ADVERTISEMENT

ಕೈ ಕೊಟ್ಟ ವರುಣ; ಆತಂಕದಲ್ಲಿ ಅನ್ನದಾತ

ಜಿಲ್ಲೆಯಲ್ಲಿ ಇದುವರೆಗೆ ಶೇ 10ರಷ್ಟು ಮಾತ್ರ ಬಿತ್ತನೆ

ಬಾಬುಗೌಡ ರೋಡಗಿ
Published 19 ಜೂನ್ 2019, 19:30 IST
Last Updated 19 ಜೂನ್ 2019, 19:30 IST
ವಿಜಯಪುರ ಹೊರವಲಯದ ಭೂತನಾಳ ತಾಂಡಾ ಬಳಿಯ ಜಮೀನೊಂದರಲ್ಲಿ ಸಜ್ಜೆ ಬಿತ್ತನೆಯಲ್ಲಿ ತೊಡಗಿದ್ದ ರೈತ –ಪ್ರಜಾವಾಣಿ ಚಿತ್ರ/ ಸಂಜೀವ ಅಕ್ಕಿ
ವಿಜಯಪುರ ಹೊರವಲಯದ ಭೂತನಾಳ ತಾಂಡಾ ಬಳಿಯ ಜಮೀನೊಂದರಲ್ಲಿ ಸಜ್ಜೆ ಬಿತ್ತನೆಯಲ್ಲಿ ತೊಡಗಿದ್ದ ರೈತ –ಪ್ರಜಾವಾಣಿ ಚಿತ್ರ/ ಸಂಜೀವ ಅಕ್ಕಿ   

ವಿಜಯಪುರ: ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗದ್ದರಿಂದ ಇದುವರೆಗೆ ಶೇ 10ರಷ್ಟು ಮಾತ್ರ ಬಿತ್ತನೆಯಾಗಿದ್ದು, ಅನ್ನದಾತನ ಮೊಗದಲ್ಲಿ ಆತಂಕ ಮನೆಮಾಡಿದೆ.

‘ಹೋದ ವರ್ಷ ರೋಹಿಣಿ, ಮೃಗಶಿರ ಮಳೆ ಚೆನ್ನಾಗಿ ಆಗಿದ್ದರಿಂದ ಇಷ್ಟೊತ್ತಿಗೆ ಹೆಸರು, ಉದ್ದು, ಸಜ್ಜೆ, ತೊಗರಿ ಬಿತ್ತಿದ್ದೆವು. ಗೇಣುದ್ದ ಬೆಳೆ ಬೆಳೆದಿತ್ತು. ಈ ಸಲ ಮಳೆ ಆಗದ್ದರಿಂದ ಬಿತ್ತನೆ ಸಿದ್ಧತೆಯೂ ಮಾಡಿಕೊಂಡಿಲ್ಲ. ಹಸಿ ಮಾಡಿ ಬಿತ್ತಬೇಕು ಎಂದರೆ ಬಾವಿ ನೀರೂ ಕಡಿಮೆಯಾಗಿದೆ. ಈ ವಾರದಲ್ಲಿ ಮಳೆಯಾದರೆ ಎರಡು ಎಕರೆ ಮೆಕ್ಕೆಜೋಳ, ಒಂದು ಎಕರೆ ಹೆಸರು ಬಿತ್ತನೆ ಮಾಡಬೇಕು ಅಂದುಕೊಂಡಿದ್ದೇನೆ. ಮಳೆ ಆಗದಿದ್ದರೆ ತೊಗರಿ ಬಿತ್ತನೆ ಅನಿವಾರ್ಯ’ ಎಂದು ಹೂವಿನ ಹಿಪ್ಪರಗಿಯ ರೈತ ಚನ್ನು ಹರಜನ ಹೇಳಿದರು.

‘ಹೋದ ವರ್ಷ ಬೇಗ ಮಳೆ ಆಗಿತ್ತು. ₹ 30 ಸಾವಿರ ಖರ್ಚು ಮಾಡಿ ಐದು ಎಕರೆ ಹೊಲದಲ್ಲಿ ತೊಗರಿ ಬಿತ್ತನೆ ಮಾಡಿದ್ದೆ. ನಂತರ ಮಳೆ ಕೈ ಕೊಟ್ಟಿದ್ದರಿಂದ ಬಿತ್ತಿದ ಬೀಜ ಮೊಳ ಎತ್ತರ ಆಗಿ ಬೆಳೆ ಒಣಗಿತು. ಈ ಬಾರಿ ಮಳೆಗಾಲ ಚೆನ್ನಾಗಿದೆ ಎಂದು ಎಲ್ಲರೂ ಹೇಳುತ್ತಿದ್ದರು. ಖುಷಿಯಾಗಿತ್ತು. ಆದರೆ, ಇದುವರೆಗೂ ಮಳೆಯಾಗಿಲ್ಲ’ ಎಂದು ಇಂಡಿಯ ರೈತ ಬಸಪ್ಪ ಭದ್ರಶೆಟ್ಟಿ ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಜಿಲ್ಲೆಯ ವಾಡಿಕೆ ಮಳೆ ಪ್ರಮಾಣ 657 ಮಿ.ಮೀ ಆಗಿದ್ದು, ಇದುವರೆಗೆ 114 ಮಿ.ಮೀ ಮಳೆ ಆಗುವ ನಿರೀಕ್ಷೆಯಿತ್ತು. ಆದರೆ, ಜನವರಿಯಿಂದ ಜೂನ್‌ 15 ರವರೆಗೆ 72 ಮಿ.ಮೀ ಮಾತ್ರ ಮಳೆ ಆಗಿದೆ. ಹೀಗಾಗಿ ಮುಂಗಾರು ಬಿತ್ತನೆ ಪ್ರಮಾಣ ಶೇ 10ರಷ್ಟು ಮಾತ್ರ ಆಗಿದೆ. ಮಳೆ ಕೊರತೆಯಿಂದ ಈಗಾಗಲೇ ಉದ್ದು, ಹೆಸರು ಬಿತ್ತನೆ ಅವಧಿ ಮುಗಿದಿದೆ. ಜುಲೈ 10ರೊಳಗಾಗಿ ಮಳೆಯಾದರೆ ಸೂರ್ಯಕಾಂತಿ, ಸಜ್ಜೆ, ಮೆಕ್ಕೆಜೋಳ ಬಿತ್ತನೆ ಮಾಡಬಹುದು. ಆಗಸ್ಟ್‌ ಮೊದಲ ವಾರದವರೆಗೆ ತೊಗರಿ ಬಿತ್ತಲು ಅವಕಾಶವಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ್ ತಿಳಿಸಿದರು.

‘ಜಿಲ್ಲೆಯಲ್ಲಿ 4.30 ಲಕ್ಷ ಹೆಕ್ಟೇರ್ ಮುಂಗಾರು ಬಿತ್ತನೆ ಗುರಿ ಹೊಂದಲಾಗಿದೆ. 76 ಸಾವಿರ ಮೆಟ್ರಿಕ್‌ ಟನ್‌ ರಸಗೊಬ್ಬರ ಹಾಗೂ 12 ಸಾವಿರ ಕ್ವಿಂಟಲ್‌ ಬಿತ್ತನೆ ಬೀಜಗಳನ್ನು ಸಂಗ್ರಹಿಸಿ ಇಡಲಾಗಿದೆ. ಹೆಚ್ಚುವರಿ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.