ಮುದ್ದೇಬಿಹಾಳ : ಎಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದ್ದು ಮನೆ ಮನಗಳಲ್ಲಿ ಬೆಳಕಿನ ಹಬ್ಬದ ಸಡಗರ ತುಂಬಿಕೊಂಡಿದೆ. ಪಟ್ಟಣವೂ ಸೇರಿದಂತೆ ದೀಪಾವಳಿ ಹಬ್ಬದ ಅಂಗವಾಗಿ ಲಕ್ಷ್ಮಿ ಪೂಜೆ ಸೋಮವಾರ ಸಂಜೆ ಮಾಡಿದರೆ, ಕೆಲವಡೆ ಮಂಗಳವಾರವೂ ಪೂಜೆ ನಡೆಸಲು ಸಿದ್ಧತೆ ನಡೆಸಿದ್ದಾರೆ.
ಬಾಳೇಹಣ್ಣು ₹ 60 ಡಜನ್, ₹ 50ಕ್ಕೆ ಐದು ನಿಂಬೆ ಹಣ್ಣು, ದಾಳಿಂಬೆ, ಕಿತ್ತಳೆ, ಸೀತಾಫಲ, ಸೇಬು, ಬಳೂಲಕಾಯಿ ತಲಾ ₹ 100ಕ್ಕೆ ಮಾರಾಟ ಮಾಡುತ್ತಿರುವುದು ಕಂಡು ಬಂದಿತು. ಚೆಂಡು ಹೂ ಕೆಜಿಗೆ ಬೆಳಿಗ್ಗೆ ₹ 80 ಇದ್ದ ದರ ಸಂಜೆಯ ವೇಳೆಗೆ ₹ 30-40ರಂತೆ ಮಾರಾಟ ಆಗಿದ್ದು ಕಂಡು ಬಂದಿತು.
ಅತಿವೃಷ್ಟಿ ಆಗಿದ್ದರೂ ರೈತರು ಆ ನೋವನ್ನು ಮರೆತು ದೀಪಾವಳಿ ಹಬ್ಬದ ಸಡಗರಕ್ಕೆ ನಗರದ ಜನತೆಯ ಜೊತೆಗೆ ಪೂಜಾ ಸಾಮಗ್ರಿಗಳ ಮಾರಾಟಕ್ಕೆ ಜೊತೆಯಾಗಿದ್ದು ವಿಶೇಷವಾಗಿತ್ತು. ಬಾಳೆ ಕಂಬಗಳನ್ನು ಜೋಡಿಗೆ ₹ 50 ರಿಂದ 200ವರೆಗೂ, ತೆಂಗಿನ ಗರಿ ₹ 100ಕ್ಕೆ ಎರಡು, ಕಬ್ಬಿನ ಗಿಡಗಳು ₹ 40 ಎರಡು ಮಾರಾಟ ಆಗುತ್ತಿರುವುದು ಕಂಡುಬಂದಿತು.
ಕುಂಬಳಕಾಯಿ ಗಾತ್ರದ ಆಧಾರದಲ್ಲಿ ಮಾರಾಟ ಮಾಡಿದ್ದು ಕಂಡು ಬಂದರೆ ಥರಹೇವಾರಿ ಪ್ಲಾಸ್ಟಿಕ್ ಹೂವುಗಳ ಮಾರಾಟ ಜೋರಾಗಿತ್ತು. ಹೂವುಗಳು, ಹಾರದ ದರವೂ ಗಗನಕ್ಕೇರಿತ್ತು. ಮುದ್ದೇಬಿಹಾಳದ ಬಸವೇಶ್ವರ ವೃತ್ತದ ಆಸುಪಾಸು, ಹಳೇ ತಹಶೀಲ್ದಾರ್ ಕಚೇರಿಯವರೆಗೂ ವ್ಯಾಪಾರಿಗಳಿಗೆ ದೀಪಾವಳಿ ಹಬ್ಬದ ಸಾಮಗ್ರಿ ಮಾರಾಟಕ್ಕೆ ಪುರಸಭೆಯವರು, ಪೊಲೀಸ್ ಇಲಾಖೆಯಿಂದ ಅನುಮತಿ ನೀಡಲಾಗಿತ್ತು. ಪೊಲೀಸರು ಬಸವೇಶ್ವರ ವೃತ್ತದಲ್ಲಿ ನಿಂತು ಸಂಚಾರ ದಟ್ಟಣೆಯನ್ನು ನಿಯಂತ್ರಿಸಿದರು. ಪುರಸಭೆಯ ಪೌರಕಾರ್ಮಿಕರು ನಗರದ ಸ್ವಚ್ಛತೆಗೆ ಶ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.