ಚಡಚಣ (ವಿಜಯಪುರ):ಭೀಮಾ ತೀರದ ರೌಡಿಶೀಟರ್ ಧರ್ಮರಾಜ ಚಡಚಣನ ನಕಲಿ ಎನ್‌ಕೌಂಟರ್, ಗಂಗಾಧರ ಚಡಚಣನ ನಿಗೂಢ ಹತ್ಯೆ ಪ್ರಕರಣದ ಪ್ರಮುಖ ಆರೋಪಿ, ಕಾಂಗ್ರೆಸ್ ಮುಖಂಡ ಮಹಾದೇವ ಭೈರಗೊಂಡ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿ, ಕೆರೂರಿಗೆ ಬರುತ್ತಿದ್ದಂತೆ ಶುಕ್ರವಾರ ಅಭಿಮಾನಿಗಳು, ಬೆಂಬಲಿಗರು ಸನ್ಮಾನದ ಹೊಳೆಯನ್ನೇ ಹರಿಸಿದರು.
ಬಳ್ಳಾರಿ ಕೇಂದ್ರ ಕಾರಾಗೃಹದಿಂದ ಗುರುವಾರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಭೈರಗೊಂಡ, ವಿಜಯಪುರದ ದರ್ಗಾ ಜೈಲಿನಿಂದ ಅಧಿಕೃತ ಆದೇಶ ಪಡೆದು ರಾತ್ರಿ ಕೆರೂರಿಗೆ ಬಂದಿದ್ದರು. ಈ ಸುದ್ದಿ ತಿಳಿದ ಅಸಂಖ್ಯಾತ ಬೆಂಬಲಿಗರು ನೂರಾರು ವಾಹನಗಳಲ್ಲಿ ಜಮಾಯಿಸಿ, ಸ್ವಾಗತ ಕೋರಿದರು.
ಶುಕ್ರವಾರ ನಸುಕಿನಿಂದಲೇ ಅಪಾರ ಜನರು ಮಹಾದೇವ ಭೇಟಿಗಾಗಿ ಕೆರೂರ ಗ್ರಾಮಕ್ಕೆ ಧಾವಿಸಿದ್ದರು. ಚಡಚಣ ಸೇರಿದಂತೆ ನೆರೆಯ ಮಹಾರಾಷ್ಟ್ರದ ಅಪಾರ ಬೆಂಬಲಿಗರು ಭೈರಗೊಂಡ ಭೇಟಿಯಾಗಿ ಕುಶಲೋಪರಿ ನಡೆಸಿದರು. ಪರಸ್ಪರ ಚರ್ಚಿಸಿದ ದೃಶ್ಯ ಭೈರಗೊಂಡ ಖಡಿ ಮಷಿನ್ ಬಳಿ ಗೋಚರಿಸಿತು. ಜೈಕಾರಗಳು ಮೊಳಗಿದವು.
ಮರಳು ದಂಧೆ ಪ್ರಕರಣದಲ್ಲಿ ಈ ಹಿಂದೆ ಮಹಾದೇವ ಭೈರಗೊಂಡ ಜೈಲು ಪಾಲಾಗಿದ್ದ. ಆಗಲೂ ಜಾಮೀನಿನ ಮೇಲೆ ಬಿಡುಗಡೆಗೊಂಡ ಸಂದರ್ಭ, ಅಭಿಮಾನಿಗಳು, ಬೆಂಬಲಿಗರು ಭೈರಗೊಂಡನಿಗೆ ಕ್ಷೀರಾಭಿಷೇಕ ನಡೆಸಿದ್ದರು.
‘ಭೈರಗೊಂಡ–ಚಡಚಣ ಮನೆತನಗಳ ಹಿರಿಯರ ನಡುವೆ ಹಿಂದೆ ದ್ವೇಷವಿತ್ತು. ಇದನ್ನು ನಾನು ಬೆಳೆಸಿದವನಲ್ಲ. ವಿನಾಃ ಕಾರಣ ಸಹೋದರರ ಹತ್ಯೆ ಪ್ರಕರಣದಲ್ಲಿ ನನ್ನನ್ನು ಆರೋಪಿಯನ್ನಾಗಿಸಲಾಗಿದೆ. ಮುಂದೆಯೂ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ನಾನು ಭಾಗಿಯಾಗಲ್ಲ. ಜೀವಕ್ಕಿಂತ ಹೆಚ್ಚಾಗಿ ಬೆಳೆಸಿರುವ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗಾಗಿ ಶ್ರಮಿಸುವೆ’ ಎಂದು ಮಹಾದೇವ ಭೈರಗೊಂಡ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.