ADVERTISEMENT

ವೈದ್ಯಕೀಯ ಕಾಲೇಜು: ಲಪೂಟ ಯಾರು? - ಯತ್ನಾಳ ವಿರುದ್ಧ ಗಣಿಹಾರ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 6:19 IST
Last Updated 11 ಡಿಸೆಂಬರ್ 2025, 6:19 IST
ಎಸ್‌.ಎಂ.ಪಾಟೀಲ ಗಣಿಹಾರ
ಎಸ್‌.ಎಂ.ಪಾಟೀಲ ಗಣಿಹಾರ   

ವಿಜಯಪುರ: ‘ಸರ್ಕಾರಿ ವೈದ್ಯಕೀಯ ಕಾಲೇಜಿಗಾಗಿ ಹೋರಾಟ ನಡೆಸುತ್ತಿರುವವರು ಲಪೂಟರೋ ಅಥವಾ ಪಿಪಿಪಿ ಮೆಡಿಕಲ್‌ ಕಾಲೇಜನ್ನು ಲಪಟಾಯಿಸಲು ಯತ್ನಿಸುತ್ತಿರುವರು ಲಪೂಟರೋ’ ಎಂದು ಕೆಪಿಪಿಸಿ ವಕ್ತಾರ ಎಸ್‌.ಎಂ.ಪಾಟೀಲ ಗಣಿಹಾರ ಅವರು ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರಿ ವೈದ್ಯಕೀಯ ಕಾಲೇಜಿಗಾಗಿ ಇಡೀ ಜಿಲ್ಲೆಯ ಜನರು, ಸ್ವಾಮೀಜಿಗಳು, ಪ್ರಗತಿಪರರು, ದಲಿತರು, ಹಿಂದುಳಿದವರು, ವಿದ್ಯಾರ್ಥಿಗಳು, ರೈತರು, ಕಾರ್ಮಿಕರು,  ಪಕ್ಷಾತೀತವಾಗಿ, ಜಾತ್ಯತೀತವಾಗಿ ಹೋರಾಟದಲ್ಲಿ ತೊಡಗಿದ್ದಾರೆ. ಅವರನ್ನು ಒಡಕುಬಾಯಿ ಯತ್ನಾಳ ಲಪೂಟರು, ಪೇಮೆಂಟ್‌ ಗಿರಾಕಿಗಳು ಎಂದಿರುವುದು ಜಿಲ್ಲೆಗೆ ಮಾಡಿದ ಅವಮಾನ. ಯತ್ನಾಳ ತಕ್ಷಣ ಜಿಲ್ಲೆಯ ಜನತೆಯ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದರು.

‘ಪಿಪಿಪಿ ಮೆಡಿಕಲ್‌ ಕಾಲೇಜಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎಂ.ಬಿ.ಪಾಟೀಲರನ್ನು ಓಲೈಸುತ್ತಿರುವ ಯತ್ನಾಳ ನಿಜವಾದ ಲಪೂಟ, ಪೇಮೆಂಟ್‌ ಗಿರಾಕಿ’ ಎಂದು ಆರೋಪಿಸಿದರು.

ADVERTISEMENT

‘ಈ ಹಿಂದೆ ಯತ್ನಾಳ ಹಲವು ಹೋರಾಟ, ಪ್ರತಿಭಟನೆ ನಡೆಸಿದ್ದಾರೆ. ಹಾಗಾದರೆ ಆಗ ಅವರು ಲಪೂಟರಾಗಿದ್ದರಾ? ಪೇಪೆಂಟ್‌ ಗಿರಾಕಿಯಾಗಿದ್ದರಾ?’ ಎಂದು ಪ್ರಶ್ನಿಸಿದರು.  

‘ನಾನು ಜಿಲ್ಲೆಯ ಪರ, ಬಡವರ ಪರ ಎನ್ನುವ ಯತ್ನಾಳಗೆ ನೈತಿಕತೆ ಇದ್ದಿದ್ದರೇ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಧ್ವನಿ ಎತ್ತಬೇಕಿತ್ತು, 84 ದಿನಗಳಿಂದ ನಗರದಲ್ಲಿ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಭೇಟಿ ನೀಡಬೇಕಿತ್ತು’ ಎಂದು ಹೇಳಿದರು.

‘ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟದ ವಿಷಯದಲ್ಲಿ ಸಚಿವ ಎಂ.ಬಿ.ಪಾಟೀಲರನ್ನು ಯತ್ನಾಳ ಎಳೆದು ತಂದಿದ್ದಾರೆ.  ಸಚಿವರ ಜೊತೆ ‍ಪಿಪಿಪಿ ವೈದ್ಯಕೀಯ ಕಾಲೇಜು ಸ್ಥಾಪನೆ ಸಂಬಂಧ ಒಪ್ಪಂದ ಆಗಿದೆಯಾ? ಸಚಿವರು ನಿಮಗೆ ಪಿಪಿಪಿ ಮೆಡಿಕಲ್‌ ಕಾಲೇಜು ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದಾರಾ? ಹಾಗೇನಾದರೂ ಇದ್ದರೆ ಅದನ್ನು ಬಹಿರಂಗಪಡಿಸಿ, ಇಲ್ಲವೇ ನಿಮ್ಮ ಕುತಂತ್ರತನ, ಲಪೂಟತನ ಬಿಡಿ’ ಎಂದರು. 

‘ಸಚಿವರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಪರ ಇರುವುದಾಗಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್‌ ಕೂಡ ಸರ್ಕಾರಿ ವೈದ್ಯಕೀಯ ಕಾಲೇಜು ಪರ ಇರುವುದಾಗಿ  ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಹೇಳಿದ್ದಾರೆ. ಮುಖ್ಯಮಂತ್ರಿ ಬಳಿಗೆ ಕಾಂಗ್ರೆಸ್‌ ನಿಯೋಗ ಕರೆದೊಯ್ದು ಬೇಡಿಕೆ ಸಲ್ಲಿಸುವುದಾಗಿಯೂ ತಿಳಿಸಿದ್ದಾರೆ. ವಿಜಯಪುರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ನೀಡುವ ವಿಷಯದಲ್ಲಿ ಯಾರಿಗೂ ಸಂಶಯಬೇಡ’ ಎಂದರು.  

‘ಸಚಿವ ಶಿವಾನಂದ ಪಾಟೀಲ ಅವರನ್ನು ರಾಜಕೀಯವಾಗಿ ಎದುರಿಸಿ, ಅವರ ವಿರುದ್ಧ ಚುನಾವಣೆಗೆ ನಿಲ್ಲಿ, ನಮ್ಮ ಅಭ್ಯಂತರವಿಲ್ಲ. ಆದರೆ, ಸರ್ಕಾರಿ ವೈದ್ಯಕೀಯ ಕಾಲೇಜಿಗಾಗಿ ಪ್ರಾಮಾಣಿಕವಾಗಿ ಹೋರಾಟ ಮಾಡುತ್ತಿರುವವನ್ನು ಹತಾಷೆಯಿಂದ ಪೇಪೆಂಟ್‌ ಗಿರಾಕಿಗಳು, ಲಪೂಟರು ಎಂಬ ನಿಮ್ಮ ಅವಮಾನಕಾರಿ ಮಾತುಗಳು ಖಂಡನೀಯ. ತಾಕತ್ತಿದ್ದರೇ ನಿಮ್ಮ ಆರೋಪ ಸಾಬೀತು ಮಾಡಿ ತೋರಿಸಿ’ ಎಂದು ಸವಾಲು ಹಾಕಿದರು.

ಕಾಂಗ್ರೆಸ್‌ ಮುಖಂಡರಾದ ಎಂ.ಸಿ.ಮುಲ್ಲಾ, ರವಿ ಬಿರಾದಾರ, ಫಯಾಜ್‌ ಕಲಾದಗಿ, ಅಕ್ರಂ ಮಾಶಾಳಕರ, ಸುರೇಶ ಬಿಜಾಪುರ, ಪತ್ರಕರ್ತ ಅನಿಲ ಹೊಸಮನಿ ಇದ್ದರು.

ಶಾಸಕ ಯತ್ನಾಳ ಮಾತೆತ್ತಿದರೆ ನಾನು ಹಿಂದುಗಳ ಪರ ಎನ್ನುತ್ತಾರೆ. ಹಾಗಾದರೆ ಧರಣಿ ಕೂತವರು ಬೆಂಬಲ ನೀಡಿದ ಕಾವಿಧಾರಿ ಸ್ವಾಮೀಜಿಗಳು ವಿದ್ಯಾರ್ಥಿಗಳು ರೈತರು ಹಿಂದುಗಳಲ್ಲವೇ? 
–ಎಸ್‌.ಎಂ.ಪಾಟೀಲ ಗಣಿಹಾರ, ಕೆಪಿಪಿಸಿ ವಕ್ತಾರ  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.