ADVERTISEMENT

ಆಲಮಟ್ಟಿ: ಯುಕೆಪಿ ಕಚೇರಿಯ ಜೀಪ್, ಕಂಪ್ಯೂಟರ್ ಜಪ್ತಿ

ರೈತರಿಗೆ ನೀಡಬೇಕಿದ್ದ ಪರಿಹಾರ ನೀಡದ್ದಕ್ಕಾಗಿ ನ್ಯಾಯಾಲಯ ಆದೇಶ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 4:03 IST
Last Updated 18 ಡಿಸೆಂಬರ್ 2025, 4:03 IST
ವಶಪಡಿಸಿಕೊಂಡ ಜಮೀನಿಗೆ ಪರಿಹಾರ ನೀಡದ ಕಾರಣ ಆಲಮಟ್ಟಿಯ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಾರ್ಯಾಲಯದ ಸಾಮಗ್ರಿ ಬುಧವಾರ ಜಪ್ತಿ ಮಾಡಲಾಯಿತು
ವಶಪಡಿಸಿಕೊಂಡ ಜಮೀನಿಗೆ ಪರಿಹಾರ ನೀಡದ ಕಾರಣ ಆಲಮಟ್ಟಿಯ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಾರ್ಯಾಲಯದ ಸಾಮಗ್ರಿ ಬುಧವಾರ ಜಪ್ತಿ ಮಾಡಲಾಯಿತು   

ಆಲಮಟ್ಟಿ: ವಶಪಡಿಸಿಕೊಂಡ ಜಮೀನಿಗೆ ನ್ಯಾಯಾಲಯದ ಆದೇಶದಂತೆ ವಿವಿಧ ಪ್ರಕರಣಗಳಲ್ಲಿ ಪರಿಹಾರ ನೀಡದ ಕಾರಣ, ಯುಕೆಪಿಯ ಇಲ್ಲಿಯ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಾರ್ಯಾಲಯದ ಜೀಪ್, ಕಂಪ್ಯೂಟರ್ ಮತ್ತೀತರ ವಸ್ತುಗಳನ್ನು ಬುಧವಾರ ಜಪ್ತಿ ಮಾಡಲಾಯಿತು.

ಬಸವನಬಾಗೇವಾಡಿ, ನಂದಿಹಾಳ, ಮನಗೂಳಿಯ ಮೂರು ಗ್ರಾಮಗಳ ಮೂವರು ರೈತರಿಗೆ ವಿಜಯಪುರದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆದೇಶದಂತೆ ಪರಿಹಾರ ನೀಡದ ಕಾರಣ ಜಪ್ತಿ ಮಾಡಲಾಗಿದೆ ಎಂದು ರೈತ ಪರ ವಕೀಲರಾದ ಪಿ.ಎಂ. ಜಕಾತಿ, ಆರ್.ಎಸ್. ಬಿರಾದಾರ, ಎಂ.ಎಸ್. ಹಿರೇಮಠ ತಿಳಿಸಿದರು.

ರೈತ ಮಹಾದೇವಪ್ಪ ಬಸಪ್ಪ ಕುಮಸಿ ಅವರಿಗೆ ನೀಡಬೇಕಾದ ₹2.63 ಕೋಟಿ, ರೈತ ಶಿವಪ್ಪ ಪರಸಪ್ಪ ದಳವಾಯಿ ಅವರಿಗೆ ₹86 ಲಕ್ಷ, ಗಂಗಪ್ಪ ಮಲ್ಲಪ್ಪ ಗಂಗನಳ್ಳಿ ಅವರಿಗೆ ₹47 ಲಕ್ಷ ಪರಿಹಾರ ನೀಡಬೇಕಿತ್ತು. ಇವರ ಜಮೀನು ವಶಪಡಿಸಿಕೊಂಡು 10 ವರ್ಷ ಕಳೆದಿವೆ. ಜಿಲ್ಲಾ ನ್ಯಾಯಾಲಯವು ಪರಿಹಾರ ಹೆಚ್ಚಿಸಿ ಆದೇಶಿಸಿ ಮೂರು ವರ್ಷ ಕಳೆದಿದೆ. ಹೈಕೋರ್ಟ್ ಕೂಡಾ ತಕ್ಷಣ ರೈತರಿಗೆ ಶೇ 50 ರಷ್ಟು ಪರಿಹಾರ ನೀಡುವಂತೆ ಆದೇಶಿಸಿದೆ. ಆದರೆ, ಈವರೆಗೂ ವಿಶೇಷ ಭೂಸ್ವಾಧೀನಾಧಿಕಾರಿಗಳು ಪರಿಹಾರ ನೀಡದ ಕಾರಣ ನ್ಯಾಯಾಲಯ ಜಪ್ತಿ ವಾರಂಟ್ ಹೊರಡಿಸಿದೆ. 

ADVERTISEMENT

ಮೊದಲ ಹಂತದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಆಲಮಟ್ಟಿ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಾರ್ಯಾಲಯದ ಸಾಮಗ್ರಿ ಜಪ್ತಿ ಮಾಡಲಾಗಿದೆ. ಮುಂದಿನ ಹಂತದಲ್ಲಿ ಕೆಬಿಜೆಎನ್ಎಲ್ ಕಚೇರಿಗಳನ್ನು ಜಪ್ತಿ ಮಾಡಲಾಗುವುದು ಎಂದು ರೈತ ಪರ ವಕೀಲರು ತಿಳಿಸಿದರು.

ಒಂದು ಬುಲೆರೋ ಜೀಪು, 9 ಕಂಪ್ಯೂಟರ್ ಮಾನಿಟರ್, 8 ಸಿಪಿಯು, 1 ಝರಾಕ್ಸ್ ಯಂತ್ರ, 9 ಟೇಬಲ್, 12 ಕುರ್ಚಿ, 3 ಕಂಪ್ಯೂಟರ್ ಪ್ರಿಂಟರ್‌ಗಳನ್ನು ವಶಪಡಿಸಿಕೊಳ್ಳಲಾಯಿತು. 

ಯುಕೆಪಿಯ ಕಾಲುವೆ ನಿರ್ಮಾಣಕ್ಕೆ ರೈತರಿಂದ ಜಮೀನು ವಶಪಡಿಸಿಕೊಳ್ಳಲಾಗಿತ್ತು.

ವಶಪಡಿಸಿಕೊಂಡ ಜಮೀನಿಗೆ ಪರಿಹಾರ ನೀಡದ ಕಾರಣ ಆಲಮಟ್ಟಿಯ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಾರ್ಯಾಲಯದ ಸಾಮಗ್ರಿ ಬುಧವಾರ ಜಪ್ತಿ ಮಾಡಲಾಯಿತು