ADVERTISEMENT

ವಿಜಯಪುರ ಜಿಲ್ಲೆಗೆ ಅಡಿ ಇಟ್ಟ ಮುಂಗಾರು

​ಪ್ರಜಾವಾಣಿ ವಾರ್ತೆ
Published 3 ಜೂನ್ 2021, 17:04 IST
Last Updated 3 ಜೂನ್ 2021, 17:04 IST
ವಿಜಯಪುರದಲ್ಲಿ ಗುರುವಾರ ದ್ರಾಕ್ಷಿ ಪಡದಲ್ಲಿ ನಿಂತಿರುವ ಮಳೆ ನೀರು
ವಿಜಯಪುರದಲ್ಲಿ ಗುರುವಾರ ದ್ರಾಕ್ಷಿ ಪಡದಲ್ಲಿ ನಿಂತಿರುವ ಮಳೆ ನೀರು   

ವಿಜಯಪುರ: ‘ಜೂನ್‌ ಸಾತ್‌’ಗೆ ಇನ್ನೂ ನಾಲ್ಕು ದಿನ ಇರುವಾಗಲೇ ಜಿಲ್ಲೆಗೆ ಮುಂಗಾರು ಮಳೆ ಅಡಿ ಇಟ್ಟಿದೆ. ಬುಧವಾರ ರಾತ್ರಿ ಆರಂಭವಾದ ಮಳೆ ಗುರುವಾರ ಬೆಳಿಗ್ಗೆ ವರೆಗೆ ಬಿಟ್ಟೂ ಬಿಡದೆ ಸುರಿದಿದೆ. ಬಳಿಕ ಮತ್ತೆ ಗುರುವಾರ ಸಂಜೆ ಆರಂಭವಾದ ತುಂತುರು ಮಳೆ ರಾತ್ರಿ ಪೂರ್ತಿ ಸುರಿಯುವ ಮೂಲಕ ಭೂಮಿಯನ್ನು ತಂಪಾಗಿಸಿತು.

ವಿಜಯಪುರ, ದೇವರಹಿಪ್ಪರಗಿ, ಸಿಂದಗಿ, ಇಂಡಿ, ತಾಂಬಾ, ಆಲಮೇಲ, ಕಲಕೇರಿ, ನಾಲತವಾಡ, ತಾಳಿಕೋಟೆ, ಬಸವನ ಬಾಗೇವಾಡಿ, ಮನಗೂಳಿ, ಆಲಮಟ್ಟಿ, ನಿಡಗುಂದಿ, ಕೊಲ್ಹಾರ, ತಿಕೋಟಾ, ಬಬಲೇಶ್ವರ ಸೇರಿದಂತೆ ಬಹುತೇಕ ಜಿಲ್ಲೆಯಾದ್ಯಂತ ಗುಡುಗು, ಸಿಡಿಲು ಮತ್ತು ಶೀತಗಾಳಿಯೊಂದಿಗೆ ‘ರೋಹಿಣಿ’ ಮಳೆಯಾಗುತ್ತಿದ್ದು, ರೈತರ ಮೊಗದಲ್ಲಿ ಆಸೆ ಚಿಗುರಿಸಿದೆ.

ಬಬಲೇಶ್ವರ ತಾಲ್ಲೂಕಿನ ಸಾರವಾಡ ಗ್ರಾಮದ ಬಳಿ ಡೋಣಿ ನದಿ ನೀರು ರೈತರ ಜಮೀನುಗಳಿಗೆ ನುಗ್ಗಿದೆ. ದ್ರಾಕ್ಷಿ ಪಡಗಳಲ್ಲಿ ಮಳೆ ನೀರು ನಿಂತಿದ್ದ ದೃಶ್ಯ ಗುರುವಾರ ಕಂಡುಬಂದಿತು.

ADVERTISEMENT

ಕೋವಿಡ್‌ ಸಂಕಷ್ಟದ ನಡುವೆಯೂ ಈಗಾಗಲೇ ಹೊಲವನ್ನು ಸಜ್ಜುಗೊಳಿಸಿಕೊಂಡಿದ್ದ ರೈತರಿಗೆ ಹೆಸರು ಬಿತ್ತನೆಗೆ ಅನುಕೂಲವಾಗಿದೆ. ಈ ವಾರದಿಂದ ತೊಗರಿ, ಸಜ್ಜೆ, ಮೆಕ್ಕೆಜೋಳ ಬಿತ್ತನೆ ಆರಂಭವಾಗಲಿದೆ.

ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಗೆ ಈಗಾಗಲೇ ಕೃಷಿ ಇಲಾಖೆ ಸಿದ್ಧತೆ ಕೈಗೊಂಡಿದೆ. ಜಿಲ್ಲೆಯಲ್ಲಿ ಈ ಬಾರಿ 4.85 ಲಕ್ಷ ಹೆಕ್ಟೇರ್‌ ತೊಗರಿ, 60 ಸಾವಿರ ಹೆಕ್ಟೇರ್‌ ಮೆಕ್ಕೆಜೋಳ, 20 ಸಾವಿರ ಸಜ್ಜೆ, 3 ಸಾವಿರ ಹೆಸರು ಬಿತ್ತನೆ ಗುರಿ ಇದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ವಿಲಿಯಮ್ಸ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.