
ಸಿಂದಗಿ: ಸಿಂದಗಿಯ ಹೆಮ್ಮೆಯ ಯುವಕ ಹಿತೇಶ್ ಹಿರೇಮಠ ಅವರು ನಾಯಕನಾಗಿ ನಟಿಸಿರುವ ’ಮೃತ್ಯುಂಜಯ’ ಕನ್ನಡ ಚಲನಚಿತ್ರ ನವೆಂಬರ್ 28 ರಂದು ಸಿಂದಗಿ ಪಟ್ಟಣ ಒಳಗೊಂಡು ಉತ್ತರಕರ್ನಾಟಕ 13 ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಪ್ರೇಕ್ಷಕರು ಚಿತ್ರಮಂದಿರಗಳಿಗೆ ಹೋಗಿ ಚಿತ್ರ ನೋಡಿ ಪ್ರೋತ್ಸಾಹಿಸಬೇಕು ಎಂದು ಮತಕ್ಷೇತ್ರದ ಶಾಸಕ, ಪಟ್ಟಣದ ವಿನಾಯಕ ಚಿತ್ರಮಂದಿರದ ಮಾಲಿಕ ಅಶೋಕ ಮನಗೂಳಿ ಮನವಿ ಮಾಡಿಕೊಂಡರು.
ಪಟ್ಟಣದ ಸಂಗಮ ಸಭಾಭವನದಲ್ಲಿ ಗುರುವಾರ ಏರ್ಪಡಿಸಿದ್ದ ಸಭೆಯಲ್ಲಿ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು.
ಉತ್ತರಕರ್ನಾಟಕ ಭಾಗದ ಸಿಂದಗಿಯ ಯುವ ನಟ ಹಿತೇಶ್ ಹಿರೇಮಠ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಇದು ಅವರ ಮೊದಲನೆಯ ಚಿತ್ರವಾಗಿದೆ. ಇನ್ನೂ ಉತ್ತಮ ಸಂದೇಶ ಸಾರುವ ಚಿತ್ರಗಳನ್ನು ನಿರ್ಮಾಣ ಮಾಡಲಿ ಎಂದು ಆಶಿಸಿದರು.
ಆಲಮೇಲ ಸಂಸ್ಥಾನಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಉತ್ತರಕರ್ನಾಟಕ ಭಾಗ ಕನ್ನಡ ಚಿತ್ರರಂಗ ಬೆಳೆಸುತ್ತಿದೆ. ಆದರೆ, ಉತ್ತರಕರ್ನಾಟಕ ಚಿತ್ರನಟರನ್ನು ಬೆಂಗಳೂರು ಭಾಗದಲ್ಲಿ ಬೆಳೆಸುತ್ತಿಲ್ಲ ಎಂಬುದು ಅತ್ಯಂತ ವಿಷಾದಕರ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚಿತ್ರ ನಿರ್ದೇಶಕ ಎಸ್.ಎಸ್.ಸಜ್ಜನ ಮಾತನಾಡಿ, ’ಮೃತ್ಯುಂಜಯ’ ಚಿತ್ರ 198 ಗಂಟೆಗಳ ಕಾಲ ಚಿತ್ರೀಕರಣ ಮಾಡುವ ಮೂಲಕ ದಾಖಲೆ ಮಾಡಿದೆ. ನಾನು ಈಗಾಗಲೇ ಎರಡು ತೆಲುಗು ಚಿತ್ರಗಳು ಒಂದು ಕನ್ನಡ ಚಿತ್ರವನ್ನು ನಿರ್ದೇಶನ ಮಾಡಿರುವೆ. ನಾನೂ ಕೂಡ ಉತ್ತರಕರ್ನಾಟಕದವನು ಎಂದರು.
ನಾಯಕ ನಟ ಹಿತೇಶ್ ಹಿರೇಮಠ ಮಾತನಾಡಿ, ನವೆಂಬರ್ 28 ರಂದು ಉತ್ತರಕರ್ನಾಟಕ ಪ್ರಮುಖ ಜಿಲ್ಲೆಗಳಲ್ಲಿ ಚಿತ್ರ ಬಿಡುಗಡೆಗೊಳ್ಳಲಿದೆ. ಎರಡನೆಯ ಹಂತದಲ್ಲಿ ಬೆಂಗಳೂರು ಭಾಗದಲ್ಲಿ ಬಿಡುಗಡೆಗೊಳಿಸಲಾಗುವುದು. ಕುಟುಂಬ ಸಮೇತ ನೋಡುವ ಚಿತ್ರವಾಗಿದೆ ಎಂದು ತಿಳಿಸಿದರು.
ಚಿತ್ರ ನಿರ್ಮಾಪಕಿ ಶೈಲಜಾ ಪ್ರಕಾಶ, ಯಂಕಂಚಿ ಮಠದ ಅಭಿನವ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಹೈಕೋರ್ಟ್ ವಕೀಲ ಎನ್.ಎಸ್.ಹಿರೇಮಠ, ವರ್ತಕರ ಸಂಘದ ಅಧ್ಯಕ್ಷ ಅಶೋಕ ವಾರದ, ವಕೀಲರ ಸಂಘದ ಅಧ್ಯಕ್ಷ ಎಸ್.ಬಿ.ಪಾಟೀಲ, ವಕೀಲರಾದ ಬಿ.ಜಿ.ನೆಲ್ಲಗಿ, ಶಿವಾನಂದ ಪಾಟೀಲ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಶ ಪೂಜಾರಿ, ಶ್ರೀಮಂತ ಮಲ್ಲೇದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.