
ವಿಜಯಪುರ: ‘ಸರ್ಕಾರಿ ವೈದ್ಯಕೀಯ ಕಾಲೇಜಿಗಾಗಿ ಹೋರಾಟ ನಡೆಸುತ್ತಿರುವವರು ಸಚಿವ ಶಿವಾನಂದ ಪಾಟೀಲ ಕೂರಿಸಿದ ಗಿರಾಕಿಗಳು, ಪ್ರತಿದಿನ ಸಂಜೆಯಾಗುತ್ತಲೇ ಅವರ ಮನೆಗೆ ಹೋಗಿ ಪಗಾರ ಎಣಸಿಕೊಳ್ಳುತ್ತಾರೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹೋರಾಟ ನಾಟಕೀಯವಾಗಿದೆ. ಲಪೂಟರು ಬಂದು ಭಾಷಣ ಮಾಡುತ್ತಿದ್ದಾರೆ. ಬೆಂಗಳೂರಿಗೆ ಹೋಗಿದ್ದವರಿಗೆ ಸಿದ್ದರಾಮಯ್ಯ ಬಾಯಿಗೆ ಬಂದಂತೆ ಬೈಯ್ದು ಗೆಟ್ ಔಟ್ ಎಂದು ಕಳುಹಿಸಿದ್ದಾರೆ. ಹೋರಾಟಗಾರರನ್ನು ಶಿವಾನಂದ ಪಾಟೀಲ ಮತ್ತೆ ಕರೆದುಕೊಂಡು ಹೋದರೆ ಸಿದ್ದರಾಮಯ್ಯ ಮತ್ತೆ ಬೈದು ಕಳಿಸುತ್ತಾರೆ’ ಎಂದರು.
‘ಯತ್ನಾಳ, ಎಂ.ಬಿ.ಪಾಟೀಲ ಎಲ್ಲಿಯಾದರೂ ವೈದ್ಯಕೀಯ ಕಾಲೇಜು ತೆಗೆದುಕೊಂಡರೆ ಇಡೀ ಜಿಲ್ಲೆ ಅವರ ಕೈಗೆ ಹೋಗುತ್ತದೆ ಎಂಬ ಭಯ ಶಿವಾನಂದ ಪಾಟೀಲಗೆ ಕಾಡುತ್ತಿದೆ. ಅವರ ಉದ್ದೇಶ ಸರಿಯಿಲ್ಲ’ ಎಂದು ವಾಗ್ದಾಳಿ ನಡೆಸಿದರು.
‘ಶಿವಾನಂದ ಪಾಟೀಲ ಯಾವುದಾದರೂ ಸಂಘ, ಸಂಸ್ಥೆ, ಆಸ್ಪತ್ರೆ, ಕಾಲೇಜು ಕಟ್ಟಿದ್ದಾರಾ? ಅದೇ ಡಿಸಿಸಿ ಬ್ಯಾಂಕ್‌ನಲ್ಲಿ ತಂದೆ, ಮಗಳು, ಮಗ ಬೆಣ್ಣೆ ತಿನ್ನುತ್ತಾ ಕೂತಿದ್ದಾರೆ. ಕಡಿಮೆ ಬಡ್ಡಿ ದರದಲ್ಲಿ ಸರ್ಕಾರ, ನಬಾರ್ಡ್‌ನಿಂದ ಡಿಸಿಸಿ ಬ್ಯಾಂಕಿಗೆ ರೊಕ್ಕ ಬರುತ್ತದೆ. ಸಾಲ ಮನ್ನಾ ಆದಾಗ ತಮ್ಮ ಖಾತೆಯಲ್ಲಿರುವ ಸಾಲ ಮನ್ನಾ ಮಾಡಿಕೊಳ್ಳುತ್ತಾರೆ. ಶೂನ್ಯ ಬಡ್ಡಿ ದರದಲ್ಲಿ ತಾವೇ ಸಾಲ ತೆಗೆದುಕೊಳ್ಳುತ್ತಾರೆ’ ಎಂದು ಆರೋಪಿಸಿದರು.
‘ಸರ್ಕಾರ ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಿದರೆ ನಾನೇಕೆ ₹500 ಕೋಟಿ ಬಂಡವಾಳ ಹೂಡಿಕೆ ಮಾಡಬಾರದು, ನಮ್ಮ ಸಿದ್ದೇಶ್ವರ ಸಂಸ್ಥೆಯಿಂದ ಬಂಡವಾಳ ಹೂಡಿದರೆ ಜಿಲ್ಲೆಯ ಜನತೆಗೆ ಅನುಕೂಲವಾಗಲಿದೆ, ಬಡಮಕ್ಕಳಿಗೆ, ಎಸ್‌ಸಿ, ಎಸ್‌ಟಿ, ಲಿಂಗಾಯತರ ಮೆರಿಟ್ ಇರುವ ಐವರಿಗೆ ನಮ್ಮ ಸಂಸ್ಥೆಯಿಂದ ಪ್ರತಿ ವರ್ಷ ಉಚಿತವಾಗಿ ವೈದ್ಯಕೀಯ ಶಿಕ್ಷಣ ಕಲಿಸುತ್ತೇನೆ’ ಎಂದು ಹೇಳಿದರು.
‘ಸಾವಿರಾರು ಜನರನ್ನು ನೌಕರಿಗೆ ತೆಗೆದುಕೊಳ್ಳುತ್ತೇನೆ. ಪಿಪಿಪಿ ಮಾದರಿಯಲ್ಲೂ ಸರ್ಕಾರದ ನಿಯಮಗಳನ್ನೇ ಅನುಸರಿಸಬೇಕಾಗುತ್ತದೆ. ಉಪನ್ಯಾಸಕರಿಗೆ, ಸಿಬ್ಬಂದಿಗೆ ಎಷ್ಟು ಪಗಾರ ಕೊಡಬೇಕೋ ಅಷ್ಟೇ ಕೊಡಬೇಕಾಗುತ್ತದೆ. ಮೀಸಲಾತಿ ಪಾಲಿಸಲೇಬೇಕಾಗುತ್ತದೆ. ಯಾವುದನ್ನೂ ಬಿಡಲು ಸಾಧ್ಯವಾಗುವುದಿಲ್ಲ’ ಎಂದು ಸಮರ್ಥಿಸಿಕೊಂಡರು.
‘ವಿಜಯಪುರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವಂತೆ ಸದನದಲ್ಲಿ ಮೊದಲು ಪ್ರಶ್ನೆ ಕೇಳಿದವನೇ ನಾನು. ನನ್ನ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಶರಣ ಪ್ರಕಾಶ ಪಾಟೀಲ ಅವರು, ಸರ್ಕಾರದ ಆರ್ಥಿಕ ಪರಿಸ್ಥಿತಿ ಅಷ್ಟು ಸರಿಯಾಗಿಲ್ಲ, ಪಿಪಿಪಿ ಮಾದರಿಯಲ್ಲಿ ಮಾಡುತ್ತೇವೆ, ಯಾರಾದರೂ ಬಂಡವಾಳ ಹೂಡಿಕೆ ಮಾಡಬಹುದು ಎಂದಾಗ ನಾನು ನಮ್ಮ ಲೋಕಕಲ್ಯಾಣ ಟ್ರಸ್ಟ್‌ನಿಂದ ₹500 ಕೋಟಿ ಹೂಡಿಕೆ ಮಾಡುತ್ತೇನೆ, ಇಲ್ಲವಾದರೆ ಬಿಎಲ್‌ಡಿಇ ಸಂಸ್ಥೆಯಿಂದ ಎಂ.ಬಿ.ಪಾಟೀಲ ಅವರು ಹೂಡಿಕೆ ಮಾಡಬಹುದು ಎಂದು ಹೇಳಿದ್ದೆ’ ಎಂದು ಸ್ಪಷ್ಟಪಡಿಸಿದರು.
‘ಸರ್ಕಾರಿ ಆದರೂ ಆಗಲಿ ಅಥವಾ ಪಿಪಿಪಿ ಆದರೂ ಆಗಲಿ, ನಮ್ಮ ಜಿಲ್ಲೆಗೆ ವೈದ್ಯಕೀಯ ಕಾಲೇಜು ಬರಲಿ. ಅದು ನನಗೆ ಸಿಗಬಹುದು ಅಥವಾ ಬೇರೆಯವರಿಗೆ ಸಿಗಬಹುದು, ನನಗೆ ಸಿಗಲಿ, ಬಿಡಲಿ ಲೋಕಕಲ್ಯಾಣ ಟ್ರಸ್ಟ್‌ನಿಂದ ವೈದ್ಯಕೀಯ ಕಾಲೇಜು ಆರಂಭಿಸುತ್ತೇನೆ’ ಎಂದರು.
‘₹ 500 ಕೋಟಿ ನಾನು ಹೂಡಿಕೆ ಮಾಡಲ್ಲ ಎಂದರೆ ಹೋರಾಟ ನಿಲ್ಲಿಸುತ್ತೀರಾ? ನನ್ನ ಹೇಳಿಕೆ ವಾಪಸ್ ತೆಗೆದುಕೊಳ್ಳುತ್ತೇನೆ, ಹೋರಾಟ ನಿಲ್ಲಿಸುತ್ತೀರಾ’ ಎಂದು ಯತ್ನಾಳ ಸವಾಲು ಹಾಕಿದರು.
- ಡಾ.ಸುಧಾಕರ್ ಆರೋಗ್ಯ ಸಚಿವರಾಗಿದ್ದಾಗ ಚಿಕ್ಕಬಳ್ಳಾಪುರದಲ್ಲಿ ವೈದ್ಯಕೀಯ ಕಾಲೇಜು ಮಾಡಿದ್ದಾರೆ. ಶಿವಾನಂದ ಪಾಟೀಲ ಈ ಹಿಂದೆ ಆರೋಗ್ಯ ಸಚಿವರಿದ್ದಾಗ ವಿಜಯಪುರದಲ್ಲಿ ಏಕೆ ವೈದ್ಯಕೀಯ ಕಾಲೇಜು ಮಾಡಲಿಲ್ಲಬಸನಗೌಡ ಪಾಟೀಲ ಯತ್ನಾಳ ಶಾಸಕ
ಶಾಸಕ ಯತ್ನಾಳರ ಅಹಂಕಾರದ ಮಾತುಗಳನ್ನು ಕೇಳುತ್ತಿದ್ದರೆ ವಿನಾಶಕಾಲೇ ವಿಪರೀತ ಬುದ್ಧಿ ಎಂಬಂತಾಗಿದೆ. ತಕ್ಷಣ ತಮ್ಮ ಹೇಳಿಕೆ ಹಿಂಪಡೆಯಬೇಕು ಬೇಷರತ್ ಆಗಿ ಹೋರಾಟಗಾರರ ಕ್ಷಮೆ ಕೇಳಬೇಕುರಾಘವ ಅಣ್ಣಿಗೇರಿ ಹಿಂದೂ ಪರ ಸಂಘಟನೆ ಮುಖಂಡ
ವಿಜಯಪುರ: ‘ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು ಎಂದು ಹೋರಾಟ ಮಾಡುತ್ತಿರುವ ಸ್ವಾಮೀಜಿಗಳು ರಾಷ್ಟ್ರಭಕ್ತರನ್ನು ಅವಮಾನಿಸಿರುವ ಶಾಸಕ ಯತ್ನಾಳ ಬೇಷರತ್ ಕ್ಷಮೆ ಕೇಳಬೇಕು’ ಎಂದು ಹಿಂದೂ ಪರ ಸಂಘಟನೆ ಮುಖಂಡ ರಾಘವ ಅಣ್ಣಿಗೇರಿ ಆಗ್ರಹಿಸಿದ್ದಾರೆ. ‘ಒಂದು ವೇಳೆ ಕ್ಷಮೆ ಕೇಳದೆ ಹೋದರೆ ಸಮಸ್ತ ಜಿಲ್ಲೆಯ ಜನತೆ ಯತ್ನಾಳ ಅವರನ್ನು ಯಾವುದೇ ಸಭೆ ಸಮಾರಂಭಗಳಿಗೆ ಆಹ್ವಾನಿಸದೇ ಇರುವ ತೀರ್ಮಾನವನ್ನು ಕೈಗೊಳ್ಳುವುದು ಸೂಕ್ತ’ ಎಂದು ಹೇಳಿದ್ದಾರೆ.
‘ಮೂರು ತಿಂಗಳಿಂದ ಹಬ್ಬ ಹರಿದಿನ ವೈಯಕ್ತಿಕ ಕೆಲಸ ಕಾರ್ಯಗಳನ್ನು ತೊರೆದು ಜಿಲ್ಲೆಯ ಹಿತ ದೃಷ್ಟಿಯಿಂದ ಬಡ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣಕ್ಕಾಗಿ ಬಡ ರೋಗಿಗಳ ಅನುಕೂಲಕ್ಕಾಗಿ ವಿಜಯಪುರಕ್ಕೆ ಪಿಪಿಪಿ ಮಾದರಿ ವೈದ್ಯಕೀಯ ಕಾಲೇಜು ಬೇಡ ಸರ್ಕಾರಿ ವೈದ್ಯಕೀಯ ಕಾಲೇಜು ಆಗಲೇಬೇಕೆಂದು ನಿರಂತರ ಹೋರಾಟ ನಡೆಸುತ್ತಿರುವ ಹೋರಾಟಗಾರರ ಕುರಿತು ಕೇವಲವಾಗಿ ಮಾತನಾಡಿರುವುದು ಖಂಡನೀಯ’ ಎಂದು ತಿಳಿಸಿದ್ದಾರೆ. ‘ಹಣ ಪಡೆದುಕೊಂಡು ಹೋರಾಟ ಮಾಡಿದ್ದಾರೆ ಎಂಬ ಆರೋಪವನ್ನು ಯತ್ನಾಳ ಸಾಬೀತು ಮಾಡಬೇಕಾಗುತ್ತದೆ ಸುಳ್ಳು ಆರೋಪ ಮಾಡಿ ಹೋರಾಟಗಾರರನ್ನು ಅವಮಾನಿಸುವುದು ಯಾವ ನ್ಯಾಯ? ಈ ಹೋರಾಟದಲ್ಲಿ ಅವರಿವರನ್ನದೇ ಪಕ್ಷಾತೀತವಾಗಿ ಜಾತ್ಯತೀತವಾಗಿ ಎಲ್ಲರೂ ಭಾಗವಹಿಸಿದ್ದಾರೆ. ಇವರೆಲ್ಲರನ್ನು ಅವಮಾನಿಸಿರುವುದನ್ನು ಖಂಡಿಸುತ್ತೇನೆ’ ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ವಿಜಯಪುರ: ‘ಸರ್ಕಾರಿ ವೈದ್ಯಕೀಯ ಕಾಲೇಜಿಗಾಗಿ ಹೋರಾಟ ನಡೆಸುತ್ತಿರುವವರು ಸಚಿವ ಶಿವಾನಂದ ಪಾಟೀಲ ಕೂರಿಸಿದ ಪೆಮೆಂಟ್ ಗಿರಾಕಿಗಳು ಎಂಬ ಶಾಸಕ ಯತ್ನಾಳ ಹೇಳಿಕೆಯಿಂದ ನೋವುಂಟಾಗಿದ್ದು ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡುತ್ತೇವೆ’ ಎಂದು ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. ‘ಶಾಸಕ ಯತ್ನಾಳ ನೀಡಿರುವ ಹೇಳಿಕೆ ಹಾಸ್ಯಾಸ್ಪದವಾಗಿದೆ. ಈ ಹೋರಾಟದಲ್ಲಿ ಪಾಲ್ಗೊಂಡಿರುವ ಯಾರಾದರೂ ಒಬ್ಬರು ಸಚಿವ ಶಿವಾನಂದ ಪಾಟೀಲರಿಂದ ಹಣಕಾಸಿನ ನೆರವು ಪಡೆದುಕೊಂಡು ಬಂದಿದ್ದರೆ ಸಾಕ್ಷಿ ಸಮೇತ ಬಹಿರಂಗವಾಗಿ ಸಾಬೀತು ಪಡಿಸಲಿ. ಒಂದು ವೇಳೆ ಸಾಬೀತು ಪಡಿಸುವಲ್ಲಿ ವಿಫಲರಾದರೆ ಧರಣಿ ನಿರತ ಹೋರಾಟಗಾರರ ಮತ್ತು ಜಿಲ್ಲೆಯ ಜನತೆಯ ಕ್ಷಮೆಯಾಚಿಸಿ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು’ ಎಂದು ಎಚ್ಚರಿಕೆ ನೀಡಿದ್ದಾರೆ.
‘ಜಿಲ್ಲೆಗೆ ನ್ಯಾಯಯುತವಾಗಿ ದೊರಕಬೇಕಿದ್ದ ಸರ್ಕಾರಿ ವೈದ್ಯಕೀಯ ಕಾಲೇಜು ದೊರಯದೇ ಇರುವುದನ್ನು ಖಂಡಿಸಿ ಮನೆ ಮಠಗಳನ್ನು ಬಿಟ್ಟು ಸದುದ್ದೇಶದಿಂದ ಕಳೆದ 82 ದಿನಗಳಿಂದ ಹೋರಾಟ ನಡೆಸಿಕೊಂಡು ಬರುತ್ತಿದ್ದೇವೆ’ ಎಂದು ಹೋರಾಟಗಾರರು ತಿಳಿಸಿದ್ದಾರೆ. ‘ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ನಮ್ಮ ಹೋರಾಟಕ್ಕೆ ಮೆಚ್ಚಿ ತಮ್ಮ ಕೈಲಾದ ಮಟ್ಟಿಗೆ ತನು ಮನ ಧನದಿಂದ ಸಹಾಯ ಸಹಕಾರ ನೀಡಿ ಈ ಧರಣಿಯನ್ನು ಬೆಂಬಲಿಸುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.