
ಮುದ್ದೇಬಿಹಾಳ: ಬಹುಹಳ್ಳಿ ಕುಡಿವ ನೀರಿನ ಯೋಜನೆಯ ಸ್ಥಾವರಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ವೇತನ ಕಳೆದ ಮೂರು ತಿಂಗಳಿನಿಂದ ಪಾವತಿಯಾಗದ ಕಾರಣ ಸೋಮವಾರದಿಂದಲೇ ನೀರು ಪೂರೈಕೆ ಕಾರ್ಯ ಸ್ಥಗಿತಗೊಳಿಸಿರುವ ಕಾರ್ಮಿಕರು ಹೋರಾಟಕ್ಕೆ ಆರಂಭಿಸಿದ್ದು, ಮತಕ್ಷೇತ್ರದ 154 ಹಳ್ಳಿಗಳಿಗೆ ಕುಡಿವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಬರುವ 11 ಬಹುಹಳ್ಳಿ ಕುಡಿವ ನೀರಿನ ಯೋಜನೆಯ ಸ್ಥಾವರಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರ ವೇತನ ಸರ್ಕಾರದಿಂದ ಮೂರು ತಿಂಗಳಿನಿಂದ ಪಾವತಿಯಾಗಿಲ್ಲ. ಜಿಲ್ಲಾ ಪಂಚಾಯಿತಿ ಸಿಇಒ ಗಮನಕ್ಕೆ ಈ ವಿಷಯ ಇದ್ದರೂ ಅವರು ಅಸಹಾಯಕರಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ಪತ್ರ ಬರೆದ ಗುತ್ತಿಗೆದಾರರು: ಬಹುಹಳ್ಳಿ ಕುಡಿವ ನೀರು ಯೋಜನೆಯ ಕಾರ್ಯಾಚರಣೆ ಮತ್ತು ನಿರ್ವಹಣೆಯ ಕಾಮಗಾರಿಗಳ ಬಾಕಿ ಮೊತ್ತ ಸಂದಾಯ ಮಾಡುವಂತೆ ವಿಜಯಪುರ ಎಂ.ವಿ.ಎಸ್ ಓ ಅಂಡ್ ಎಂ. ಸಂಘದ ಗುತ್ತಿಗೆದಾರರು ವಿಜಯಪುರದ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರಗೆ ಅ.13 ರಂದೇ ಪತ್ರ ಬರೆದಿದ್ದರು. ಅದರಲ್ಲಿ 26 ತಿಂಗಳಿಂದ ಸುಮಾರು ₹ 30 ಕೋಟಿಯಷ್ಟು ಬಾಕಿ ಇದ್ದು ಅದನ್ನು ಪಾವತಿಸಿಲ್ಲ ಎಂದು ತಿಳಿಸಲಾಗಿದೆ.
ಇದರಿಂದ ನಿತ್ಯ ನೀರು ಶುದ್ದೀಕರಣಕ್ಕೆ ಬೇಕಾಗಿರುವ ಸಾಮಗ್ರಿಗಳು ಖರೀದಿ ಮಾಡಲು ಆಗುತ್ತಿಲ್ಲ. ಸಿಬ್ಬಂದಿ ವೇತನ, ಇಎಸ್‌ಐ, ಇಪಿಎಫ್ ಸಂದಾಯ ಮಾಡಲು ಕಷ್ಟವಾಗಿದೆ. ದೀಪಾವಳಿ ಹಬ್ಬದ ನಂತರ ನೀರು ಪೂರೈಕೆ ಸ್ಥಗಿತಗೊಳಿಸುವ ದಿನ ನಿಗದಿ ಮಾಡಲಾಗಿತ್ತು. ಈವರೆಗೂ ಬಿಲ್ ಪಾವತಿಯಾಗಿಲ್ಲ ಎಂದು ಈ ಯೋಜನೆಯ ಮೇಲ್ವಿಚಾರಣೆ, ನಿರ್ವಹಣೆ ಕಾರ್ಯ ಕೈಗೊಂಡಿರುವ ಗುತ್ತಿಗೆದಾರರು ಪತ್ರದಲ್ಲಿ ತಿಳಿಸಿದ್ದಾರೆ.
ಎಲ್ಲೆಲ್ಲಿ ವ್ಯತ್ಯಯ: ಮುದ್ದೇಬಿಹಾಳ ಮತಕ್ಷೇತ್ರದ ಮುದೂರ 18,ಬಸರಕೋಡ 22,ವಡವಡಗಿ 5,ಯರಝರಿ 5, ತಂಗಡಗಿ 5, ಧನ್ನೂರ ಅಯ್ಯನಗುಡಿ 18, ಕುಂಟೋಜಿ 17,ಮೂಕಿಹಾಳ 7,ಪೀರಾಪೂರ 17, ಅಡವಿ ಸೋಮನಾಳ 34, ಬ.ಸಾಲವಾಡಗಿ 6 ಸೇರಿ ಒಟ್ಟು 154 ಹಳ್ಳಿಗಳಿಗೆ ನೀರು ಪೂರೈಕೆಯಲ್ಲಿ ತೊಂದರೆಯಾಗುವ ಸಾಧ್ಯತೆ ಇದೆ.
 
ವಿಜಯಪುರ ಜಿಲ್ಲೆಯಾದ್ಯಂತ ಬಹುಹಳ್ಳಿ ಕುಡಿವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ. ನಾವು ಕಾರ್ಮಿಕರಿಗೆ ಕೆಲಸ ಮಾಡಿ, ಮಾಡಬೇಡಿ ಎಂದು ತಿಳಿಸಿಲ್ಲ. ಅವರಾಗಿ ವೇತನ ಪಾವತಿಯಾಗಿಲ್ಲ ಎಂದು ಮುಷ್ಕರ ಆರಂಭಿಸಿದ್ದಾರೆ. ಜಿಲ್ಲೆಯ 40ಕ್ಕೂ ಹೆಚ್ಚು ಸ್ಥಾವರಗಳಿಂದ ನೀರು ಪೂರೈಕೆ ಬಂದ್ ಆಗಲಿದೆ ಎಂದು ಬಹುಹಳ್ಳಿ ಕುಡಿವ ನೀರು ಪೂರೈಕೆ ನಿರ್ವಹಣೆ ಹಾಗೂ ಮೇಲ್ವಿಚಾರಣೆ ಗುತ್ತಿಗೆದಾರರ ಸಂಘದ ಸದಸ್ಯರು ತಿಳಿಸಿದ್ದಾರೆ.
ನಮಗೆ ಕಳೆದ ಮೂರು ತಿಂಗಳಿಂದ ವೇತನ ಕೊಟ್ಟಿಲ್ಲ. ಅಲ್ಪ ವೇತನದಲ್ಲಿಯೇ ನಮ್ಮ ಮನೆಯ ದೈನಂದಿನ ಖರ್ಚು ಮಕ್ಕಳ ಶಿಕ್ಷಣ ಆರೋಗ್ಯದ ಸಮಸ್ಯೆಗಳಿಗೆ ಮತ್ತೊಬ್ಬರ ಬಳಿ ಸಾಲ ಮಾಡಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.–ಮಲ್ಲಿಕಾರ್ಜುನ ಹಿರೇಮಠ, ಮುಖಂಡ ಎಐಯುಟಿಯುಸಿ ಸಂಘಟನೆ
ಬಹುಹಳ್ಳಿ ಕುಡಿವ ನೀರಿನ ಸ್ಥಾವರಗಳಿಂದ ಇಂದಿನಿಂದ ನೀರು ಪೂರೈಕೆ ವ್ಯತ್ಯಯವಾಗಲಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇನ್ನಿತರ ಲಭ್ಯ ಜಲಮೂಲಗಳನ್ನು ಬಳಸಿ ಗ್ರಾಮೀಣ ಜನರಿಗೆ ಕುಡಿವ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇವೆ.-ವೆಂಕಟೇಶ ವಂದಾಲ, ಕಾರ್ಯನಿರ್ವಾಹಕ ಅಧಿಕಾರಿತಾ.ಪಂ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.