
ಸಿಂದಗಿ: ಶಾಲಾ ಮಕ್ಕಳಿಗೆ ಕುಡಿಯುವ ನೀರು, ಶಾಲಾ ಕೊಠಡಿಗಳು, ಶಾಲಾ ಕಾಂಪೌಂಡ್ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಶಾಲಾ ಮಕ್ಕಳೊಂದಿಗೆ ಹಂದಿಗನೂರ ಗ್ರಾಮದ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಜಯಕರ್ನಾಟಕ ಸಂಘಟನೆ ಜಿಲ್ಲಾ ವಕ್ತಾರ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಚನ್ನಪ್ಪಗೌಡ ಬಿರಾದಾರ ಮಾತನಾಡಿ, ‘ಶಾಲೆಗೆ ತೀರ ಅಗತ್ಯವಾಗಿರುವ ಬೇಡಿಕೆಗಳ ಈಡೇರಿಕೆಗಾಗಿ ಸಂಬಂಧಿಸಿದ ಇಲಾಖೆಯ ಮೇಲಧಿಕಾರಿಗಳು, ಮತಕ್ಷೇತ್ರದ ಶಾಸಕರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿ ಅವರು ಗ್ರಾಮಕ್ಕೆ ಬಂದಿದ್ದರೂ ಶಾಲಾ ಮಕ್ಕಳ ಸಮಸ್ಯೆಗಳನ್ನು ಆಲಿಸಲು ಶಾಲೆಗೆ ಬಂದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಶಾಲೆಯಲ್ಲಿ ಮಕ್ಕಳಿಗೆ ಕುಡಿಯುವ ನೀರಿನ ಸಮಸ್ಯೆ ಇದೆ. ಶಾಲೆಯಲ್ಲಿ 170 ವಿದ್ಯಾರ್ಥಿಗಳು ದಾಖಲಾತಿ ಹೊಂದಿದ್ದರೂ ಕೇವಲ ಮೂರು ವರ್ಗ ಕೋಣೆಗಳಿವೆ. ಅದರಲ್ಲಿ ಒಂದು ಶಿಥಿಲಾವಸ್ಥೆಯಲ್ಲಿದೆ. ಶಾಲೆಗೆ ರಕ್ಷಣಾ ಗೋಡೆಯೂ ಇಲ್ಲ. ಶೌಚಾಲಯ ವ್ಯವಸ್ಥೆ ಇಲ್ಲ’ ಎಂದು ಅವರು ದೂರಿದರು.
‘ಇದೇ ನಿರ್ಲಕ್ಷ್ಯ ಮುಂದುವರೆದರೆ ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ಳುತ್ತದೆ’ ಎಂದು ಎಚ್ಚರಿಕೆ ನೀಡಿದರು.
ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ ಸಂತೋಷ ಮನಗೂಳಿ ಮಾತನಾಡಿದರು. ಸಂಘಟನೆ ದೇವರಹಿಪ್ಪರಗಿ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ರಾಮಪ್ಪ ಅವಟಿ, ಆಲಮೇಲ ಘಟಕದ ಅಧ್ಯಕ್ಷ ಭೀಮಾಶಂಕರ ಹೇರ್, ಸಿಂದಗಿ ತಾಲ್ಲೂಕು ಘಟಕದ ಕಾರ್ಯಾಧ್ಯಕ್ಷ ರಮೇಶ ರಾಠೋಡ, ಸಿದ್ದನಗೌಡ ಅಂಬಳನೂರ, ನಾಗಪ್ಪ ಹೇರ, ಮಶ್ಯಾಕ ವಾಲಿಕಾರ, ಅಶೋಕ ಪಾಟೀಲ, ಚಟ್ಟರಕಿ ಗ್ರಾಮ ಘಟಕದ ಅಬ್ದುಲ್ ಖೇಡ, ಮುಸ್ತಾಕ ಬಳಗಾನೂರ, ಜಟ್ಟೆಪ್ಪ ನಾಟೀಕಾರ, ಸುಭಾಸ ಚಟ್ಟರಕಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಶಿಕ್ಷಣ ಇಲಾಖೆಯ ಅಧಿಕಾರಿ ಎಂ.ಪಿ.ಬಿಸೆ, ಸಂಜೀವ ರಾಠೋಡ ಸ್ಥಳಕ್ಕೆ ಬಂದು ಒಂದು ವಾರದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ನೀಡುವ ಲಿಖಿತ ಭರವಸೆ ನೀಡಿದರು.
ಜಯ ಕರ್ನಾಟಕ ಸಂಘಟನೆಯ ಪ್ರಮುಖರು ಶಾಲಾ ಆವರಣದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳದಂತೆ ಶಾಲಾ ಮುಖ್ಯಶಿಕ್ಷಕರು ಎಚ್ಚರಿಸಿದರೂ ಮಕ್ಕಳ ಬಳಕೆ ಮಾಡಿಕೊಂಡಿರುವುದು ಸಲ್ಲದು ಎಂದು ಬಿಇಒ ಮಹಾಂತೇಶ ಯಡ್ರಾಮಿ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.