ವಿಜಯಪುರ: ಜಿಲ್ಲೆಯಲ್ಲಿ ಮುಂಗಾರು ಪೂರ್ವ ಉತ್ತಮ ಮಳೆಯಾಗಿದೆ. ಮೇ 31ರ ವರೆಗೆ 15.8 ಸೆಂ.ಮೀ ಮಳೆ ಅಂದರೆ, ವಾಡಿಕೆಗಿಂತ ಶೇ 323 ಹೆಚ್ಚಿಗೆ ಮಳೆಯಾಗಿದೆ. ಕೃಷಿ ಚಟುವಟಿಕೆಗಳು ಗರಿಗೆದರಿವೆ. ರೈತರು ತಮ್ಮ ಹೊಲವನ್ನು ಸ್ವಚ್ಛಗೊಳಿಸಿ, ಉತ್ತುಬಿತ್ತುವಲ್ಲಿ ನಿರತವಾಗಿದ್ದಾರೆ.
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಒಟ್ಟು 7.62 ಲಕ್ಷ ಹೇಕ್ಟೇರ್ ಬಿತ್ತನೆ ಗುರಿ ಇದೆ. ಇದರಲ್ಲಿ ಪ್ರಮುಖವಾಗಿ ಹೆಸರು, ಉದ್ದು, ತೊಗರಿ, ಮೆಕ್ಕೆ ಜೋಳ, ಹತ್ತಿ, ಕಬ್ಬು, ಸಜ್ಜೆ ಹಾಗೂ ಸೂರ್ಯಕಾಂತಿ ಬೆಳೆಗಳನ್ನು ಬಿತ್ತನೆ ಮಾಡುತ್ತಾರೆ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಹೆಚ್ಚಿನ ರೈತರು ತೊಗರಿ ಬೆಳೆಯನ್ನು ಬಿತ್ತನೆ ಮಾಡುತ್ತಿದ್ದು, ಪ್ರಸಕ್ತ ಸಾಲಿನಲ್ಲಿಯೂ ಅಂದಾಜು 5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಅಂದಾಜಿಸಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರೂಪ ತಿಳಿಸಿದ್ದಾರೆ.
ಬಿತ್ತನೆ ಬೀಜ ದಾಸ್ತಾನು:
ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ವಿವಿಧ ಬೆಳೆಯ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲು ಅಗತ್ಯ ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ತೊಗರಿ 3404 ಕ್ವಿಂಟಾಲ್, ಹೆಸರು 46 ಕ್ವಿಂಟಾಲ್, ಮೆಕ್ಕೆಜೋಳ 1080 ಕ್ವಿಂಟಾಲ್, ಸಜ್ಜೆ 24 ಕ್ವಿಂಟಾಲ್, ಸೂರ್ಯಕಾಂತಿ 6 ಕ್ವಿಂಟಾಲ್ ರೈತಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಲಭ್ಯವಿದ್ದು, ರೈತರಿಗೆ ವಿತರಿಸಲು ಕ್ರಮ ವಹಿಸಲಾಗಿದೆ. ಯಾವುದೇ ಬಿತ್ತನೆ ಬೀಜದ ಕೊರತೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ರಸಗೊಬ್ಬರ ದಾಸ್ತಾನು:
ಜಿಲ್ಲೆಯಲ್ಲಿ 55,708 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿದ್ದು, ಇದರಲ್ಲಿ ಯೂರಿಯಾ 20,555 ಮೆಟ್ರಿಕ್ ಟನ್, ಡಿ.ಎ.ಪಿ 4,229 ಮೆಟ್ರಿಕ್ ಟನ್, ಕಾಂಪ್ಲೆಕ್ಸ್ 23,950 ಮೆಟ್ರಿಕ್ ಟನ್, ಎಂ.ಒ.ಪಿ 4,353 ಮೆಟ್ರಿಕ್ ಟನ್ ಹಾಗೂ ಎಸ್‍ಎಪಿ 2,619 ಮೆಟ್ರಿಕ್ ಟನ್ ಲಭ್ಯವಿದೆ ಎಂದು ಅವರು ತಿಳಿಸಿದ್ದಾರೆ.
2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 75,196 ಹೆಕ್ಟೇರ್ ಕಬ್ಬು ಬೆಳೆದಿದ್ದು, ಈ ವರ್ಷ ಉತ್ತಮ ಮುಂಗಾರು ಆರಂಭವಾಗಿರುವುದರಿಂದ ಹಾಗೂ ನೀರಾವರಿ ಸೌಲಭ್ಯ ಹೆಚ್ಚುತ್ತಿರುವುದರಿಂದ ಅಂದಾಜು 1 ಲಕ್ಷ ಹೆಕ್ಟೇರ್‌ವರೆಗೆ ಕಬ್ಬಿನ ಕ್ಷೇತ್ರ ಆವರಿಸುವ ಸಾಧ್ಯತೆ ಇದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ರೈತರು ಮೆಕ್ಕೆಜೋಳ ಬಿತ್ತನೆಗೆ ಆಸಕ್ತಿ ತೋರುತ್ತಿದ್ದಾರೆ. ಈ ವರ್ಷ 95 ಸಾವಿರ ಹೆಕ್ಟೇರ್ ವರೆಗೆ ಮೆಕ್ಕೆಜೋಳ ಕ್ಷೇತ್ರ ಆವರಿಸುವ ಸಾಧ್ಯತೆ ಇದೆ. ಹತ್ತಿ ಬೆಳೆಯು ಜಿಲ್ಲೆ ಪ್ರಮುಖ ವಾಣಿಜ್ಯ ಬೆಳೆಯಾಗಿರುತ್ತದೆ. ಈ ವರ್ಷ 70 ಸಾವಿರ ಹೆಕ್ಟೇರ್ ವರೆಗೆ ಹತ್ತಿ ಕ್ಷೇತ್ರ ಆವರಿಸುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.
ವಿಜಯಪುರ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಕಬ್ಬು ಮೆಕ್ಕೆ ಜೋಳ ಹಾಗೂ ಹತ್ತಿ ಬೆಳೆಗಳ ಕಡೆ ರೈತರ ಒಲವು ಹೆಚ್ಚಾಗುವ ಸಾಧ್ಯತೆ ಇದೆರೂಪ ಎಲ್. ಜಂಟಿ ಕೃಷಿ ನಿರ್ದೇಶಕಿ ವಿಜಯಪುರ
ರೈತರು ಪ್ರತಿ ವರ್ಷ ಒಂದೇ ರೀತಿಯ ಬೆಳೆ ಬೆಳೆಯುವ ಬದಲಾಗಿ ವಿವಿಧ ಬಗೆಯ ಬೆಳೆ ಬೆಳೆಯಬೇಕು.ಹೀಗಾದರೆ ಭೂಮಿಯ ಫಲವತ್ತತೆ ಕಾಯ್ದುಕೊಳ್ಳವ ಮೂಲಕ ಅಧಿಕ ಇಳುವರಿ ಪಡೆಯಬಹುದು-ಡಾ.ಮಹಾಂತೇಶ ಸಜ್ಜನ ಕೃಷಿ ವಿಜ್ಞಾನಿ ನಾಲತವಾಡ
ಕಳೆದ ಮುಂಗಾರು ಹಂಗಾಮಿನಲ್ಲಿ ತೊಗರಿ ಕಳಪೆ ಬೀಜಗಳ ಮಾರಾಟವಾಗಿ ರೈತರಿಗೆ ಹಾನಿಯಾಗಿತ್ತು. ಈ ಬಾರಿ ಹಾಗಾಗದಂತೆ ಕೃಷಿ ಅಧಿಕಾರಿಗಳು ಜಾಗೃತಿ ವಹಿಸಬೇಕುಶರಣಪ್ಪ ಬಲವಂತರಕಂಠಿ ನಾಲತವಾಡ
ಕಟ್ಟುನಿಟ್ಟಿನ ತಪಾಸಣೆ
ಮುಂಗಾರು ಹಂಗಾಮಿನ ಸಿದ್ದತೆಯಲ್ಲಿ ಇಲಾಖೆಯು ರೈತರಿಗೆ ಗುಣ ಮಟ್ಟದ ಬಿತ್ತನೆ ಬೀಜ ಕೀಟನಾಶಕ ಹಾಗೂ ರಸಗೊಬ್ಬರ ವಿತರಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೈಕೊಳ್ಳಲಾಗಿದೆ. ಒಟ್ಟು 10 ತಂಡಗಳನ್ನು ರಚಿಸಿ 193 ಕೃಷಿ ಪರಿಕರ ಮಾರಾಟಗಾರರ ಮಳಿಗೆಗಳನ್ನು ಪರಿಶೀಲಿಸಿಲಾಗಿದೆ. 150 ಕೃಷಿ ಪರಿಕರ ಮಾರಾಟಗಾರರಿಗೆ ನೋಟಿಸ್ ನೀಡಲಾಗಿದೆ. 13 ಕೃಷಿ ಪರಿಕರಗಳಿಗೆ ಮಾರಾಟ ತಡೆ ಆದೇಶ ನೀಡಲಾಗಿದೆ. ಒಂದು ರಸಗೊಬ್ಬರ ಜಪ್ತು ಪ್ರಕರಣ ದಾಖಲಿಸಲಾಗಿದೆ. 29 ಬೀಜ ಮಾರಾಟ ಮಾದರಿಗಳನ್ನು 16 ಕೀಟನಾಶಕ ಮಾದರಿಗಳನ್ನು ಹಾಗೂ 57 ರಸಗೊಬ್ಬರ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಗಳಿಗೆ ಗುಣಮಟ್ಟ ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ತಿಳಿಸಿದರು. ಕಠಿಣ ಕ್ರಮ: ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ವಿವಿಧ ಕೃಷಿ ಪರಿಕರ ಮಾರಾಟಗಾರರು ಮತ್ತು ರಸಗೊಬ್ಬರ ತಯಾರಿಸುವ ಕಂಪನಿಗಳೊಂದಿಗೆ ಈಗಾಗಲೇ ಸಭೆ ನಡೆಸಿ ಕೃಷಿ ಪರಿಕರಗಳನ್ನು ಮತ್ತು ರಸಗೊಬ್ಬರಗಳನ್ನು ನಿಗದಿತ ದರದಲ್ಲಿ ಮಾರಾಟ ಮಾಡಲು ಹಾಗೂ ಕಡ್ಡಾಯವಾಗಿ ಮಾರಾಟ ಮಳಿಗೆಗಳ ಮುಂದೆ ರಸಗೊಬ್ಬರ ದರಗಳನ್ನು ಪ್ರದರ್ಶಿಸುವಂತೆ ಹಾಗೂ ಯಾವುದೇ ಕೃಷಿ ಪರಿಕರ ರಸಗೊಬ್ಬರದ ಕೃತಕ ಅಭಾವ ಸೃಷ್ಠಿಯಾದಲ್ಲಿ ಕಾನೂನು ರೀತಿ ಕಠಿಣ ಕ್ರಮ ವಹಿಸಲಾಗುವುದು ಎಂದು ಸೂಚನೆ ನೀಡಲಾಗಿದೆ ಎಂದರು.
₹ 97.77 ಕೋಟಿ ಬೆಳೆ ವಿಮೆ ಪರಿಹಾರ
2024-25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ವಿಜಯಪುರ ಜಿಲ್ಲೆಯಲ್ಲಿ ವಿವಿಧ ಬೆಳೆಗೆ ಬೆಳೆ ವಿಮೆ ಮಾಡಿಸಿದ ರೈತರಲ್ಲಿ 9302 ರೈತರಿಗೆ ₹20.57 ಕೋಟಿ ಸ್ಥಳೀಯ ವಿಪತ್ತುನಡಿ ಬೆಳೆ ವಿಮೆ ಪರಿಹಾರ ರೈತರ ಖಾತೆಗೆ ಜಮೆಯಾಗಿದೆ. ಇನ್ನುಳಿದಂತೆ 42045 ರೈತರಿಗೆ ₹77.20 ಕೋಟಿ ಬೆಳೆ ಕಟಾವು ಪ್ರಯೋಗದ ಪ್ರಕಾರ ಬೆಳೆ ವಿಮೆ ಪರಿಹಾರ ರೈತರ ಖಾತೆಗೆ ಜಮೆಯಾಗಿದೆ. ಒಟ್ಟಾರೆಯಾಗಿ 51347 ರೈತರಿಗೆ ₹ 97.77 ಕೋಟಿ ಬೆಳೆ ವಿಮೆ ಪರಿಹಾರ ರೈತರ ಖಾತೆಗೆ ಜಮೆಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ರೂಪ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.