ADVERTISEMENT

ತಾಂಬಾ: ವಾಡೆ ಗ್ರಾಮಕ್ಕೆ ಮೂಲಸೌಲಭ್ಯ ಕೊರತೆ

ಶಾಲೆ ಚಾವಣಿ ಕುಸಿಯುವ ಆತಂಕದಲ್ಲಿ ವಿದ್ಯಾರ್ಥಿ, ಶಿಕ್ಷಕರು

ಸಿದ್ದು ತ.ಹತ್ತಳ್ಳಿ
Published 27 ಫೆಬ್ರುವರಿ 2025, 5:58 IST
Last Updated 27 ಫೆಬ್ರುವರಿ 2025, 5:58 IST
ತಾಂಬಾ ಸಮೀಪದ ವಾಡೆ ಗ್ರಾಮದಲ್ಲಿ ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಟ್ಟಡ
ತಾಂಬಾ ಸಮೀಪದ ವಾಡೆ ಗ್ರಾಮದಲ್ಲಿ ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಟ್ಟಡ   

ತಾಂಬಾ: ಸಮೀಪದ ವಾಡೆ ಗ್ರಾಮ ಮೂಲಸೌಲಭ್ಯಗಳಿಲ್ಲದೇ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಗ್ರಾಮದ ಸರ್ಕಾರಿ ಶಾಲೆಗೆ ಸುಸಜ್ಜಿತ ಕಟ್ಟಡ ಇಲ್ಲ, ಅಂಗನವಾಡಿ ಕೇಂದ್ರದ ಚಾವಣಿ ಕುಸಿದುಹೋಗಿದೆ, ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಇಲ್ಲ, ಗ್ರಾಮಕ್ಕೆ ಸರಿಯಾದ ರಸ್ತೆ ಸಂಪರ್ಕವಿಲ್ಲ, ಗ್ರಾಮದಲ್ಲಿ ಹುಡುಕಿದರೂ ಸಿಸಿ ರಸ್ತೆಗಳು ಸಿಗುವುದಿಲ್ಲ.

ವಾಡೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಚಾವಣಿ ಪದರು ಉದುರುತ್ತಿದ್ದು, ಮಕ್ಕಳ ತಲೆ ಮೇಲೆ ಬೀಳುತ್ತಿದೆ. ಯಾವಾಗ ಏನು ಆಗುತ್ತದೆಯೋ ಎಂಬ ಭಯದಲ್ಲಿ ಶಿಕ್ಷಕರು ಮತ್ತು ಮಕ್ಕಳಿದ್ದಾರೆ. ಮಕ್ಕಳನ್ನು ಶಾಲೆಗೆ ಕಳುಹಿಸುವ ಪಾಲಕರೂ ನಿತ್ಯವೂ ಆತಂಕದಲ್ಲಿದ್ದಾರೆ.

ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1–5ನೇ ತರಗತಿ ಇದ್ದು, ಇಲ್ಲಿ 26 ಮಕ್ಕಳು ಓದುತ್ತಿದ್ದಾರೆ. ಇಬ್ಬರು ಶಿಕ್ಷಕರಿದ್ದಾರೆ.

ADVERTISEMENT

ಶುದ್ಧ ನೀರು ತರಲು ಸಮೀಪದ ಸುರಗಿಹಳ್ಳಿ ಗ್ರಾಮಕ್ಕೆ ಹೋಗುವ ಅನಿವಾರ್ಯತೆ ಈ ಗ್ರಾಮಸ್ಥರಿಗೆ ಬಂದೊದಗಿದೆ. ತಾಂಬಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಈ ಗ್ರಾಮದಲ್ಲಿ ಶುದ್ಧ ನೀರಿನ ಸಮಸ್ಯೆ ಗಂಭೀರವಾಗಿದ್ದರೂ ಇದುವರೆಗೂ ಸಂಬಂಧಪಟ್ಟ ಅಧಿಕಾರಿಗಳು ಅತ್ತ ತಲೆ ಹಾಕಿಲ್ಲ. ಸಂಬಂಧಿಸಿದವರು ಈಗಲಾದರೂ ಎಚ್ಚೆತ್ತುಕೊಂಡು ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

‘ಗ್ರಾಮದ ಸುತ್ತ ಮುತ್ತ ಇರುವ ತಿಪ್ಪೆ ಗುಂಡಿಯನ್ನು ಸ್ವಚ್ಛ ಮಾಡಬೇಕೆಂದು ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನಗಿಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸುತ್ತಾರಾ ಎಂಬುದು ಕಾದು ನೋಡಬೇಕಾಗಿದೆ’ ಎನ್ನುತ್ತಾರೆ ಗ್ರಾಮಸ್ಥ ಕಲ್ಲಪ್ಪ ಅವಟಿ.

ಗ್ರಾಮದಲ್ಲಿರುವ ಕೊಳವೆಬಾವಿ ಸುತ್ತ ಕೊಳಚೆ ನೀರು ಸದಾ ನಿಂತಿರುವ ಕಾರಣ ರೋಗ ಹರಡುವ ಭೀತಿ ಗ್ರಾಮಸ್ಥರಿಗೆ ಎದುರಾಗಿದೆ. ಅಲ್ಲದೇ, ಕೊಳವೆಬಾವಿ ಸುತ್ತ ಮತ್ತ ತಿಪ್ಪೆ ಸುರುವಿದ್ದಾರೆ. ಇಂತಹ ಕೆಟ್ಟ ವಾತಾವರಣದಲ್ಲಿರುವ ಕೊಳವೆಬಾವಿ ನೀರನ್ನೇ ಉಪಯೋಗಿಸುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

‘ವಾಡೆ ಗ್ರಾಮದ ಶಾಲೆಗಳ ದುರಸ್ತಿ ಬಗ್ಗೆ ಮತ್ತು ಹೊಸ ಕೊಠಡಿಗಳ ನಿರ್ಮಾಣಕ್ಕೆ ಮೇಲಧಿಕಾರಿಗಳ ಮೂಲಕ ಪ್ರಸ್ತಾವ ಕಳುಹಿಸಲಾಗಿದೆ. ಗ್ರಾಮದಲ್ಲಿ ಆಗಿರುವ ಕೊಳಚೆಯನ್ನು ಎರಡು ದಿನದಲ್ಲಿ ಸ್ವಚ್ಛಗೊಳಿಸಲಾಗುವುದು’ ಎಂದು ತಾಂಬಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀಕಾಂತ್ ಹಡಲಸಂಗ ‘ಪ್ರಜಾವಾಣಿ’ಗೆ ತಿಳಿಸಿದರು.

ಸರ್ಕಾರಿ ಶಾಲೆ ದುರಸ್ತಿಗೆ ₹3.5 ಲಕ್ಷ ಅನುದಾನ ಮಂಜೂರಾಗಿದೆ. ಶೀಘ್ರದಲ್ಲೇ ದುರಸ್ತಿ ಕಾರ್ಯ ಆರಂಭಿಸಲು ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ
-ಅಶೋಕ ಮನಗೂಳಿ, ಶಾಸಕ
ತಾಂಬಾ ಸಮೀಪದ ವಾಡೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಟ್ಟಡದ ಚಾವಣಿ ಪದರು ಬಿದ್ದಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.