ADVERTISEMENT

ಲೋಣಿ ಹೋಟೆಲ್‌ ‘ಪೂರಿ–ಪಿಟ್ಲಾ’ ಫೇಮಸ್‌..! ಇಲ್ಲಿ ಮಾತ್ರವಲ್ಲ, ಹೊರ ರಾಜ್ಯದಲ್ಲೂ..

ವಿಜಯಪುರ ಜಿಲ್ಲೆಯಲ್ಲಷ್ಟೇ ಅಲ್ಲ...

ಶಾಂತೂ ಹಿರೇಮಠ
Published 13 ಅಕ್ಟೋಬರ್ 2018, 20:00 IST
Last Updated 13 ಅಕ್ಟೋಬರ್ 2018, 20:00 IST
ಸಿಂದಗಿ ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಲೋಣಿ ಹೋಟೆಲ್‌ನಲ್ಲಿ ಮಲ್ಲು ಗಿರಾಕಿಗಳ ಜತೆ
ಸಿಂದಗಿ ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಲೋಣಿ ಹೋಟೆಲ್‌ನಲ್ಲಿ ಮಲ್ಲು ಗಿರಾಕಿಗಳ ಜತೆ   

ಸಿಂದಗಿ:ಪಟ್ಟಣದ ಲೋಣಿ ಹೋಟೆಲ್‌ನ ಪೂರಿ–ಪಿಟ್ಲಾ ಜಿಲ್ಲೆಯಲ್ಲಷ್ಟೇ ಅಲ್ಲ; ನೆರೆಯ ಕಲಬುರ್ಗಿ, ಯಾದಗಿರಿ, ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯಲ್ಲೂ ತುಂಬಾ ಫೇಮಸ್ಸು.

ಕಲಬುರ್ಗಿ-ವಿಜಯಪುರ ಮಾರ್ಗ ಮಧ್ಯದಲ್ಲಿನ ಸಿಂದಗಿ ಪಟ್ಟಣದ ಬಸ್ ನಿಲ್ದಾಣದ ಎದುರಿನಲ್ಲಿದೆ ಈ ಹೋಟೆಲ್. ಈ ಹೋಟೆಲ್‌ಗೆ ಯಾವುದೇ ನಾಮಫಲಕ ಅಳವಡಿಸದಿದ್ದರೂ; ಗ್ರಾಹಕರು ಹುಡುಕಿಕೊಂಡು ಬರುವುದು ವಿಶೇಷ.

ಸಿಂದಗಿಯಲ್ಲಿ ಲೋಣಿ ಹೋಟೆಲ್ ಜಗಜ್ಜಾಹೀರು. ಸ್ಥಳ ವಿಳಾಸ ಹೇಳುವವರು, ಕಾಯಲು ನಿಲ್ಲುವಂತೆ ಸೂಚಿಸುವವರು ಸಹ ಇದೇ ಹೋಟೆಲ್‌ ಸೂಚಿಸುತ್ತಾರೆ. ಇಲ್ಲಿನ ಪೂರಿ–ಪಿಟ್ಲಾ ತಿನ್ನದವರೇ ಇಲ್ಲ. ಲೋಣಿ ಪೂರಿ ಹೋಟೆಲ್‌ ಎಲ್ಲಿದೆ ? ಎಂದು ಹುಡುಕಾಡಿ ಉಪಾಹಾರ ಮಾಡುವವರು ಇದ್ದಾರೆ.

ADVERTISEMENT

ಲೋಣಿ ಕುಟುಂಬ 59 ಜನರನ್ನೊಳಗೊಂಡ ಈ ಭಾಗದ ಏಕಮೇವ ಅವಿಭಕ್ತ ಕುಟುಂಬ. 1991ರಲ್ಲಿ ಚಿಕ್ಕ ಪತ್ರಾಸ್ ಶೆಡ್‌ನಲ್ಲಿ ಹೋಟೆಲ್ ಆರಂಭಿಸಿದರು. ಒಂದಿಬ್ಬರನ್ನು ಬಿಟ್ಟರೆ ಹೋಟೆಲ್‌ನಲ್ಲಿ ಕೆಲಸ ಮಾಡುವವರೆಲ್ಲ ಲೋಣಿ ಮನೆಯವರೇ.

ಇವರು ಉಪಹಾರ ಸಿದ್ಧತೆಗೂ ಸೈ... ಟೇಬಲ್ ಸ್ವಚ್ಛ ಮಾಡುವುದಕ್ಕೂ ಸೈ... ಈ ಕುಟುಂಬದ ಮೊಮ್ಮಗ ವಿಶ್ವರಾಧ್ಯ ಇದೇ ಹೋಟೆಲ್‌ನಲ್ಲಿ ಟೇಬಲ್ ಸ್ವಚ್ಛಗೊಳಿಸಿ, ರಾತ್ರಿ ವೇಳೆ ಅದೇ ಟೇಬಲ್ ಮೇಲೆ ಓದಿ, ಅದರ ಮೇಲೇಯೇ ಮಲಗಿ ಇದೀಗ ವೈದ್ಯರಾಗಿ ಹೆಸರು ಗಳಿಸಿದ್ದಾರೆ.

27 ವರ್ಷಗಳ ಹಿಂದೆ ಆರಂಭಗೊಂಡ ಪೂರಿ-ಪಿಟ್ಲಾ ಉಪಾಹಾರ ಇಂದಿಗೂ ಅದೇ ಗುಣಮಟ್ಟ, ರುಚಿ–ಶುಚಿ ಉಳಿಸಿಕೊಂಡು ಬಂದಿದೆ. ಮುಂಜಾನೆ 7ಕ್ಕೆ ಪೂರಿ ಪೂರೈಕೆ ಶುರುವಾದರೆ, 11 ಗಂಟೆಯೊಳಗೆ ಖಾಲಿ. ಪೂರಿ–ಪಿಟ್ಲಾ ಖಾಲಿಯಾಗಿದ್ದಕ್ಕೆ ಮರಳಿ ಹೋದವರಿಗೆ ಲೆಕ್ಕವಿಲ್ಲ.

ಜೇವರ್ಗಿ, ಅಫಜಲಪುರ, ವಿಜಯಪುರ, ಯಾದಗಿರಿ, ಶಹಾಪುರ, ಕೆಂಭಾವಿ, ದುಧನಿ (ಮಹಾರಾಷ್ಟ್ರ), ಇಂಡಿ... ಹೀಗೆ ಹೊರ ಜಿಲ್ಲೆ, ತಾಲ್ಲೂಕುಗಳಿಂದ ಸಿಂದಗಿಗೆ ಬಂದು, ಪೂರಿ-ಪಿಟ್ಲಾ ತಿಂದು ಹೋಗುವವರು ಇದ್ದಾರೆ. ಇದು ಐಶಾರಾಮಿ ಹೋಟೆಲ್‌ ಅಲ್ಲ. ತಗಡಿನ ಹೋಟೆಲ್‌. ಒಳಗೆ ಕೂರಲು ಕಷ್ಟವಾದರೂ ಪೂರಿ–ಪಿಟ್ಲಾ ಸವಿಯದವರಿಲ್ಲ.

ಖಾಲಿಯಾದರೂ ಬೇಕು ಎಂದು ಹಠ ಹಿಡಿದು ಮಾಡಿಸಿಕೊಂಡು ತಿಂದು ಹೋಗುವವರು ಇದ್ದಾರೆ. ಮದುವೆಗೆ ಹೋಗುವ ಅಸಂಖ್ಯಾತ ಮಹಿಳೆಯರು ಇಲ್ಲಿಯೇ ಪೂರಿ–ಪಿಟ್ಲಾ ನಾಷ್ಟಾ ಮಾಡುವುದು ವಿಶೇಷ.

ಪೂರಿ–ಪಿಟ್ಲಾ ಬೆಳಗಿನ ಉಪಾಹಾರ. ಮಸಾಲ ಶೇಂಗಾ ಸಂಜೆ ಉಪಾಹಾರ. ನಿತ್ಯ ಐದು ಕೆ.ಜಿ. ಮಸಾಲ ಶೇಂಗಾ ಖಾಲಿಯಾಗುತ್ತದೆ. ಇಂಡಿ ಪಟ್ಟಣದಲ್ಲಿನ ಜನರು ಇಲ್ಲಿಯ ಮಸಾಲ ಶೇಂಗಾವನ್ನು ಬಸ್‌ನಿಂದ ತರಿಸಿಕೊಂಡು ತಿನ್ನುತ್ತಾರೆ ಎಂದು ಇಂಡಿ ಪಟ್ಟಣದ ಜಗದೀಶ ಕ್ಷತ್ರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.