
ವಿಜಯಪುರ: ಮಕ್ಕಳು ಆಂಗ್ಲ ಮಾಧ್ಯಮದಲ್ಲಿ ಓದಿದರೂ ಅದನ್ನು ವ್ಯವಹಾರಿಕ ಭಾಷೆಯಾಗಿ ಮತ್ತು ಬದುಕು ರೂಪಿಸುವ ಭಾಷೆಯಾಗಿ ಪರಿಗಣಿಸಬೇಕೇ ವಿನ:ಹೃದಯದ ಭಾವನೆಗಳನ್ನು ಅರ್ಥೈಸಲು ಎಂದಿಗೂ ಮಾತೃಭಾಷೆಯೇ ಶ್ರೇಷ್ಠ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ ಅಭಿಪ್ರಾಯಪಟ್ಟರು.
ನಗರದ ಹೊರವಲಯದ ಇಟ್ಟಂಗಿಹಾಳ ರಸ್ತೆಯಲ್ಲಿರುವ ವೇದ ಅಕಾಡೆಮಿಯಲ್ಲಿ ಶನಿವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವದಲ್ಲಿ ನಾಡದೇವಿ ಭುವನೇಶ್ವರಿಗೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಶ್ರೀ ಸಿದ್ಧೇಶ್ವರ ಸಂಸ್ಥೆಯ ನಿರ್ದೇಶಕ ರಮೇಶ ಬಿದನೂರ ಮಾತನಾಡಿ, ಗುರು ಶಿಷ್ಯ ಪರಂಪರೆಯ ಬಗ್ಗೆ ಮಕ್ಕಳಿಗೆ ತಿಳಿಹೇಳಿ ಪೂಜ್ಯ ಸಂಗನಬಸವ ಸ್ವಾಮಿಗಳ ಕನ್ನಡಾಭಿಮಾನ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆ ಜೊತೆಗೆ ವಚನ ಪಿತಾಮಹ ಫ.ಗು. ಹಳಕಟ್ಟಿಯವರ ಸೇವೆಯನ್ನು ನೆನೆದು ಕನ್ನಡ ಸ್ವಾರಸ್ವತ ಲೋಕಕ್ಕೆ ಅವರ ಕೊಡುಗೆಯನ್ನು ಸ್ಮರಿಸಿದರು.
ನಿವೃತ್ತ ಉಪ ಪೊಲೀಸ್‌ವರಿಷ್ಠಾಧಿಕಾರಿ ಬಿ.ಆರ್.ಚೌಕಿಮಠ, ಕನ್ನಡ ನಾಡಿಗೆ ದಕ್ಷ ಪೊಲೀಸ್ ಅಧಿಕಾರಿಗಳ ಸೇವೆಯನ್ನು ಸ್ಮರಿಸಿ ವಿದ್ಯಾರ್ಥಿಗಳು ಅಂತಹ ವ್ಯಕ್ತಿಗಳಿಂದ ಪ್ರೇರಣೆ ಪಡೆದು ಸತತ ಪರಿಶ್ರಮದಿಂದ ಜ್ಞಾನಬಲದಂತೆ ದೇಹಬಲವನ್ನು ಪಡೆದು ಸದೃಡವಾಗಿದ್ದು ಸಮಾಜ ಸೇವೆಯನ್ನು ಮಾಡಬೇಕು ಎಂದರು.
ವೇದ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಡಾ.ಶಿವಾನಂದ ಕೆಲೂರ, ಕನ್ನಡ ಸಂಸ್ಕೃತಿ, ಕಲೆ, ಸಾಹಿತ್ಯ, ಸಂಗೀತ ಮತ್ತು ಇತಿಹಾಸ ಭವ್ಯವಾದದು ಎಂದು ಹೇಳಿದರು.
ವೇದ ಸಮೂಹ ಸಂಸ್ಥೆಗಳ ಉಪಾಧ್ಯಕ್ಷ ದಯಾನಂದ ಕೆಲೂರ, ಕಾರ್ಯದರ್ಶಿ ನಂದಬಸಪ್ಪ ಯರನಾಳ, ಪ್ರಾಂಶುಪಾಲ ಮಧ್ವಪ್ರಸಾದ ಜಿ. ಕೆ., ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ರಶ್ಮಿ ಕವಟಗಿಮಠ, ವಿದ್ಯಾಶ್ರೀ ಪೋತೆ, ಕನ್ನಡ ವಿಭಾಗದ ಮುಖ್ಯಸ್ಥರಾದ ಕವಿತಾ ಬಿರಾದಾರ ಉಪಸ್ಥಿತರಿದ್ದರು.
ಕನ್ನಡ ವಿಭಾಗದ ಹಿರಿಯ ಶಿಕ್ಷಕರಾದ ಮಧುಶ್ರೀ ಕುಲಕರ್ಣಿ ಹಾಗೂ ಗುರುನಾಥ ಚಲವಾದಿ ನೇತೃತ್ವದಲ್ಲಿ ಮಕ್ಕಳಿಂದ ಕನ್ನಡದ ಹಿರಿಮೆ ಸಾರುವ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.