ADVERTISEMENT

ಶಾಸಕಿ ಸೌಮ್ಯ ರೆಡ್ಡಿ ವಿರುದ್ಧದ ಎಫ್‌ಐಆರ್‌ ರದ್ದುಗೊಳಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ಜನವರಿ 2021, 12:33 IST
Last Updated 28 ಜನವರಿ 2021, 12:33 IST

ವಿಜಯಪುರ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಬೆಂಗಳೂರಿನಲ್ಲಿ ಕೆಪಿಸಿಸಿ ವತಿಯಿಂದ ಇತ್ತೀಚೆಗೆ ನಡೆದ ಪ್ರತಿಭಟನೆ ವೇಳೆ ಶಾಸಕಿ ಸೌಮ್ಯ ರೆಡ್ಡಿ ಅವರು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ದಾಖಲಿಸಲಾಗಿರುವ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ವಿಜಯಪುರ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಂಸ್ಥೆ ಆಗ್ರಹಿಸಿದೆ.

ಪ್ರಕರಣದ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಿ, ಘಟನೆಗೆ ಕಾರಣರಾದ ಪೊಲೀಸ್‌ ಸಿಬ್ಬಂದಿ ಮೇಲೆ ಕ್ರಮ ಜರುಗಿಸಬೇಕು ಎಂದು ಸಂಸ್ಥೆಯ ಅಧ್ಯಕ್ಷ ಸುರೇಶ ದೇಸಾಯಿ ಕಲಕೇರಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಬಿಜೆಪಿ ಸರ್ಕಾರವು ಕುತಂತ್ರ ರಾಜಕಾರಣದ ಮೂಲಕ ಶಾಸಕಿ ಸೌಮ್ಯ ರೆಡ್ಡಿ ಅವರ ಮೇಲೆ ಎಫ್‌ಐಆರ್‌ ದಾಖಲಿಸಿರುವುದು ಖಂಡನೀಯ ಎಂದು ಹೇಳಿದರು.

ADVERTISEMENT

ರೈತ ಹೋರಾಟದ ಸಂದರ್ಭದಲ್ಲಿ ನಡೆದ ನೂಕುನುಗ್ಗಲಿನಲ್ಲಿ ಮಹಿಳಾ ಪೊಲೀಸ್‌ ಕಾನ್‌ಸ್ಟೆಬಲ್‌ ಒಬ್ಬರುಶಾಸಕಿ ಸೌಮ್ಯ ಅವರನ್ನು ನೆಲಕ್ಕೆ ತಳ್ಳಿ ಎಳೆದಾಡಿ ಅವಮಾನಿಸಿದ್ದಾರೆ. ಆದರೂ ಅವರ ವಿರುದ್ಧ ಯಾವುದೇ ಕ್ರಮಕೈಗೊಳ್ಳದೇ ಎರಡು ದಿನಗಳ ಬಳಿಕ ಶಾಸಕಿ ವಿರುದ್ಧ ಉದ್ದೇಶ ಪೂರ್ವಕವಾಗಿ ಎಫ್‌ಐಆರ್‌ ದಾಖಲಿಸಿರುವುದು ಕುತಂತ್ರ ರಾಜಕಾರಣವಾಗಿದೆ ಎಂದರು.

ಶಾಸಕಿ ವಿರುದ್ಧ ದಾಖಲಾಗಿರುವ ಸುಳ್ಳು ಎಫ್‌ಐಆರ್‌ ಅನ್ನು ಕೂಡಲೇ ರದ್ದುಗೊಳಿಸಬೇಕು ಹಾಗೂ ಉನ್ನತ ಮಟ್ಟದ ತನಿಖೆ ನಡೆಸಿ ಪೊಲೀಸ್‌ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಬೇಕು ಇಲ್ಲವಾದರೆ ಕರ್ನಾಟಕ ರೆಡ್ಡಿ ಜನಸಂಘದ ನೇತೃತ್ವದಲ್ಲಿ ರಾಜ್ಯದಾದ್ಯಂತ ತೀವ್ರತರವಾದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಂಸ್ಥೆಯ ಉಪಾಧ್ಯಕ್ಷ ಡಾ.ಎಚ್‌.ವಿ.ಕರಿಗೌಡರ, ಎಚ್‌.ಆರ್‌.ಮಾಚಪ್ಪನವರ, ಕಾರ್ಯದರ್ಶಿ ಆರ್‌.ಪಿ.ಕೊಡಬಾಗಿ, ನಿರ್ದೇಶಕರಾದ ಶಂಕರ ಜೀರಗಾಳ, ಕೆ.ಬಿ.ಪಾಟೀಲ, ಡಾ.ಕಂಠೀರವ ಕುಲ್ಲೊಳ್ಳಿ, ಸಿ.ಎಂ.ಹುಂಡೇಕರ, ರಾಚಪ್ಪ ಖಜ್ಜಿಡೋಣಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.