ADVERTISEMENT

ಹಸಿರೇ ಉಸಿರು ಮೂಲ ಮಂತ್ರವಾಗಲಿ-ಡಾ.ದೇವಾನಂದ ಚವ್ಹಾಣ

ನಾಗಠಾಣ ಶಾಸಕ ಡಾ.ದೇವಾನಂದ ಚವ್ಹಾಣ ಅಭಿಮತ

​ಪ್ರಜಾವಾಣಿ ವಾರ್ತೆ
Published 14 ಜೂನ್ 2021, 16:48 IST
Last Updated 14 ಜೂನ್ 2021, 16:48 IST
ನಾಗಠಾಣ ಮತಕ್ಷೇತ್ರದ ಬರಡೋಲ ಗ್ರಾಮದಲ್ಲಿ ಶಾಸಕ ಡಾ. ದೇವಾನಂದ ಚವ್ಹಾಣ ಅವರು ಆಶಾ ಕಾರ್ಯಕರ್ತೆಯರಿಗೆ ಆಹಾರ ಧಾನ್ಯದ ಕಿಟ್ ವಿತರಿಸಿದರು
ನಾಗಠಾಣ ಮತಕ್ಷೇತ್ರದ ಬರಡೋಲ ಗ್ರಾಮದಲ್ಲಿ ಶಾಸಕ ಡಾ. ದೇವಾನಂದ ಚವ್ಹಾಣ ಅವರು ಆಶಾ ಕಾರ್ಯಕರ್ತೆಯರಿಗೆ ಆಹಾರ ಧಾನ್ಯದ ಕಿಟ್ ವಿತರಿಸಿದರು   

ವಿಜಯಪುರ: ಪ್ರತಿಯೊಬ್ಬರು ಪರಿಸರ ಪ್ರಜ್ಞೆ ಬೆಳಸಿಕೊಳ್ಳಬೇಕು. ಹಸಿರೇ ಉಸಿರು ಎಂಬುದು ನಮ್ಮ ಮೂಲ ಮಂತ್ರವಾಗಬೇಕು. ಹಸಿರು ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ಶಾಸಕ ಡಾ. ದೇವಾನಂದ ಚವ್ಹಾಣ ಹೇಳಿದರು.

ನಾಗಠಾಣ ಮತಕ್ಷೇತ್ರದ ಕೆರೂರ ಹಾಗೂ ಬರಡೋಲ ಗ್ರಾಮಗಳಲ್ಲಿ ವನಮಹೋತ್ಸವದ ಅಂಗವಾಗಿ ಸಸಿ ನೆಟ್ಟು, ಕೊರೊನಾ ವಾರಿಯರ್ಸ್‌ಗಳಿಗೆ ಆಹಾರ ಧಾನ್ಯ ಕಿಟ್ ಹಾಗೂ ಸೀರೆ ವಿತರಿಸಿ ಅವರು ಮಾತನಾಡಿದರು.

ಆಮ್ಲಜನಕ ಪ್ರತಿಯೊಂದು ಜೀವಿಗೆ ಬೇಕಾದ ಅಮೂಲ್ಯ ಜೀವಧಾತುವಾಗಿದೆ. ಕೊರೊನಾ ಎರಡನೇ ಅಲೆಯಲ್ಲಿ ಇಷ್ಟೊಂದು ಸಾವು ನೋವುಗಳು ಸಂಭವಿಸಲು ಆಮ್ಲಜನಕ ಕೊರತೆಯೂ ಪ್ರಮುಖ ಕಾರಣವಾಗಿದೆ. ಅದೆಷ್ಟೇ ಹಣ ನೀಡಿದರೂ ಆಮ್ಲಜನಕ ಸಿಗದ ಪರಿಸ್ಥಿತಿಯಲ್ಲಿ ಆಸ್ಪತ್ರೆಗಳಲ್ಲಿ ನಿರ್ಮಾಣವಾಗಿತ್ತು ಎಂಬುದನ್ನು ಯಾರೂ ಮರೆಯಬಾರದು ಎಂದರು.

ADVERTISEMENT

ಮುಂದಿನ ಜನಾಂಗಕ್ಕಾಗಿ ನಾವು ಈಗಿನಿಂದಲೇ ಕಡ್ಡಾಯವಾಗಿ ಸಸಿ ನೆಟ್ಟು ಪರಿಸರ ಸಂರಕ್ಷಣೆ ಮಾಡೋಣ, ಆಮ್ಲಜನಕ ಕೊರತೆಯೆಂಬುದನ್ನು ಹೋಗಲಾಡಿಸೋಣ. ಪರಿಸರ ಪ್ರಜ್ಞೆಗೆ ಎಲ್ಲರೂ ಸಾಕ್ಷಿಯಾಗೋಣ. ಮನೆಗೊಂದು ಮರ, ಊರಿಗೊಂದು ವನ ಬೆಳೆಸುವ ಕಾಯಕ ಪ್ರಾರಂಭಿಸೋಣ ಹಚ್ಚಿದ ಸಸಿಗಳನ್ನು ಮಕ್ಕಳಂತೆ ಬೆಳೆಸೋಣ ಎಂದು ತಿಳಿಹೇಳಿದರು.

ಕೊರೊನಾ ಸಂದರ್ಭದಲ್ಲಿ ತಮ್ಮ ಪ್ರಾಣವನ್ನೆ ಒತ್ತೆಯಿಟ್ಟು ಹಗಲಿರುಳು ಶ್ರಮಿಸಿದ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಜಿಲ್ಲಾಡಳಿತ ಗೌರವಪೂರ್ವಕವಾಗಿ ಆಹಾರಧಾನ್ಯದ ಕಿಟ್ ಹಾಗೂ ಸೀರೆ ನೀಡುತ್ತಿದ್ದು, ಇದನ್ನು ಸ್ವಮನಸ್ಸಿನಿಂದ ಸ್ವೀಕರಿಸಬೇಕು. ನಿಮ್ಮ ಸೇವೆಗೆ ನಾವೆಲ್ಲ ಚಿರಋಣಿಯಾಗಿದ್ದೇವೆ ಎಂದರು.

ಚಡಚಣ ತಾಲ್ಲೂಕು ಪಂಚಾಯ್ತಿ ಇಓ ಸಂಜೆಯ ಕಡಗೇಕರ ಮಾತನಾಡಿದರು. ಬರಡೋಲ ಗ್ರಾಮ ಪಂಚಾಯ್ತಿ ಅಧ್ಯಕ್ಷ ಲಾಲಸಾಬ ಬಡೇಘರ್, ಬಿಇಓ ಶಿವಪ್ಪ ಹಾದಿಮನಿ, ಮುಖಂಡರಾದ ಸಿದ್ದರಾಯ ಬಿರಾದಾರ, ರವಿ ಕಟ್ಟಿಮನಿ, ಪರಶುರಾಮ ಕಟ್ಟಿಮನಿ, ಹಸನಸಾಬ ಬಾಗವಾನ, ಮಹೇಶ ಕುಲಕರ್ಣಿ, ಕೆರೂರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸೋಮನಿಂಗ ಐಹೊಳಿ, ಧರೆಪ್ಪ ಪೀರಗೊಂಡ, ಎಎಸ್‌ಐ ಪಿ. ಎ. ಅರವತಿ, ಜಗದೀಶ ಅನಂತಪೂರ, ಸುಭಾಷ ಭೈರಗೊಂಡ, ಸುರೇಶ ಬಿರಾದಾರ, ವಿಠ್ಠಲ ವಡಗಾಂವ, ಅರಬಜ್ ಪಾಟೀಲ, ವಿಠ್ಠಲ ಕಸಮುಳೆ, ಸಚಿನ್‌ ವಾಲಿ, ಸತೀಶ ಬೈರಾಮಡಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.