ADVERTISEMENT

ವಿಜಯಪುರ: ಶಿವನಾಮ ಸ್ಮರಣೆ, ಜಾಗರಣೆ, ಆರಾಧಾನೆ

ವಿಜಯಪುರ ನಗರ, ಜಿಲ್ಲೆಯಾದ್ಯಂತ ಮಹಾ ಶಿವರಾತ್ರಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2021, 14:07 IST
Last Updated 11 ಮಾರ್ಚ್ 2021, 14:07 IST
ವಿಜಯಪುರದ ಲಿಂಗದ ಗುಡಿಯಲ್ಲಿ ಮಹಾಶಿವರಾತ್ರಿ ಅಂಗವಾಗಿ ಭಕ್ತರು ಲಿಂಗದರ್ಶನ ಪಡೆದರು–ಪ್ರಜಾವಾಣಿ ಚಿತ್ರ
ವಿಜಯಪುರದ ಲಿಂಗದ ಗುಡಿಯಲ್ಲಿ ಮಹಾಶಿವರಾತ್ರಿ ಅಂಗವಾಗಿ ಭಕ್ತರು ಲಿಂಗದರ್ಶನ ಪಡೆದರು–ಪ್ರಜಾವಾಣಿ ಚಿತ್ರ   

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಗುರುವಾರ ಮಹಾ ಶಿವರಾತ್ರಿ ಹಬ್ಬವನ್ನು ಜಾಗರಣೆ, ಉಪವಾಸ, ಭಜನೆ, ಶಿವನಾಮ ಸ್ಮರಣೆಯೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು.

ವಿಜಯಪುರ ನಗರದ 770 ಲಿಂಗದ ಗುಡಿ, ಸಿದ್ದೇಶ್ವರ ದೇವಸ್ಥಾನ, ಶಿವಗಿರಿ, ಮಲ್ಲಿಕಾರ್ಜುನ ದೇವಸ್ಥಾನ, ಅಡವಿ ಶಂಕರಲಿಂಗ ದೇವಸ್ಥಾನ, ಐತಿಹಾಸಿಕ ಸುಂದರೇಶ್ವರ ದೇವಾಲಯ, ಚಿದಂಬರೇಶ್ವರ ದೇವಾಲಯ ಸೇರಿದಂತೆ ಜಿಲ್ಲೆಯ ಪ್ರಮುಖಶಿವಾಲಯಗಳಲ್ಲಿ ಇಡೀ ದಿನ ಶಿವನಾಮ ಸ್ಮರಣೆ, ಅಖಂಡ ಭಜನೆ ನಡೆಯಿತು.

ವಿಶೇಷ ಪೂಜೆ, ರುದ್ರಾಭಿಷೇಕ, ಸಹಸ್ರ ನಾಮಾರ್ಚನೆ, ಬಿಲ್ವಾರ್ಚನೆ ನಡೆದವು. ದೇವಾಲಯಗಳನ್ನು ತೋರಣದಿಂದ ಸಿಂಗರಿಸಿ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು. ದೇವಸ್ಥಾನಗಳ ಎದುರು ಭಕ್ತರ ಸರದಿಯಲ್ಲಿ ನಿಂತು ಶಿವನ ದರ್ಶನ ಪಡೆದು ಪುನೀತರಾದರು. ಬಿಸಿಲಿನ ಝಲ ಅಧಿಕವಿದ್ದ ಕಾರಣ ಬಹುತೇಕ ಶಿವಾಲಯಗಳ ಎದುರು ಪೆಂಡಾಲ್‌ ಹಾಕಿ ನೆರಳಿನ ವ್ಯವಸ್ಥೆ ಕಲ್ಪಿಸಲಾಗಿತ್ತು.

ADVERTISEMENT

ನಗರದ ಹೊರವಲಯದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ಶಿವಗಿರಿಗೆಭಕ್ತ ಸಾಗರವೇ ಹರಿದು ಬಂದಿತು. ದೇವಾಲಯದ ಆವರಣದಲ್ಲಿ ಜಾತ್ರೆಯ ವಾತಾವರಣ ಕಂಡುಬಂದಿತು. ಪ್ರಜಾಪಿತ ಈಶ್ವರೀಯ ವಿದ್ಯಾಲಯದಲ್ಲೂ ಶಿವನ ಆರಾಧನೆ ನಡೆಯಿತು. ವಿಜಯಪುರ ತಾಲ್ಲೂಕಿನ ಉಕ್ಕಲಿಯ ಕಲ್ಮೇಶ್ವರ ದೇವಸ್ಥಾನದಲ್ಲೂ ಶಿವರಾತ್ರಿ ಭಕ್ತಿ ಭಾವದಿಂದ ಆಚರಿಸಲಾಯಿತು.

ಮನೆ, ಮನೆಗಳಲ್ಲೂ ಶಿವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ನಗರ ಸೇರಿದಂತೆ ಬಹುತೇಕ ಅಂಚೆ ಕಚೇರಿಯಲ್ಲಿ ವ್ಯವಸ್ಥೆ ಮಾಡಲಾಗಿದ್ದ ‘ಗಂಗಾಜಲ’ವನ್ನು ಭಕ್ತರು ಖರೀದಿಸಿ, ಮನೆಗಳಲ್ಲಿ ಪೂಜೆ ಸಲ್ಲಿಸಿ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.