ADVERTISEMENT

ಲಾಕ್‌ಡೌನ್‌ ಸಡಿಲಿಕೆ; ಮೈಮರೆತ ಜನ!

ವಿಜಯಪುರ ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿನ ಪ್ರಮಾಣ ಶೇ 8.91

​ಪ್ರಜಾವಾಣಿ ವಾರ್ತೆ
Published 14 ಜೂನ್ 2021, 17:28 IST
Last Updated 14 ಜೂನ್ 2021, 17:28 IST
ವಿಜಯಪುರ ನಗರದ ಮಾರುಕಟ್ಟೆ ಪ್ರದೇಶದಲ್ಲಿ ಜನ ಸಂಚಾರ ಹೆಚ್ಚಿತ್ತು
ವಿಜಯಪುರ ನಗರದ ಮಾರುಕಟ್ಟೆ ಪ್ರದೇಶದಲ್ಲಿ ಜನ ಸಂಚಾರ ಹೆಚ್ಚಿತ್ತು   

ವಿಜಯಪುರ: ಕೋವಿಡ್ ಸೋಂಕಿನ ಪ್ರಮಾಣ(ಶೇ 8.91) ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸೋಮವಾರದಿಂದ ಲಾಕ್‌ಡೌನ್‌ ಸಡಿಲಿಕೆ ಮಾಡಲಾಗಿದ್ದು, ಜನಜೀವನ ತುಸು ಸಹಜ ಸ್ಥಿತಿಗೆ ಮರಳಿದೆ.

ನಗರ ಮತ್ತು ಪಟ್ಟಣಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದ್ದ ಬ್ಯಾರಿಕೇಡ್‌ಗಳನ್ನು ಭಾನುವಾರವೇ ತೆರವುಗೊಳಿಸಿದ್ದರಿಂದ ಎಲ್ಲ ರಸ್ತೆಗಳು ಸಂಚಾರಕ್ಕೆ ಮುಕ್ತವಾಗಿದ್ದವು.

ಸುಮಾರು 53 ದಿನಗಳಿಂದ ಕೋವಿಡ್‌ ಭಯದಿಂದ ಮನೆಯೊಳಗೆ ಬಂಧಿಯಾಗಿದ್ದ ಜನರು ಲಾಕ್‌ಡೌನ್‌ ಸಡಿಲಿಕೆಯಾಗುತ್ತಿರುವಂತೆ ಕೋವಿಡ್ ಇಲ್ಲವೇನೋ ಎಂಬಂತೆ ವರ್ತಿಸುತ್ತಿದ್ದರು. ಕೆಲವರು ಮಾಸ್ಕ್‌ ತೊಡದೇ ಸಂಚರಿಸುತ್ತಿದ್ದರು. ಪರಸ್ಪರ ಅಂತರ ಎಂಬುದು ಮಾಯವಾಗಿತ್ತು.

ADVERTISEMENT

ನಗರ ಸೇರಿದಂತೆ ಜಿಲ್ಲೆಯ ವಿವಿಧ ಪಟ್ಟಣಗಳ ಪ್ರಮುಖ ರಸ್ತೆಯಲ್ಲಿ, ಸಂತೆಯಲ್ಲಿ, ಮಾರುಕಟ್ಟೆಯಲ್ಲಿ, ಅಂಗಡಿಗಳ ಎದುರು ಹಾಗೂ ವಾಹನಗಳಲ್ಲಿ ಜನರು ಮೈಮರೆತು ಸಂಚರಿಸುತ್ತಿರುವುದು ಕಂಡುಬಂದಿತು.

ವಿಜಯಪುರ ನಗರದ ಮಾರುಕಟ್ಟೆಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಹೂವು, ಹಣ್ಣು, ತರಕಾರಿ ಸೇರಿದಂತೆ ಬೀದಿಬದಿ ವ್ಯಾಪಾರಸ್ಥರು ಎಂದಿನಂತೆ ಅತಿಕ್ರಮಿಸಿಕೊಂಡು ವ್ಯಾಪಾರದಲ್ಲಿ ತೊಡಗಿದ್ದರು.

ನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗದ ಅಂಗಡಿಗಳಲ್ಲಿ ದಿನಸಿ, ಬೇಕರಿ, ಗ್ಯಾರೇಜ್‌, ಕಟ್ಟಡ ನಿರ್ಮಾಣ ಸಾಮಗ್ರಿ, ಮಾಂಸ ಮತ್ತು ಮೀನು ಅಂಗಡಿಗಳ ಎದುರು ಜನ ಅಂತರವನ್ನು ಮರೆತು ಖರೀದಿಯಲ್ಲಿ ತೊಡಗಿದ್ದರು. ಮದ್ಯದಂಗಡಿಗಳು ಮಧ್ಯಾಹ್ನ 2ರವರೆಗೆ ವಹಿವಾಟು ನಡೆಸಿದವು.

ಆಟೊ, ಟಂಟಂ, ಟ್ಯಾಕ್ಸಿಗಳು ಬೀದಿಗೆ ಇಳಿದ್ದವು. ರಸ್ತೆಗಳಲ್ಲಿ ವಾಹನಗಳ ಓಡಾಟ ಹೆಚ್ಚಿತ್ತು. ಲಾಕ್‌ಡೌನ್‌ ಕಾರಣಕ್ಕೆ ಬಿಕೋ ಎನ್ನುತ್ತಿದ್ದ ಪೆಟ್ರೋಲ್‌ ಬಂಕ್‌ಗಳಲ್ಲಿ ವಾಹನಗಳ ಸಾಲು ಕಂಡುಬಂತು. ವಾಹನಗಳಲ್ಲಿ ನಿಗದಿಗಿಂತ ಹೆಚ್ಚಿನ ಜನರು ಪ್ರಯಾಣಿಸಿದರು. ಎಲ್ಲೆಡೆ ಲಾಕ್‌ಡೌನ್‌ ನಿಯಮಗಳು ಕಣ್ಮರೆಯಾಗಿದ್ದವು.

ಉದ್ಯಾನಗಳಲ್ಲಿ ಬೆಳಿಗ್ಗೆ 5ರಿಂದ 10ರ ವರೆಗೆ ಮಾತ್ರ ವಾಯುವಿಹಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಒಂದಷ್ಟು ಜನ ವಾಕಿಂಗ್‌, ಜಾಗಿಂಗ್‌ ಮಾಡುತ್ತಿರುವುದು ಕಂಡುಬಂದಿತು.

ನಿರ್ಬಂಧ ಮುಂದುವರಿಕೆ:

ಮಾಲ್‌, ಚಿತ್ರಮಂದಿರ, ಬ್ಯೂಟಿ ಪಾರ್ಲರ್‌, ಕ್ಷೌರದಂಗಡಿ, ಜಿಮ್‌ಗಳ ಆರಂಭಕ್ಕೆ ಇನ್ನೂ ಅವಕಾಶ ನೀಡಿಲ್ಲ. ಜೊತೆಗೆ ದೇವಸ್ಥಾನ, ಚರ್ಚ್‌, ಮಸೀದಿಗಳಲ್ಲಿ ದಿನನಿತ್ಯದ ಪೂಜೆ ಹೊರತುಪಡಿಸಿ ಧಾರ್ಮಿಕ ಚಟುವಟಿಕೆ ನಿರ್ಬಂಧ ಮುಂದುವರಿದಿದೆ. ರಾತ್ರಿ 7ರಿಂದ ಬೆಳಿಗ್ಗೆ 5ರ ವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.