ವಿಜಯಪುರ: ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ನಗರದ ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಹೋರಾಟ ಸಮಿತಿಯು ಗುರುವಾರದಿಂದ ಅನಿರ್ದಿಷ್ಟ ಧರಣಿ ಆರಂಭಿಸಿದ್ದು, ಜಿಲ್ಲೆಯ ಜನತೆಯ ಬೇಡಿಕೆಗೆ ಸ್ಪಂದಿಸಿದ ಜಿಲ್ಲೆಯ ಸಚಿವರು, ಶಾಸಕರು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟ ಸಮಿತಿ ಸದಸ್ಯ ಅರವಿಂದ ಕುಲಕರ್ಣಿ ಮಾತನಾಡಿ, ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು. ಪಿಪಿಪಿ ಮಾದರಿಯನ್ನು ಯಾವ ಕಾರಣಕ್ಕೂ ವಿಜಯಪುರಕ್ಕೆ ತರಲು ಬಿಡುವುದಿಲ್ಲ. ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟಕ್ಕೆ ಮುನ್ನಡೆಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅಣ್ಣರಾಯ ಈಳಗೇರ ಮಾತನಾಡಿ, ಒಂದು ವೇಳೆ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ಆರಂಭವಾದರೆ ಅಲ್ಲಿ ಬಡ ಮತ್ತು ಮಧ್ಯಮ ವರ್ಗದ ಹಾಗೂ ಜನಸಾಮಾನ್ಯರ ಮಕ್ಕಳು ಕಲಿಯಲು ಸಾಧ್ಯವಾಗುವುದಿಲ್ಲ ಮತ್ತು ಇದು ಮುಂದೆ ಕ್ರಮೇಣ ಸಂಪೂರ್ಣ ಖಾಸಗೀಕರಣಗೊಂಡು ಬಡವರ ಶಿಕ್ಷಣ, ಆರೋಗ್ಯದ ಹಕ್ಕನ್ನು ಕಿತ್ತುಕೊಳ್ಳುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಜಗದೀಶ ಸೂರ್ಯವಂಶಿ ಮಾತನಾಡಿ, ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಮುಂದಾಗಿರುವ ಸರ್ಕಾರದ ವಿರುದ್ಧ ವಿದ್ಯಾರ್ಥಿ, ಯುವಕರು ಗಟ್ಟಿ ದ್ವನಿಯಾಗಬೇಕು. ಒಂದು ವೇಳೆ ಖಾಸಗಿಯವರಿಗೆ ಅವಕಾಶ ಕೊಟ್ಟರೆ ಜಿಲ್ಲಾ ಬಂದ್‌ಗೆ ಕರೆ ಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುರೇಶ ಬಿಜಾಪುರ ಮಾತನಾಡಿ, ಜಿಲ್ಲೆಯ ಜನರು, ಕೆಲ ಜನಪ್ರತಿನಿಧಿಗಳು ಪಿಪಿಪಿ ಮಾದರಿಯನ್ನೂ ವಿರೋಧಿಸಿದ್ದಾರೆ. ಹೀಗಿರುವಾಗ ರಾಜ್ಯ ಸರ್ಕಾರ ಹಠಾತ್ ಆಗಿ ಪಿಪಿಪಿ ಯೋಜನೆ ಅನುಷ್ಠಾನಗೊಳಿಸಲು ನೋಡಲ್ ಅಧಿಕಾರಿ ನೇಮಕ ಮಾಡಿರುವುದು ಏಕಪಕ್ಷೀಯ ಮತ್ತು ಅಪ್ರಜಾತಾಂತ್ರಿಕ ಕ್ರಮವಾಗಿದ್ದು, ಕೂಡಲೇ ಸರ್ಕಾರ ಈ ಕ್ರಮವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಶ್ರೀನಾಥ ಪೂಜಾರಿ ಮಾತನಾಡಿ, ಸರ್ಕಾರ ಖಾಸಗಿ ವ್ಯಕ್ತಿಗಳ ಮುಂದೆ ಮಂಡಿಯೂರುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನವಾಗಿದೆ. ಸರ್ಕಾರಿ ವೈದ್ಯಕೀಯ ಕಾಲೇಜು ಜಿಲ್ಲೆಯ ಜನರ ಹಲವಾರು ವರ್ಷಗಳ ಬೇಡಿಕೆಯಾಗಿ ಉಳಿದಿಲ್ಲ; ಬದಲಾಗಿ ಅದು ಈಗ ಜಿಲ್ಲೆಯ ಜನರ ಭಾವನೆಯಾಗಿ ಪರಿವರ್ತನೆಗೊಂಡಿದೆ ಎಂದು ಹೇಳಿದರು.
ಹೋರಾಟ ಸಮಿತಿ ಪ್ರಮುಖರಾದ ಅನಿಲ ಹೊಸಮನಿ, ಅಕ್ರಂ ಮಾಶ್ಯಾಳಕರ, ಮಲ್ಲಿಕಾರ್ಜುನ ಕೆಂಗನಾಳ, ಲಲಿತಾ ಬಿಜ್ಜರಗಿ, ದಸ್ತಗಿರಿ ಉಕ್ಕಲಿ, ಗೀತಾ. ಎಚ್, ಮಹದೇವಿ ಧರ್ಮಶೆಟ್ಟಿ, ಮಲ್ಲಿಕಾರ್ಜುನ ಬಟಗಿ, ಬಾಬುರಾವ್ ಬೀರಕಬ್ಬಿ, ಸಿದ್ರಾಮ ಹಿರೇಮಠ, ಪ್ರಭುಗೌಡ ಪಾಟೀಲ, ಅಬ್ದುಲ್ ರೆಹಮಾನ್ ನಾಸಿರ, ಸಿದ್ದನಗೌಡ ಪಾಟೀಲ, ಲಕ್ಷ್ಮಣ ಕಂಬಾಗಿ, ರೆಹಮಾನ್, ನೀಲಾಂಬಿಕ ಬಿರಾದರ, ಬಸೀರಹ್ಮದ್ ತಾಂಬೆ, ಲಕ್ಷ್ಮಣ ಹಂದ್ರಾಳ, ಸಂಜೀವ ಕಂಬಾಗಿ, ಮಲ್ಲಿಕಾರ್ಜು ಎಚ್. ಟಿ, ವೆಂಕಟೇಶ ವಗ್ಗನ್ನವರ, ಎನ್. ಎಂ.ಹರನಾಳ, ರೇಣುಕಾ ಕೋಟ್ಯಾಳ, ಸಿಸ್ಟರ್ ಸಿಂಥಿಯಾ ಪೆರಾರಿ, ಕಾಮಿನಿ ಕಸಬೆ, ಶೋಭಾ ವಾಲಿಕಾರ, ಶ್ರೀಧರ ಕೊಣ್ಣೂರ, ಗೀತಾ ಕಟ್ಟಿ, ರವಿ ಕಟ್ಟಿಮನಿ, ಜಯಶ್ರೀ ಚಲವಾದಿ, ಸುನೀತಾ ಮೋರೆ, ಚಂದು ಜಾದವ, ಸರೋಜಾ ಕಟ್ಟಮನಿ, ಶಾಂತಾ ಹೊಸಮನಿ, ಹಮಿದಾ ಪಟೇಲ ಮುಂತಾದವರು ಭಾಗವಹಿಸಿದ್ದರು.
ಜಿಲ್ಲೆಯ ಜನತೆ ಯಾವುದೇ ಕಾರಣಕ್ಕೂ ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಅವಕಾಶ ನೀಡಬಾರದು. ನೀಡಿದ್ದೇ ಆದರೆ ಅದರ ವಿರುದ್ದ ಹೋರಾಟಕ್ಕೆ ಅಣಿಯಾಗಬೇಕುವಿದ್ಯಾವತಿ ಅಂಕಲಗಿ ಹೋರಾಟಗಾರ್ತಿ
ಜಿಲ್ಲೆಯ ಜನತೆಯ ಬೇಡಿಕೆ ಈಡೇರಿಸುವಂತೆ ಮುಖ್ಯಮಂತ್ರಿಗೆ ಜಿಲ್ಲೆಯ ಜನಪ್ರತಿನಿಧಿಗಳು ಸಚಿವರು ಒತ್ತಡ ಹೇರಬೇಕಿತ್ತು ಆದರೆ ಅಸಹಾಯಕರಂತೆ ಇರುವುದು ದೊಡ್ಡ ದುರಂತಶ್ರೀನಾಥ ಪೂಜಾರಿ ಅಧ್ಯಕ್ಷ ಡಿವಿಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.