ADVERTISEMENT

ಶಿಕ್ಷಣ ಇಲಾಖೆ ಸುಧಾರಣೆಗೆ ಕಟ್ಟುನಿಟ್ಟಿನ ಕ್ರಮ: ಸಚಿವ ಎಂ.ಬಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 3:15 IST
Last Updated 23 ಡಿಸೆಂಬರ್ 2025, 3:15 IST
<div class="paragraphs"><p>ವಿಜಯಪುರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಮಾತನಾಡಿದರು</p><p></p></div>

ವಿಜಯಪುರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಮಾತನಾಡಿದರು

   

ವಿಜಯಪುರ: ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ(ಡಿಡಿಪಿಐ) ಕಚೇರಿಯಲ್ಲಿ ತುಂಬಿರುವ ಭ್ರಷ್ಟಾಚಾರ, ಲಂಚಗುಳಿತ, ಅಧಿಕಾರಿ, ಸಿಬ್ಬಂದಿ ಅದಕ್ಷತೆ, ಪಿತೂರಿ, ಅವ್ಯವಸ್ಥೆ, ಜಿಲ್ಲೆಯಲ್ಲಿ ಹದಗೆಟ್ಟಿರುವ ಶೈಕ್ಷಣಿಕ ವ್ಯವಸ್ಥೆ ಬಗ್ಗೆ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕರು, ಸಚಿವರು ಧ್ವನಿ ಎತ್ತಿದರು.

ADVERTISEMENT

‘ಜಿಲ್ಲೆಯಲ್ಲೇ ಅತ್ಯಂತ ಕೆಟ್ಟ ಇಲಾಖೆ ಎಂದರೆ ಅದು ಶಿಕ್ಷಣ ಇಲಾಖೆ, ಚಲೋ ಡಿಡಿಪಿಐಗಳು ಜಿಲ್ಲೆಗೆ ಬರಲು ಒಪ್ಪತ್ತಿಲ್ಲ, ಡಿಡಿಪಿಐ ಕಚೇರಿಯಲ್ಲಿ ಕೆಳಗಿನ ಸಿಬ್ಬಂದಿ ಸರಿಯಿಲ್ಲ, ಕಚೇರಿಯಲ್ಲಿ ತಿಮಿಂಗಲಗಳಿವೆ’ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಆರೋಪಿಸಿದರು.

‘ಡಿಡಿಪಿಐ ಕಚೇರಿ ಸುಧಾರಣೆಗೆ ಜಿಲ್ಲಾ ಉಸ್ತುವಾರಿ ಸಚಿವ, ಡಿಸಿ, ಸಿಇಒ ಅವರು ಆದ್ಯತೆ ನೀಡಬೇಕು, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಡಿಡಿಪಿಐ ಕಚೇರಿಯಲ್ಲಿ ಬೇರುಬಿಟ್ಟಿರುವ ತಿಮಿಂಗಲಗಳನ್ನು  ಎತ್ತಂಗಡಿ ಮಾಡಿ, ಶಿಕ್ಷಣ ಇಲಾಖೆ ಸುಧಾರಣೆಗೆ ಕ್ರಮಕೈಗೊಳ್ಳಲು ಹಿಂಜರಿಯುವುದಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಪ್ರತಿಕ್ರಿಯಿಸಿದರು.

‘ಜಿಲ್ಲೆಯಲ್ಲಿ 2025-26ನೇ ಸಾಲಿನಲ್ಲಿ 163 ನೂತನ ಶಾಲೆಗಳ ಆರಂಭಕ್ಕೆ ಅನುಮತಿ ನೀಡಿದ್ದೀರಿ, ರಾಜ್ಯದ ಬೇರಾವ ಜಿಲ್ಲೆಯಲ್ಲೂ ಇಷ್ಟೊಂದು ಸಂಖ್ಯೆಯಲ್ಲಿ ಹೊಸ ಶಾಲೆಗಳ ಆರಂಭಕ್ಕೆ ಅನುಮತಿ ನೀಡಿಲ್ಲ. ಅಲ್ಲದೇ, ವಿಜಯಪುರ ಡಿಡಿಪಿಐ ಕಚೇರಿಯಲ್ಲಿರುವ ಕಡತಗಳು ಕಾಣೆಯಾಗುತ್ತಿವೆ ಎಂಬ ದೂರುಗಳು ಕೇಳಿಬಂದಿವೆ. ಈ ಬಗ್ಗೆ ಯಾವ ಕ್ರಮಕೈಗೊಂಡಿದ್ದೀರಿ’ ಎಂದು ವಿಧಾನ ಪರಿಷತ್‌ ಸದಸ್ಯ ಕೇಶವ ಪ್ರಸಾದ್ ಪ್ರಶ್ನಿಸಿದರು.

‘ಶಿಕ್ಷಣ ಇಲಾಖೆ ಧಾರವಾಡ ಅಪರ ಆಯುಕ್ತರ ಕಚೇರಿ ಅಧಿಕಾರಿಗಳಿಂದ ಹಾಗೂ ಜಿಲ್ಲಾ ಪಂಚಾಯಿತಿ ಮಟ್ಟದಲ್ಲೂ ತನಿಖೆ ನಡೆಯುತ್ತಿದೆ. ಅಂತಿಮ ವರದಿ ಇನ್ನೂ ಬಂದಿಲ್ಲ, ಬಂದ ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು’ ಎಂದು ಡಿಡಿಪಿಐ ಹೇಳಿದರು.

‘ಶಾಲಾ ಮಕ್ಕಳಿಗೆ ಗುಣಮಟ್ಟದ ಬಿಸಿಯೂಟ ನೀಡಬೇಕು. ಅಂಗನವಾಡಿಯಲ್ಲಿ ಮೊಟ್ಟೆಯನ್ನೇ ಹಾರಿಸುತ್ತಾರೆ. ಇದು ನಿಲ್ಲಬೇಕು’ ಎಂದು ಸಚಿವ ಎಂ.ಬಿ.ಪಾಟೀಲ ಸೂಚಿಸಿದರು.

‘ಜಿಲ್ಲೆಯ ಎಷ್ಟು ಶಾಲೆಗಳಲ್ಲಿ ಶೌಚಾಲಯ, ಶಾಲಾ ಕಂಪೌಂಡ್ ಇಲ್ಲವೋ ಅವುಗಳ ನಿರ್ಮಾಣ‌ಕ್ಕೆ ಆದ್ಯತೆ ನೀಡಬೇಕು’ ಎಂದು ಸೂಚಿಸಿದರು.

‘ಪ್ರಾಥಮಿಕ ಹಂತದಲ್ಲೇ ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಆದ್ಯತೆ ನೀಡಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಎನ್. ರವಿಕುಮಾರ್ ಸಲಹೆ ನೀಡಿದರು.

‘ಒಂದರಿಂದ ಒಂಬತ್ತನೇ ತರಗತಿ ವರೆಗೆ ಯಾರನ್ನೂ ಅನುತ್ತೀರ್ಣ ಮಾಡಬಾರದು ಎಂಬ ವ್ಯವಸ್ಥೆ ಇರುವುದರಿಂದ ಎಸ್ ಎಸ್ ಎಲ್ ಸಿಯಲ್ಲಿ ಅನುತ್ತೀರ್ಣರಾಗುವವರ ಸಂಖ್ಯೆ ಹೆಚ್ಚಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಹನುಮಂತ ನಿರಾಣಿ ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಪ್ರಕಾಶ ಹುಕ್ಕೇರಿ, ‘ಶೇ 60 ಕ್ಕಿಂತ ಕಡಿಮೆ ಫಲಿತಾಂಶ ಬಂದ ಶಾಲೆಗಳ ಶಿಕ್ಷಕರ ವೇತನ, ವೇತನ ತಡೆ ಹಿಡಿದಿರುವುದು ಸರಿಯಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಸರ್ಕಾರದ ಆದೇಶದಂತೆ ತಡೆಹಿಡಿಯಲಾಗಿತ್ತು. ಇದೀಗ ತೆರವುಗೊಳಿಸಲಾಗಿದೆ’ ಎಂದು ಡಿಡಿಪಿಐ ಸಭೆಗೆ ತಿಳಿಸಿದರು.

ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ರಾಜು ಗೌಡ ಪಾಟೀಲ, ವಿಠಲ ಕಟಕಧೋಂಡ, ಜಿಲ್ಲಾಧಿಕಾರಿ ಡಾ.ಅನಂದ ಕೆ., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಇದ್ದರು.

ಈ ಬಾರಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ರಾಜ್ಯದ ಮೊದಲ ಐದು ಸ್ಥಾನಗಳ ಒಳಗೆ ಜಿಲ್ಲೆಯ ಫಲಿತಾಂಶ ಬರುವಂತೆ ಶ್ರಮವಹಿಸಬೇಕು, ಒಂದು ವೇಳೆ ವಿಫಲವಾದರೆ ಡಿಸಿ, ಸಿಇಒ, ಡಿಡಿಪಿಐ, ಬಿಇಒ, ಶಿಕ್ಷಕರನ್ನು ಹೊಣೆ ಮಾಡಬೇಕಾಗುತ್ತದೆ
ಎಂ.ಬಿ.ಪಾಟೀಲ,ಜಿಲ್ಲಾ ಉಸ್ತುವಾರಿ ಸಚಿವ

29,046 ಜನರಿಗೆ ನಾಯಿ ಕಡಿತ 

ಜಿಲ್ಲೆಯಲ್ಲಿ 29,046 ಜನರಿಗೆ ಈ ವರ್ಷ ನಾಯಿ ಕಚ್ಚಿವೆ. ಇದರಲ್ಲಿ ಐದು ಜನರು ಸಾವಿಗೀಡಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಂಪತ್‌ ಗುಣಾರಿ ಮಾಹಿತಿ ನೀಡಿದರು.

ವಿಜಯಪುರದಲ್ಲಿ ಬೀದಿ ನಾಯಿಗಳ ದಾಳಿ ಹೆಚ್ಚಾಗಿದೆ. ಇವುಗಳ ನಿಯಂತ್ರಣಕ್ಕೆ ಸಂತಾನೋತ್ಪತ್ತಿ ತಡೆಗೆ ಕ್ರಮಕೈಗೊಳ್ಳಬೇಕು ಎಂದ ಸಚಿವ ಎಂ.ಬಿ.ಪಾಟೀಲ ಸೂಚಿಸಿದರು. 

ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡ, ಹಂದಿಗಳ ಹಾವಳಿ ಹೆಚ್ಚಾಗಿದೆ, ಮನೆ ಮನೆಗೆ ರೋಗ ಹರಡುತ್ತಿವೆ, ಇವುಗಳ ನಿಯಂತ್ರಣಕ್ಕೆ ಆದ್ಯತೆ ನೀಡಿ ಎಂದು ಸೂಚಿಸಿದರು.

ಕುಡಿವ ನೀರಿನ ಕಾಮಗಾರಿ ಪೂರ್ಣಕ್ಕೆ ಸೂಚನೆ

ವಿಜಯಪುರ: ಜಿಲ್ಲೆಯಲ್ಲಿ ಬಾಕಿ ಇರುವ ಕುಡಿಯುವ ನೀರಿನ ಕಾಮಗಾರಿಗಳನ್ನು ತೀವ್ರಗತಿಯಲ್ಲಿ ಪೂರ್ಣಗೊಳಿಸಿ ಯಾವುದೇ ಸಬೂಬು ನೀಡದೇ ನಿಗದಿತ ಪ್ರಗತಿ ಸಾಧಿಸುವಂತೆ ಅಧಿಕಾರಿಗಳಿಗೆ ಸಚಿವ ಎಂ.ಬಿ.ಪಾಟೀಲ ಸೂಚನೆ ನೀಡಿದರು.

ಕುಡಿಯುವ ನೀರಿನ ಪೈಪಲೈನ್ ಕಾಮಗಾರಿ ಕೈಗೊಳ್ಳುವಾಗ ರಸ್ತೆ ಅಗೆತ ಮಾಡುವುದರಿಂದ ರಸ್ತೆ ಹಾಳಾಗಿ ಜನರಿಗೂ ಅನಾನೂಕುಲ ಹಾಗೂ ಸರ್ಕಾರಕ್ಕೂ ಹೊರೆಯಾಗುತ್ತದೆ.  ಕಾಮಗಾರಿ ಕೈಗೊಳ್ಳಲು ಮಾರ್ಗಸೂಚಿಗಳಿದ್ದರೂ, ರಸ್ತೆ ಅಗೆದು ಕಾಮಗಾರಿ ಕೈಗೊಂಡ ಹಾನಿಗೆ ಯಾರೂ ಜವಾಬ್ದಾರರೂ ಎಂದು ಸಚಿವರು ಪ್ರಶ್ನಿಸಿದರು.

ವಿಜಯಪುರಕ್ಕೆ ಅವಶ್ಯಕತೆ ಇರುವ ಕುಡಿಯುವ ನೀರಿನ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಸುಮಾರು ₹10 ಕೋಟಿ ವೆಚ್ಚ ಮಾಡಿ, ಎಲ್ಲ 60 ಬಾವಡಿಗಳನ್ನು ಸ್ವಚ್ಛಗೊಳಿಸಲಾಗಿದೆ. ಈಗಾಗಲೇ 26 ಬಾವಡಿಗಳ ನೀರನ್ನು ಗೃಹಬಳಕೆಗೆ ಉಪಯೋಗಿಸಲಾಗುತ್ತಿದ್ದು, ಎಲ್ಲ 60 ಬಾವಡಿಗಳ ನೀರು ಬಳಕೆಯಾದಲ್ಲಿ ಅಂದಾಜು 10 ಎಂಎಲ್‍ಡಿ ನೀರಿನ ಲಭ್ಯತೆಯಾಗಿ ಕುಡಿಯುವ ನೀರಿನ ಒತ್ತಡ ಕಡಿಮೆಯಾಗುವುದರಿಂದ ಈ ಕುರಿತು ಅಧಿಕಾರಿಗಳು ಕ್ರಮ ವಹಿಸುವಂತೆ ಸಚಿವರು ಸೂಚನೆ ನೀಡಿದರು. 

ಸಿಂದಗಿ ನಗರದ ಯುಜಿಡಿ ಕಾಮಗಾರಿ ಪೂರ್ಣಗೊಳ್ಳದೇ ಇರುವ ಕುರಿತು ಶಾಸಕ ಅಶೋಕ ಮನಗೂಳಿ  ಅಸಮಾಧಾನ ವ್ಯಕ್ತಪಡಿಸಿದರು.

ಗುತ್ತಿಗೆದಾರರಿಂದ ಸರಿಯಾಗಿ ಕೆಲಸ ನಿರ್ವಹಿಸಲು ಆಗದೆ ಇದ್ದಲ್ಲಿ, ಗುತ್ತಿಗೆದಾರರನ್ನು ಕಾಯ್ದು ಕುಳಿತುಕೊಳ್ಳದೇ, ರಿಸೆಟ್ ಮಾಡಿ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಮಾಲದಂಡಿ ಜೋಳಕ್ಕೆ ಜಿ.ಐ ಟ್ಯಾಗ್‌ಗೆ ಪ್ರಯತ್ನ

ವಿಜಯಪುರ: ಜಿಲ್ಲೆಯ ಡೋಣಿ ತೀರದಲ್ಲಿ ಬೆಳೆಯುವ ಮಾಲದಂಡಿ ಜೋಳಕ್ಕೆ ಭೌಗೋಳಿಕ ಮಾನ್ಯತೆ (ಜಿಐ ಟ್ಯಾಗ್) ಪಡೆಯಲು ಅಗತ್ಯ ಪ್ರಯತ್ನ ಮಾಡುವಂತೆ ಸಚಿವ ಎಂ.ಬಿ.ಪಾಟೀಲ ಅವರು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ತೋಟಗಾರಿಕೆ ಉತ್ಪನ್ನಗಳ ಸಂಗ್ರಹಕ್ಕೆ ಕೋಲ್ಡ್ ಸ್ಟೋರೇಜ್‌ಗಳನ್ನು ಹೆಚ್ಚು ಆರಂಭಿಸಲು ಕ್ರಮಕೈಗೊಳ್ಳಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಕೇಶವ ಪ್ರಸಾದ್ ಒತ್ತಾಯಿಸಿದರು.

ಶಾಸಕ ಅಶೋಕ ಮನಗೂಳಿ, ಇಂಡಿ, ಸಿಂದಗಿ, ಆಲಮೇಲ, ದೇವರಹಿಪ್ಪರಗಿಯಲ್ಲಿ ಕೋಲ್ಡ್ ಸ್ಟೋರೇಜ್ ಮಾಡಲು ಒತ್ತಾಯಿಸಿದರು.

ಸರ್ಕಾರದಿಂದ ಜಿಲ್ಲೆಯ ಅಗತ್ಯ ಇರುವ ತಾಲ್ಲೂಕುಗಳಲ್ಲಿ ಹೊಸ ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸುವಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸಚಿವ ಎಂ.ಬಿ.ಪಾಟೀಲ ಸೂಚಿಸಿದರು.

ಕೇಶವ ಪ್ರಸಾದ್ ಮಾತನಾಡಿ, ಜಿಲ್ಲೆಯ ಎಪಿಎಂಸಿ ಪ್ರಾಂಗಣದಲ್ಲಿರುವ ಶೌಚಾಲಯಗಳು ನಿರ್ವಹಣೆ ಇಲ್ಲದೇ ಗಬ್ಬೆದ್ದು ನಾರುತ್ತಿವೆ. ರೈತರಿಗೆ ರಾತ್ರಿ ವೇಳೆ ತಂಗಲು ವ್ಯವಸ್ಥೆ ಸರಿಯಾಗಿಲ್ಲ ಎಂದು ದೂರಿದರು.

ಸಚಿವ ಎಂ.ಬಿ.ಪಾಟೀಲ ಮಾತನಾಡಿ, ಎಪಿಎಂಸಿಗಳಲ್ಲಿ ರೈತರಿಗೆ ಅನುಕೂಲವಾಗುವಂತೆ ಡಾರ್ಮೆಟರಿಗಳನ್ನು ನಿರ್ಮಾಣ ಮಾಡಿ, ಮೂಲ ಸೌಲಭ್ಯ ಒದಗಿಸಿ ಎಂದು ಸೂಚಿಸಿದರು.

ವಿಧಾನ ಪರಿಷತ್ ಸದಸ್ಯ  ಪಿ.ಎಚ್.ಪೂಜಾರ ಮಾತನಾಡಿ, ಜಿಲ್ಲೆಯಲ್ಲಿ ಸಾವಯವ ಕೃಷಿಗೆ ಒತ್ತು ನೀಡಬೇಕು. ಸಾವಯವ ಕೃಷಿ ಕುರಿತು ತಿಳಿವಳಿಕೆ ಮೂಡಿಸಬೇಕು. ಸಾವಯವ ಕೃಷಿಕರ ಯಶೋಗಾಥೆಗಳ ಮೂಲಕ ಇತರ ರೈತರಿಗೂ ಪ್ರೇರೇಪಿಸಬೇಕು. ಇದರಿಂದ ರೈತರು ಸಾವಯವ ಕೃಷಿ ಬೆಳೆಯಲು ಮುಂದೆ ಬರುತ್ತಾರೆ ಎಂದು ಹೇಳಿದರು. \

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.