಾರ ಕಟ್ಟಿ ಮಾರಾಟ ಸಹ ಮಾಡುತ್ತೇವೆ. ದೂರದ ಪ್ರದೇಶಗಳಿಗೆ ಕಳಿಸಿದರೆ ಸರಿಯಾಗಿ ಹಣ ಬರುವುದಿಲ್ಲ. ಹೀಗಾಗಿ ಸ್ಥಳೀಯ ಮಾರುಕಟ್ಟೆಯೇ ನೆಚ್ಚಿಕೊಂಡಿದ್ದೇನೆ. ಪ್ರತಿ ಅಮಾವಾಸ್ಯೆ ದಿನ ಸಮೀಪದ ಜಯವಾಡಗಿ ಶಿವಪ್ಪ ಮತ್ತು ಸೋಮನಾಥ ಮುತ್ಯಾನ ದೇವಸ್ಥಾನದಲ್ಲಿ ಐದಾರು ಸಾವಿರ ವ್ಯವಹಾರ ಆಗುತ್ತದೆ. ನನ್ನ ಕೆಲಸಕ್ಕೆ ಕುಟುಂಬ ಸದಸ್ಯರ ಸಹಕಾರ ತುಂಬಾ ಇದೆ’ ಎಂದು ಅವರು ತಿಳಿಸಿದರು.

*
ಪತ್ನಿ ಮಾತಿಗೆ ಬೆಲೆ ಕೊಟ್ಟು ಕೃಷಿಯಲ್ಲಿ ತೊಡಗಿಕೊಂಡು, ಹೂ ಬೆಳೆಯಲ್ಲಿ ಒಳ್ಳೆಯ ಆದಾಯ ಪಡೆಯುತ್ತಿದ್ದೇನೆ. ಕೊಳವೆ ಬಾವಿ ಬತ್ತಿದರೂ ಮತ್ತೊಬ್ಬರ ಜಮೀನು ಲಾವಣಿ ಹಾಕಿಕೊಂಡಿದ್ದೇನೆ.
-ಶಾಂತಪ್ಪ ವಡವಡಗಿ, ಢವಳಗಿ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.