
ಸೋಲಾಪುರ: ಸಾರ್ವಜನಿಕರಿಂದ ದೂರುಳು ಕೇಳಿಬಂದ ಹಿನ್ನೆಲೆ ಇಲ್ಲಿನ ಜನನ– ಮರಣ ನೋಂದಣಿ ಕೇಂದ್ರಕ್ಕೆ ಮಹಾನಗರ ಪಾಲಿಕೆ ಆಯುಕ್ತ ಸಚಿನ ಒಂಬಾಸೆ ಶನಿವಾರ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
‘ಪ್ರತಿಯೊಂದು ಟೇಬಲ್‌ಗೂ ತೆರಳಿ ಕೆಲಸ ಪರಿಶೀಲಿಸಿದರು. ಎಷ್ಟು ಅರ್ಜಿಗಳು ಬಂದಿವೆ? ಎಷ್ಟು ಬಾಕಿ? ಏಕೆ ಬಾಕಿ ಇವೆ ಎಂದು ವಿಚಾರಿಸಿದರು.
‘ಜನನ–ಮರಣ ನೋಂದಣಿ ವಿಭಾಗದಲ್ಲಿ 16 ಸಾವಿರ ಅರ್ಜಿಗಳು ಬಾಕಿ ಉಳಿದಿವೆ. ವಿವಾಹ ನೋಂದಣಿ ವೆಬ್‌ಸೈಟ್ ಕೂಡ ಮುಚ್ಚಲಾಗಿದೆ. ಇದರಿಂದ ಪದೇ ಪದೆ ಕಚೇರಿಗೆ ಓಡಾಡುವಂತಾಗಿದೆ ಎಂದು ಸಾರ್ವಜನಿಕರು ದೂರು ಸಲ್ಲಿಸಿದ್ದಾರೆ. ಅಗತ್ಯ ಬಿದ್ದರೆ ಶನಿವಾರ, ಭಾನುವಾರವೂ ಕೆಲಸ ಮಾಡಿ. ಒಂದು ತಿಂಗಳೊಳಗೆ ಎಲ್ಲಾ ಅರ್ಜಿಗಳ ನಿವಾರಣೆ ಮಾಡಿ. ಅನಗತ್ಯವಾಗಿ ಅರ್ಜಿಗಳನ್ನು ಬಾಕಿ ಉಳಿಸಿದರೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
‘ಮದುವೆ ನೋಂದಣಿ ವೆಬ್‌ಸೈಟ್ ನವೆಂಬರ್ 2ರಿಂದ ಮುಚ್ಚಿದೆ. ಇದರಿಂದಾಗಿ ಪ್ರತಿದಿನ ಅಲೆದಾಡುವಂತಾಗಿದೆ. ಜನನ– ಮರಣ ನೋಂದಣಿ ವಿಭಾಗದ ಅಧಿಕಾರಿಗಳು ಸರಿಯಾದ ಮಾಹಿತಿ ನೀಡದೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಏಜೆಂಟರ ಹಾವಳಿ ಹೆಚ್ಚಾಗಿದ್ದು, ಅವರ ಮೂಲಕ ಹೋದರೆ ಮಾತ್ರ ಕೆಲಸಗಳು ಬೇಗ ಆಗುತ್ತಿವೆ’ ಎಂದು ನಾಗರಿಕರಿಂದ ಆರೋಪಗಳು ಕೇಳಿಬಂದ ಹಿನ್ನೆಲೆ ಆಯುಕ್ತರು ಭೇಟಿ ನೀಡಿ ಪರಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.