
ವಿಜಯಪುರ: ‘ಹಂಚನಾಳ ಸಮೀಪದ ಕೆರೆಗೆ ನಗರದ ಒಳಚರಂಡಿಯಿಂದ ಸೇರುತ್ತಿರುವ ಕಲುಷಿತ ನೀರಿನಿಂದ ಸುತ್ತಮುತ್ತಲಿನ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆ ಭಾಗದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಸೂಚಿಸಿದರು.
ಸೋಮವಾರ ನಗರಾಭಿವೃದ್ಧಿ ಪ್ರಾಧಿಕಾರ ಸಭಾಂಗಣದಲ್ಲಿ 2026-27ನೇ ಸಾಲಿನ ಅಂದಾಜು ಆಯವ್ಯಯ ಹಾಗೂ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಹಂಚನಾಳ ಸುತ್ತಮುತ್ತಲಿನ ಬೋರ್‌ವೆಲ್‌ಗಳಲ್ಲಿ ದುರ್ವಾಸನೆಯ ನೀರು ಬರುತ್ತಿರುವ ಬಗ್ಗೆ ಹಲವು ಬಾರಿ ಗಮನಕ್ಕೆ ತಂದರೂ ಸಮರ್ಪಕ ಕ್ರಮವಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಂಚನಾಳ ಕೆರೆಯ ಪುನರುಜ್ಜೀವನ ಹಾಗೂ ಸೌಂದರ್ಯಿಕರಣ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆ, ನಗರದ ಒಳಚರಂಡಿ ಸಂಸ್ಕರಣಾ ಘಟಕವನ್ನು (ಎಸ್‌ಟಿಪಿ) ಉನ್ನತೀಕರಿಸಿ ಸಂಸ್ಕರಿಸಿದ ನೀರನ್ನೇ ಕೆರೆಗೆ ಹರಿಸಲು ಮಹಾನಗರ ಪಾಲಿಕೆ ಆಯುಕ್ತರಿಗೆ ನಿರ್ದೇಶನ ನೀಡಿದರು.
2026-27ನೇ ಸಾಲಿನಲ್ಲಿ ಪ್ರಾಧಿಕಾರವು ₹5,757.98 ಲಕ್ಷ ಆದಾಯ ನಿರೀಕ್ಷಿಸಿದ್ದು, ಹಿಂದಿನ ಸಾಲಿನ ಉಳಿಕೆ ಸೇರಿದಂತೆ ಒಟ್ಟು ₹8,714.50 ಲಕ್ಷ ವೆಚ್ಚ ನಿರೀಕ್ಷಿಸಲಾಗಿದೆ. ನಗರದಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು. ಈಗಾಗಲೇ ಅಭಿವೃದ್ಧಿಪಡಿಸಿದ ಬಡಾವಣೆಗಳಿಗೆ ಸಾರ್ವಜನಿಕರು ಬಳಕೆ ಮಾಡುತ್ತಿರುವ ಹೆಸರನ್ನೇ ಮುಂದುವರಿಸಲು ಹೇಳಿದರು.
ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ‘ಕೋಟೆಗೋಡೆ ಸುತ್ತಲಿನ ಕಂದಕಗಳ ರಾಜಕಾಲುವೆ ಹೂಳೆತ್ತುವ ಕಾಮಗಾರಿ ಬೇಸಿಗೆಯಲ್ಲೇ ಪೂರ್ಣಗೊಳಿಸಬೇಕು. ಕಂದಕಗಳನ್ನು ಸ್ವಚ್ಛಗೊಳಿಸಿದರೆ ಸಾರ್ವಜನಿಕರಿಗೆ ವಾಯುವಿಹಾರಕ್ಕೆ ಅನುಕೂಲವಾಗುತ್ತದೆ’ ಎಂದರು.
ಜಿಲ್ಲಾಧಿಕಾರಿ ಡಾ. ಆನಂದ ಕೆ. ಕಾಮಗಾರಿಗಳ ಪರಿಶೀಲನೆ ನಡೆಸಿ ತ್ವರಿತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷಣ ನಿಂಬರಗಿ ಸಂಚಾರಿ ವ್ಯವಸ್ಥೆ ಸುಧಾರಣೆ ಕುರಿತು ಮಾಹಿತಿ ನೀಡಿದರು. ಪ್ರಾಧಿಕಾರ ಆಯುಕ್ತ ರಾಜಶೇಖರ ಡಂಬಳ, ಐಟಿಎಂಇಎಸ್ ಮತ್ತು ಐಒಎಜೆಐ ಕಾಮಗಾರಿಗಳ ಪ್ರಗತಿ ವಿವರಿಸಿದರು.
ಶಾಸಕ ವಿಠ್ಠಲ ಕಟಕಧೋಂಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ ಗಂಗಾಧರ ಸಂಬಣ್ಣಿ, ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಮಹಾದೇವ ರಾಠೋಡ, ಸಂತೋಷ ಪವಾರ, ಸಲೀಮ ಪೀರಜಾದೆ, ಪಾಲಿಕೆ ಹಾಗೂ ಪ್ರಾಧಿಕಾರದ ಅಧಿಕಾರಿಗಳು ಇದ್ದರು.