ವಿಜಯಪುರ: ಅತಿ ಎತ್ತರದ ಪ್ರದೇಶವಾಗಿರುವ ಇಟ್ಟಂಗಿಹಾಳಕ್ಕೆ ನೀರು ಹರಿಸುವುದು ಕಷ್ಟಕರ ಹಾಗೂ ಕಷ್ಟವಾಗಿರುವುದನ್ನು ಛಲದಿಂದ ಮಾಡಿದ್ದೇನೆ. ಕೆರೆ ತುಂಬಿಸಿರುವುದು ಸಂತಸ ತಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.
ಜಲಸಂಪನ್ಮೂಲ ಇಲಾಖೆಯಿಂದ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ವ್ಯಾಪ್ತಿಯಲ್ಲಿ ಬರುವ ಇಟ್ಟಂಗಿಹಾಳ ಕೆರೆಗೆ ಶನಿವಾರ ಗಂಗಾಪೂಜೆ ಹಾಗೂ ಬಾಗಿನ ಅರ್ಪಣೆ ಮಾಡಿ ಅವರು ಮಾತನಾಡಿದರು.
ಅತಿ ಎತ್ತರದ ಪ್ರದೇಶವಾದ ಇಟ್ಟಂಗಿಹಾಳ ಹಾಗೂ ಜಾಲಗೇರಿ ಕೆರೆಗಳಿಗೆ ನೀರು ಬರುವುದು ಅತ್ಯಂತ ಕಷ್ಟಕರವಾಗಿತ್ತು. ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯಿಂದ ಇಟ್ಟಂಗಿಹಾಳ ಕೆರೆ ತುಂಬಿಸಲು ಯೋಜನೆ ರೂಪಿಸಿಕೊಂಡು, ಕಷ್ಟಕರವಾದ ಈ ಕಾರ್ಯವನ್ನು 5 ಮೋಟರ್‌ಗಳನ್ನು ಬಳಸಿ, ನೀರನ್ನು ಹರಿಸಿ ಇಟ್ಟಂಗಿಹಾಳ ಕೆರೆಯನ್ನು ತುಂಬಿಸಲಾಗಿದೆ ಎಂದರು.
ಕಳೆದ 20 ವರ್ಷಗಳ ಹಿಂದೆ ನಾನು ನಿರ್ಮಿಸಿದ ಕೆರೆಗೆ ಇಂದು ಬಾಗಿನ ಅರ್ಪಿಸಿದ್ದು ಅತ್ಯಂತ ಸಂತಸ ತಂದಿದ್ದು, ಈ ಭಾಗದ ಅಂತರ್ಜಲಮಟ್ಟ ಹೆಚ್ಚಾಗಿ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಈ ಭಾಗದಲ್ಲಿ ಕೆರೆಗಳಿಗಿಂತಲೂ ಹೆಚ್ಚು ವಿಸ್ತೀರ್ಣ ಹೊಂದಿದ 120 ಬಾಂದಾರಗಳನ್ನು ತುಂಬಿಸಲಾಗಿದೆ. ಇಟ್ಟಂಗಿಹಾಳ ಕೆರೆಯ ಪಕ್ಕದಲ್ಲಿರುವ 60 ಎಕರೆ ಸರ್ಕಾರಿ ಜಮೀನು ಬಳಸಿಕೊಂಡು, ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಿ ಇನ್ನಷ್ಟು ಅಭಿವೃದ್ದಿಪಡಿಸಿ ಇಟ್ಟಂಗಿಹಾಳ ಕೆರೆ ವಿಸ್ತೀರ್ಣ ದ್ವಿಗುಣಗೊಳಿಸಿ, ನೀರಿನ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು ಎಂದು ಹೇಳಿದರು.
ತಿಕೋಟಾ ತಾಲ್ಲೂಕಿನ ಸಣ್ಣ ನೀರಾವರಿ ವ್ಯಾಪ್ತಿಯಲ್ಲಿ ಬರುವ 21, ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 7, ಗ್ರಾಮ ಪಂಚಾಯಿತಿ ವ್ಯಾಪ್ತಿಯ 2 ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 2 ಕೆರೆಗಳು ಸೇರಿದಂತೆ ಒಟ್ಟು 32 ಕೆರೆಗಳು ಹಾಗೂ ಬಬಲೇಶ್ವರ ತಾಲ್ಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆಯ 14, ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 11, ಪಟ್ಟಣ ಪಂಚಾಯಿತಿ ವ್ಯಾಪ್ತಿಯ 2 ಸೇರಿದಂತೆ ಒಟ್ಟು 27 ಕೆರೆಗಳನ್ನು ತುಂಬಿಸಲಾಗಿದ್ದು, ಈ ಭಾಗದಲ್ಲಿ ಅಂತರ್ಜಲಮಟ್ಟ ಹೆಚ್ಚಿಸಿ ಮಾದರಿ ಜಿಲ್ಲೆಯನ್ನಾಗಿ ರೂಪಿಸಲಾಗುವುದು ಎಂದು ಅವರು ಹೇಳಿದರು.
ಜಿಲ್ಲೆಯ ರೈತರ ಬಾಳನ್ನು ಬೆಳಗಿಸುವ ಕನಸಿನ ಯೋಜನೆಯ ಸಾಕಾರಕ್ಕಾಗಿ ಕ್ರಿಯಾಯೋಜನೆ ಸಿದ್ಧಪಡಿಸಲಾಗುತ್ತಿದೆ. ಜಿಲ್ಲೆಯ ಕೆನಾಲ್ ನೆಟವರ್ಕ್‍ಗಳಲ್ಲಿ ಕಾಲುವೆ ಜಾಲಗಳ 165 ಹಳ್ಳಗಳಿಗೆ ಚೆಕ್‍ಡ್ಯಾಂ ನಿರ್ಮಾಣ ಮಾಡಿ ನೀರು ಇಂಗಿಸುವ ಮೂಲಕ ಅಂತರ್ಜಲಮಟ್ಟ ಹೆಚ್ಚಿಸಿ ನೀರಾವರಿಗೊಳಪಡಿಸಿ ರೈತರಿಗೆ ಅನುಕೂಲ ಕಲ್ಪಿಸುವ ಮೂಲಕ ಬರದ ನಾಡಿನ ಹಣೆಪಟ್ಟಿ ತೆಗೆಯಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು.
ಕರ್ನಾಟಕ ನೀರಾವರಿ ನಿಗಮದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಂಬಣ್ಣ ಹರಳಯ್ಯ, ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿಜಯ ವಸ್ತ್ರದ, ತಿಕೋಟಾ ತಹಶೀಲ್ದಾರ್ ಸುರೇಶ ಚವಲರ, ಮುಖಂಡ ಸೋಮನಾಥ ಬಾಗಲಕೊಟೆ, ಭೀಮಸಿಂಗ ಮಹಾರಾಜ್, ಸಿದ್ದು ಗೌಡನವರ, ಡಿ.ಆರ್.ನಿಡೋಣಿ, ರಾಜುಗೌಡ ಬಿರಾದಾರ, ಬಾಬು ಗುಲಗಂಜಿ, ಹಣಮಂತ ಮುಚ್ಚಂಡಿ, ಬಿ.ಟಿ.ರಾಠೋಡ ಇದ್ದರು.
ನೀರಾವರಿ ಸಚಿವನಾಗಿದ್ದಾಗ ತಿಕೋಟಾ ಹೋಬಳಿವೊಂದಕ್ಕೆ ₹600 ಕೋಟಿ ಅನುದಾನವನ್ನು ನೀರಾವರಿ ಯೋಜನೆಗಳಿಗೆ ಒದಗಿಸಲಾಗಿದೆ. ತಿಡಗುಂದಿ ಅಕ್ವಾಡೆಕ್ಟ್ ಮೂಲಕ ಕೃಷ್ಣಾ ನೀರನ್ನು ಭೀಮಾ ಒಡಲಿಗೆ ತರಲಾಗಿದೆ.– ಎಂ.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.