ADVERTISEMENT

ಎಂ.ಬಿ.ಪಾಟೀಲರ ಕಂಚಿನ ಪ್ರತಿಮೆ ಅನಾವರಣ ಮಾ.17ಕ್ಕೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2023, 12:43 IST
Last Updated 15 ಮಾರ್ಚ್ 2023, 12:43 IST
ಬಬಲೇಶ್ವರ ತಾಲ್ಲೂಕಿನ ಸಂಗಾಪುರ ಎಸ್. ಎಚ್. ಗ್ರಾಮದಲ್ಲಿ ಪ್ರತಿಷ್ಠಾಪನೆಗೆ ಸಿದ್ಧವಾಗಿರುವ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರ ಕಂಚಿನ ಪ್ರತಿಮೆ 
ಬಬಲೇಶ್ವರ ತಾಲ್ಲೂಕಿನ ಸಂಗಾಪುರ ಎಸ್. ಎಚ್. ಗ್ರಾಮದಲ್ಲಿ ಪ್ರತಿಷ್ಠಾಪನೆಗೆ ಸಿದ್ಧವಾಗಿರುವ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರ ಕಂಚಿನ ಪ್ರತಿಮೆ    

ವಿಜಯಪುರ: ಬಬಲೇಶ್ವರ ತಾಲ್ಲೂಕಿನ ಸಂಗಾಪುರ ಎಸ್. ಎಚ್. ಗ್ರಾಮದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮ ಮಾ.17 ರಂದು ನಡೆಯಲಿದೆ.

ಬರದ ಬೀಡಾಗಿದ್ದ ಸಂಗಾಪುರ ಎಸ್. ಎಚ್. ಗ್ರಾಮಕ್ಕೆ ಎಂ. ಬಿ. ಪಾಟೀಲರು ಜಲಸಂಪನ್ಮೂಲ ಸಚಿವರಾಗಿ ಮಾಡಿರುವ ನೀರಾವರಿ ಕೆಲಸಗಳಿಂದ ಈಗ ಸಮೃದ್ಧಿಯ ನಾಡಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮದ ರೈತರು, ಕೂಲಿಕಾರ್ಮಿಕರು ಸೇರಿದಂತೆ ಪಕ್ಷಾತೀತವಾಗಿ 300ಕ್ಕೂ ಹೆಚ್ಚು ಜನ ಸ್ವಯಂ ಪ್ರೇರಿತರಾಗಿ ₹18 ಲಕ್ಷ ದೇಣಿಗೆ ಸಂಗ್ರಹಿಸಿ, ಕಂಚಿನ ಪುತ್ಥಳಿ ನಿರ್ಮಿಸಿದ್ದೇವೆ ಎಂದು ಗ್ರಾಮದ ಮುಖಂಡರಾದ ರಮೇಶ ಬಡ್ರಿ, ಮಲ್ಲು ದಳವಾಯಿ, ಬಸವರಾಜ ಬಡ್ರಿ, ಈರಪ್ಪ ಚೀರಲದಿನ್ನಿ ಸಂಗಪ್ಪ ಗಿರಗಾವಿ, ರಮೇಶ ಬರಗಿ ತಿಳಿಸಿದ್ದಾರೆ.

ರಾಜಸ್ಥಾನದ ಜೈಪುರದ ಕಲಾವಿದ ರಾಜಕುಮಾರ ಪಂಡಿತ್‌ ಅವರು ಮೂರು ತಿಂಗಳಲ್ಲಿ ಈ ಮೂರ್ತಿಯನ್ನು ತಯಾರು ಮಾಡಿದ್ದಾರೆ. ಪಾಟೀಲರ ಕಂಚಿನ ಪುತ್ಥಳಿಯನ್ನು ಗ್ರಾಮದ ಬಸ್ ನಿಲ್ದಾಣದ ಹತ್ತಿರ ಪ್ರತಿಷ್ಠಾಪಿಸುತ್ತಿದ್ದೇವೆ ಎಂದಿದ್ದಾರೆ.

ADVERTISEMENT

ಮಾ.17 ರಂದು ಸಂಜೆ 4 ಗಂಟೆಗೆ ಈ ಮೂರ್ತಿ ಲೋಕಾರ್ಪಣೆ ನಡೆಯಲಿದ್ದು, ಈ ಕಾರ್ಯಕ್ರಮನ್ನು ಹರಿಹರ ತಾಲ್ಲೂಕಿನ ಎರೆ ಹೊಸಹಳ್ಳಿ ಮಹಾಯೋಗಿ ವೇಮನ ಸಂಸ್ಥಾನಮಠ ರೆಡ್ಡಿಗುರು ಪೀಠದ ವೇಮನಾನಂದ ಸ್ವಾಮೀಜಿ ಉದ್ಘಾಟಿಸಲಿದ್ದಾರೆ.

ಆಲಗೂರ- ಜಮಖಂಡಿ ಲಿಂಗಾಯಿತ ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ಡಾ. ಮಹಾದೇವ ಶಿವಾಚಾರ್ಯರು, ಬಿದರಿ ಕಲ್ಮಠದ ಶಿವಲಿಂಗೇಶ್ವರ ಮಹಾಸ್ವಾಮಿಗಳು, ಸಂಗಾಪುರ ಎಸ್. ಎಚ್. ನಯಾನಗರದ ಅಭಿನವ ಸಿದ್ದಲಿಂಗ ಮಹಾಸ್ವಾಮಿಗಳು, ಮಮದಾಪುರ ವಿರಕ್ತಮಠದ ಅಭಿನವ ಮುರುಘೇಂದ್ರ ಮಹಾಸ್ವಾಮಿಗಳು ಪಾಲ್ಗೊಳ್ಳಲಿದ್ದಾರೆ.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ, ಆಶಾ ಎಂ. ಪಾಟೀಲ, ವಿಧಾನ ಪರಿಷತ್‌ ಸದಸ್ಯ ಸುನೀಲಗೌಡ ಪಾಟೀಲ, ರೇಣುಕಾ ಎಸ್. ಪಾಟೀಲ, ಬಿ.ಎಲ್.ಡಿ.ಇ ಸಂಸ್ಥೆಯ ನಿರ್ದೇಶಕ ಬಸನಗೌಡ(ರಾಹುಲ್) ಎಂ. ಪಾಟೀಲ ಉಪಸ್ಥಿತರಿರಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.